ಕೆ.ಆರ್.ಪೇಟೆ: ಬೆಂಗಳೂರಿನ ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದಲ್ಲಿ ನಡೆಯುವ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಅನುಕೂಲವಾಗಲೆಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಅವರು 1ಲಕ್ಷ ರೂಗಳನ್ನು ದೇಣಿಗೆಯಾಗಿ ನೀಡುವ ಮೂಲಕ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧಿಪತಿ ಡಾ. ಶ್ರೀ ನಿಶ್ಚಲಾನಂದನಾಥ ಮಹಾಸ್ವಾಮೀಜಿಗಳಿಂದ ಆಶೀರ್ವಾದ ಪಡೆದರು.
ಶ್ರೀ ಮಲ್ಲಿಕಾರ್ಜುನ್ ಚಾರಿಟೇಬಲ್ ಟ್ರಸ್ಟಿನ ಪರವಾಗಿ 1ಲಕ್ಷ ರೂಪಾಯಿಗಳ ಚೆಕ್ ಅನ್ನು ಶ್ರೀಗಳ ಅಮೃತ ಹಸ್ತಕ್ಕೆ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಅವರು ಹಸ್ತಾಂತರ ಮಾಡಿ ಶ್ರೀಗಳು ಪೂರ್ವಾಶ್ರಮದಲ್ಲಿ ಅಪರ ಜಿಲ್ಲಾಧಿಕಾರಿಯಾಗಿ, ಎಸಿಯಾಗಿ, ತಹಸೀಲ್ದಾರ್ ಆಗಿ ಕೆ.ಆರ್.ಪೇಟೆ ತಾಲ್ಲೂಕು ಮತ್ತು ಮಂಡ್ಯ ಜಿಲ್ಲೆಯ ಅಭಿವೃದ್ಧಿ ಮಾಡಿರುವ ಜನಪರ ಕಾರ್ಯಕ್ರಮಗಳನ್ನು ಸ್ಮರಿಸಿದರು.
ಇದೇ ರೀತಿ ಸನ್ಯಾಸ ಧೀಕ್ಷೆ ಪಡೆದುಕೊಂಡ ನಂತರವೂ ತಮ್ಮ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಿಕೊಂಡು ವಿಶ್ವ ಒಕ್ಕಲಿಗರ ಮಠದಿಂದ ದಾನಿಗಳ ಸಹಕಾರ ಪಡೆದುಕೊಂಡು ಮಾಡುತ್ತಿರುವ ಶ್ರೀ ನಿಶ್ಚಲಾನಂದನಾಥಸ್ವಾಮೀಜಿಯವರಿಗೆ ಅಳಿಲು ಸೇವೆ ಸಲ್ಲಿಸಿದ್ದೇನೆ ಮುಂದಿನ ದಿನ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಆರ್.ಟಿ.ಓ ಮಲ್ಲಿಕಾರ್ಜುನ್ ತಿಳಿಸಿದರು.

ಶ್ರೀ ಮಲ್ಲಿಕಾರ್ಜುನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡಲಾದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ನಿಶ್ಚಲಾನಂದನಾಥ ಮಹಾಸ್ವಾಮೀಜಿ ಅವರು ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್ ಅವರು ತಾಲ್ಲೂಕಿನಲ್ಲಿ ಅಪಾರವಾದ ಸಮಾಜ ಸೇವೆ ಸಲ್ಲಿಸುವ ಮೂಲಕ ನೊಂದವರಿಗೆ ಧೀನ-ದಲಿತರಿಗೆ ಬಡವರಿಗೆ, ಶೋಷಿತರಿಗೆ ತಮ್ಮ ಶಕ್ತಿ ಮೀರಿ ನೆರವಿನ ಹಸ್ತ ಚಾಚುತ್ತಿದ್ದಾರೆ. ಇದರ ಪೂರ್ಣ ಮಾಹಿತಿಯನ್ನು ಗಮನಿಸಿದ್ದೇನೆ. ಮುಂದಿನ ದಿನಗಳಲ್ಲಿ ಇಡೀ ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಶ್ರಮಿಸುವ ಅವಕಾಶವನ್ನು ತಾಲ್ಲೂಕಿನ ಜನತೆ ನೀಡಲಿ ಎಂದು ಆಶಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕಿನ ಹಿರಿಯ ಪತ್ರಕರ್ತರಾದ ಬಳ್ಳೇಕೆರೆ ಮಂಜುನಾಥ್, ಹರಿಚರಣ್ತಿಲಕ್, ಕೆ.ಆರ್.ನೀಲಕಂಠ, ಅಗ್ರಹಾರಬಾಚಹಳ್ಳಿ ಶ್ರೀನಿವಾಸ್, ಆರ್.ಟಿ.ಓ.ಮಲ್ಲಿಕಾರ್ಜುನ್ ಆಪ್ತ ಸಹಾಯಕ ಗಂಜಿಗೆರೆ ಮಹೇಶ್, ರಂಗಭೂಮಿ ಕಲಾವಿದ ಹೊಸಹೊಳಲು ರಘು, ಕಾಮನಹಳ್ಳಿ ಮಂಜುನಾಥ್ ಹಾಗೂ ಮಲ್ಲಿಕಾರ್ಜುನ್ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
