ಕೋಪನ್ಹೆಗನ್: ದೀರ್ಘ ದೃಷ್ಟಿ (ಪ್ರೆಸ್ಬಯೋಪಿಯಾ) ಹೊಂದಿರುವವರಿಗೆ ಕನ್ನಡಕಗಳ ಅವಶ್ಯಕತೆಯನ್ನು ಕಡಿಮೆ ಮಾಡುವ ಹೊಸ ಕಣ್ಣಿನ ಹನಿಗಳನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.
ಯುರೋಪಿಯನ್ ಸೊಸೈಟಿ ಆಫ್ ಕ್ಯಾಟರಾಕ್ಟ್ ಅಂಡ್ ರಿಫ್ರ್ಯಾಕ್ಟಿವ್ ಸರ್ಜನ್ಸ್ (ESCRS) ಸಭೆಯಲ್ಲಿ ಪ್ರಸ್ತುತಪಡಿಸಲಾದ ಅಧ್ಯಯನ ಪ್ರಕಾರ, ಈ ಹನಿಗಳನ್ನು ಬಳಸಿದವರು ಕಣ್ಣಿನ ಪರೀಕ್ಷಾ ಪಟ್ಟಿಯ ಹೆಚ್ಚುವರಿ ಸಾಲುಗಳನ್ನು ಓದಲು ಸಾಧ್ಯವಾಯಿತು ಮತ್ತು ಎರಡು ವರ್ಷಗಳ ಕಾಲ ದೃಷ್ಟಿ ಸುಧಾರಣೆ ಮುಂದುವರಿದಿದೆ.
ಸಾಮಾನ್ಯವಾಗಿ 40 ವರ್ಷ ಮೇಲ್ಪಟ್ಟವರಲ್ಲಿ ಕಾಣಿಸಿಕೊಳ್ಳುವ ಪ್ರೆಸ್ಬಯೋಪಿಯಾ ಸಮಸ್ಯೆಯಲ್ಲಿ ಕಣ್ಣಿನ ಮಸೂರವು ಹತ್ತಿರದ ವಸ್ತುಗಳ ಮೇಲೆ ಕೇಂದ್ರೀಕರಿಸಲು ಅಸಮರ್ಥವಾಗುತ್ತದೆ. ಇದನ್ನು ಪರಿಹರಿಸಲು ಕನ್ನಡಕಗಳು ಅಥವಾ ಶಸ್ತ್ರಚಿಕಿತ್ಸೆ ಬಳಸಲಾಗುತ್ತಿತ್ತು. ಆದರೆ, ಹೊಸ ಹನಿಗಳು ಸರಳ ಮತ್ತು ಪರಿಣಾಮಕಾರಿ ಪರಿಹಾರವಾಗಿ ಹೊರಹೊಮ್ಮುತ್ತಿವೆ.
ದಿ ಗಾರ್ಡಿಯನ್ ವರದಿ ಪ್ರಕಾರ, ಪೈಲೋಕಾರ್ಪೈನ್ ಮತ್ತು ಡಿಕ್ಲೋಫೆನಾಕ್ ಹೊಂದಿರುವ ಈ ಹನಿಗಳನ್ನು ದಿನಕ್ಕೆ ಎರಡು ಬಾರಿ ಬಳಸಿದ 766 ಜನರ ಮೇಲೆ ಅಧ್ಯಯನ ನಡೆಸಲಾಗಿದೆ. ಭಾಗವಹಿಸುವವರನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿತ್ತು, ಪ್ರತಿಯೊಂದರಲ್ಲಿ ಡಿಕ್ಲೋಫೆನಾಕ್ ಪ್ರಮಾಣ ಸಮಾನವಾಗಿದ್ದು, ಪೈಲೋಕಾರ್ಪೈನ್ ಪ್ರಮಾಣದಲ್ಲಿ ವ್ಯತ್ಯಾಸ ಇತ್ತು.
ವಿಜ್ಞಾನಿಗಳು ಈ ಹನಿಗಳು ಕನ್ನಡಕಗಳ ಅವಶ್ಯಕತೆಯನ್ನು ಗಣನೀಯವಾಗಿ ಕಡಿಮೆ ಮಾಡಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
