ಚನ್ನರಾಯಪಟ್ಟಣ, ಏ.2: ಪಟ್ಟಣದ ಮಂಜುನಾಥನಗರದಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ, ಚೈತ್ರ ಮಾಸ ಪೌರ್ಣಮಿಯ ಅಂಗವಾಗಿ ಶ್ರೀ ಸಾಯಿನಾಥರ ಸನ್ನಿಧಿಯಲ್ಲಿ ವಿಶೇಷ ಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನದಾನ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು.
ಈ ಸಂದರ್ಭದಲ್ಲಿ ಶ್ರೀ ಸಾಯಿನಾಥರ ನವವಿಧ ಭಕ್ತಿ ಕುರುಹಿನ ಜ್ಞಾಪಕಾರ್ಥವಾಗಿ, ಶಿರಡಿಯ ಮೂಲ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಿದ ನಾಣ್ಯಗಳನ್ನು ಪ್ರಸಾದ ರೂಪದಲ್ಲಿ ಸರ್ವ ಭಕ್ತಾದಿಗಳಿಗೆ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಭಕ್ತರಿಗೂ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು.

ಮಂದಿರದ ಮುಖ್ಯಸ್ಥರು ಹಾಗೂ ಸಾಯಿ ಸೇವಕರಾದ ಕಾಚೇನಹಳ್ಳಿ ಪ್ರಭಾಕರ್ ಮಾತನಾಡಿ, “ಶ್ರೀ ಸಾಯಿನಾಥರ ಕೃಪೆ ಹಾಗೂ ಸಾಯಿ ಭಕ್ತರ ಸಹಕಾರದಿಂದ ಮಂಜುನಾಥನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಬಾಬಾರವರು ನೆಲೆಸಿ 7ನೇ ವರ್ಷಕ್ಕೆ ಪಾದಾರ್ಪಣೆಗೊಂಡಿರುವುದು ಸಂತಸದ ಸಂಗತಿ. ಈ ಹಿನ್ನೆಲೆ ಚೈತ್ರ ಮಾಸ ಪೌರ್ಣಮಿಯಂದು ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು.
– ಮಂಜುನಾಥ್ ಐ ಕೆ
