ಕೆ.ಆರ್.ಪೇಟೆ, ಏ.11: ತಾಲೂಕಿನ ಕಸಬಾ ಹೋಬಳಿಯ ಅಗ್ರಹಾರಬಾಚಹಳ್ಳಿ ಗ್ರಾಮ ದೇವತೆ ಶ್ರೀ ಲಕ್ಷ್ಮಿದೇವಿ (ಬಾಚಳ್ಳಮ್ಮ) ಅಮ್ಮನವರ ಬ್ರಹ್ಮ ರಥೋತ್ಸವವು ಭಕ್ತಿಭಾವದ ನಡುವೆ ಅದ್ದೂರಿಯಾಗಿ ನಡೆಯಿತು.
ಗ್ರಾಮದ ಯಜಮಾನರುಗಳು ಸಾಂಪ್ರದಾಯಿಕ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಐದು ಅಂತಸ್ತಿನ ರಥವನ್ನು ಭಗವಾಧ್ವಜಗಳು, ಬಣ್ಣಬಣ್ಣದ ವಸ್ತ್ರಗಳು ಹಾಗೂ ವೈವಿಧ್ಯಮಯ ಹೂವುಗಳಿಂದ ಅಲಂಕರಿಸಲಾಗಿತ್ತು. ರಥದ ತುದಿಯಲ್ಲಿ ಪ್ರತಿಷ್ಠಾಪಿಸಲಾದ ಕಂಚಿನ ಕಳಶವು ವಿಶೇಷ ಆಕರ್ಷಣೆಯಾಗಿತ್ತು.
ಸುಮಾರು 40 ಅಡಿ ಎತ್ತರದ ಸರ್ವಾಲಂಕೃತ ರಥದಲ್ಲಿ ಶ್ರೀ ಲಕ್ಷ್ಮಿದೇವಿ ಅಮ್ಮನವರನ್ನು ಪ್ರತಿಷ್ಠಾಪಿಸಿ, ಭಕ್ತರು ಶ್ರದ್ಧಾಭಕ್ತಿಯಿಂದ ರಥವನ್ನು ಎಳೆದರು. “ಉಘೇ… ಉಘೇ… ಶ್ರೀ ಬಾಚಳ್ಳಮ್ಮನಿಗೆ ಉಘೇ…” ಎಂಬ ಘೋಷಣೆಗಳ ನಡುವೆ ಹಣ್ಣು-ಜವಣ ಎಸೆಯುತ್ತಾ ಭಕ್ತರು ತಮ್ಮ ಭಕ್ತಿ ವ್ಯಕ್ತಪಡಿಸಿದರು.

ರಥವು ಅರಳೀಕಟ್ಟೆ ಬಳಿಯಿಂದ ತಮಟೆ ಮತ್ತು ಮಂಗಳವಾದ್ಯದ ಸದ್ದಿನೊಂದಿಗೆ ಪ್ರಾರಂಭವಾಗಿ, ದೇವಾಲಯದ ಹಿಂಭಾಗದ ಬೀದಿಗಳು, ಸರ್ಕಾರಿ ಶಾಲೆಯ ಹಿಂಭಾಗ, ಹೊಲಗದ್ದೆಗಳ ಮಾರ್ಗವಾಗಿ ಬ್ರಾಹ್ಮಣರ ಬೀದಿ, ರಂಗದ ಬೀದಿ ಮೂಲಕ ಸಂಚರಿಸಿ ರಂಗಸ್ಥಳದಲ್ಲಿ ಸಂಪನ್ನಗೊಂಡಿತು.
ತಾಲೂಕಿನ ವಿವಿಧ ಗ್ರಾಮಗಳು ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಪುನೀತರಾದರು.

ರಥೋತ್ಸವದ ಅಂಗವಾಗಿ ರಂಗಕುಣಿತ, ಹೂವಿನ ತೇರು, ಸಿಡಿ, ಬಾಯಿಬೀಗ, ಕೊಂಡೋತ್ಸವ, ಎಡೆ-ಮಡೆ ಉತ್ಸವ, ಸಿಡಿಮದ್ದು ಪ್ರದರ್ಶನ, ಕಳಸ ಪ್ರದಾನ, ಸೋಮನಕುಣಿತ, ಕೋಲಾಟ ಸೇರಿದಂತೆ ಹಲವು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಆಗಮಿಸಿದ ಭಕ್ತರಿಗೆ ಅಗ್ರಹಾರಬಾಚಹಳ್ಳಿ ಗ್ರಾಮದ ಸರ್ಕಾರಿ ನೌಕರರ ಸಂಘದಿಂದ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
– ಶ್ರೀನಿವಾಸ್ ಆರ್.
