ರಾಮನಾಥಪುರ: ಕೇರಳಾಪುರ ಶ್ರೀ ಪ್ರಸನ್ನ ವೀರಭದ್ರೇಶ್ವರಸ್ವಾಮಿ ದೇವಸ್ಥಾನ ಜಾತ್ರೆ ಅಂಗವಾಗಿ ಮಹಾ ರಥೋತ್ಸವ ಸಂಭ್ರಮ
ರಾಮನಾಥಪುರ ಹೋಬಳಿ ಕೇರಳಾಪುರದಲ್ಲಿ ಪುರಾಣ ಪ್ರಸಿದ್ಧ ಶ್ರೀ ಪ್ರಸನ್ನ ವೀರಭದ್ರೇಶ್ವರಸ್ವಾಮಿ ದೇವಾಲಯದ ಜಾತ್ರೆಯ ಪ್ರಯುಕ್ತ ಮಹಾ ರಥೋತ್ಸವವು ಭಕ್ತಿ ಭಾವದಿಂದ ನೆರವೇರಿತು.
ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದ ಈ ಪ್ರದೇಶದಲ್ಲಿ ನಡೆದ ರಥೋತ್ಸವದ ಅಂಗವಾಗಿ ದೇವಾಲಯವನ್ನು ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು.
ಬೆಳಿಗ್ಗೆ 11 ಗಂಟೆಗೆ ದೇವಾಲಯದ ಮುಂಭಾಗದಲ್ಲಿ ಸುಮಾರು 25 ಅಡಿ ಎತ್ತರದ ರಥವನ್ನು ನಿಲ್ಲಿಸಿ, ಬಣ್ಣ ಬಣ್ಣದ ಬಟ್ಟೆಗಳು ಹಾಗೂ ಹೂವಿನ ಅಲಂಕಾರಗಳಿಂದ ಸಿಂಗರಿಸಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಬಳಿಕ ಮಂಗಳವಾದ್ಯಗಳ ನಾದದ ನಡುವೆ ಸಾವಿರಾರು ಭಕ್ತರು ಹರ್ಷೋದ್ಗಾರಗಳೊಂದಿಗೆ ರಥವನ್ನು ಎಳೆಯುತ್ತಾ ದೇವಸ್ಥಾನದ ಮುಂಭಾಗದಿಂದ ರಥ ಬೀದಿಯಲ್ಲಿ ಸಂಚರಿಸಿ, ದೇವಾಲಯ ಸುತ್ತ ಪ್ರದಕ್ಷಿಣೆ ಮಾಡಿ ಸ್ವಸ್ಥಾನಕ್ಕೆ ತಂದು ನಿಲ್ಲಿಸಿದರು.
ಜಾತ್ರೆಯ ಅಂಗವಾಗಿ ವಿವಿಧ ಪೂಜೆಗಳು, ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಹಾ ರಥೋತ್ಸವ ಹಾಗೂ ಮಹಾಮಂಗಳಾರತಿ ಬಳಿಕ ಭಕ್ತರಿಗೆ ಪ್ರಸಾದ ವಿತರಣೆಯ ವ್ಯವಸ್ಥೆಯನ್ನು ದೇವಾಲಯ ಸಮಿತಿಯವರು ಮಾಡಿದ್ದರು.
ಈ ಸಂದರ್ಭದಲ್ಲಿ ರಥಕ್ಕೆ ಚಾಲನೆಯನ್ನು ಮಾಜಿ ಸಚಿವರು ಹಾಗೂ ಶಾಸಕರು ಎ. ಮಂಜು, ತಹಸೀಲ್ದಾರ್ ಕೆ.ಸಿ. ಸೌಮ್ಯ ನೀಡಿದರು. ಪುರೋಹಿತರಾದ ರವಿ, ಮಂಜುನಾಥ್, ಪರಮೇಶ್, ಭರತ್, ಮಹದೇವ ಸೇರಿದಂತೆ ಹಲವರು ಭಾಗವಹಿಸಿದ್ದರು.
ವರದಿ- ಕುಮಾರಸ್ವಾಮಿ
