ಚನ್ನರಾಯಪಟ್ಟಣ: ಗಾಂಧಿ ವೃತ್ತದಲ್ಲಿರುವ ರಾಯರ ರಂಗಮಂದಿರದಲ್ಲಿ, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಡಾ. ಸುಭುದೇಂದ್ರ ತೀರ್ಥ ಶ್ರೀಪಾದಂಗಳವರ ಆಶೀರ್ವಾದದಿಂದ, ಶ್ರೀ ರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನೆ ಅಂಗವಾಗಿ ದೀಪೋತ್ಸವ ಹಾಗೂ ಭವ್ಯ ಮೆರವಣಿಗೆ ನಡೆಯಿತು.
ಸಂಜೆ ನೂರಾರು ಮಹಿಳೆಯರೊಂದಿಗೆ, ಶ್ರೀ ರಾಘವೇಂದ್ರ ಸ್ವಾಮಿಗಳ ಮೂರ್ತಿಯನ್ನು ಅಲಂಕರಿಸಿದ ರಥದಲ್ಲಿ ಕೂರಿಸಿ, ಗಾಂಧಿ ವೃತ್ತದಿಂದ ಶನೇಶ್ವರ ದೇವಾಲಯ ಮಾರ್ಗವಾಗಿ, ಕೆ.ಆರ್ ಸರ್ಕಲ್ ಮತ್ತು ಪೊಲೀಸ್ ಠಾಣೆ ಮುಖಾಂತರ ರಾಯರ ಮಂದಿರದವರೆಗೆ ಮೆರವಣಿಗೆ ಸಾಗಿತು.
ಉತ್ತರ ಆರಾಧನೆ ದಿನದಂದು ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕುಸುಮ ಬಾಲಕೃಷ್ಣ, ಮಾಜಿ ಪುರಸಭಾ ಅಧ್ಯಕ್ಷೆ ಬನಶಂಕರಿ ರಘು ಸೇರಿದಂತೆ ನೂರಾರು ಗಣ್ಯರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದರು.
ಆರಾಧನೆ ಅಂಗವಾಗಿ ಮೂರು ದಿನಗಳ ಕಾಲ ನಡೆದ ಸಂಸ್ಕೃತಿಕ ಕಾರ್ಯಕ್ರಮದಲ್ಲಿ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ 150ಕ್ಕೂ ಹೆಚ್ಚು ಕಲಾವಿದರು ನೃತ್ಯ ಪ್ರದರ್ಶನಗಳ ಮೂಲಕ ರಾಯರ ಸೇವೆ ಸಲ್ಲಿಸಿದರು. ಮೂರು ದಿನಗಳ ಅವಧಿಯಲ್ಲಿ ಸಹಸ್ರಾರು ಭಕ್ತರಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು.
- ಮಂಜುನಾಥ್ ಐ ಕೆ
