ಕೆ.ಆರ್.ಪೇಟೆ, ಜೂನ್ 17 – ತಾಲ್ಲೂಕಿನ ಕಸಬಾ ಹೋಬಳಿಯ ಮಾಕವಳ್ಳಿ ಗ್ರಾಮದಲ್ಲಿ ಶ್ರೀ ಸುಬ್ಬರಾಯಸ್ವಾಮಿಯವರ ನೂತನ ದೇವಾಲಯದ ಕಳಶಾರೋಹಣ ಮತ್ತು ಶ್ರೀ ಬಸವೇಶ್ವರ ಸ್ವಾಮಿಯ ಉತ್ಸವ ಮೂರ್ತಿಯ ಸಂಪ್ರೊಕ್ಷಣೆ ಹಾಗೂ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಧಾರ್ಮಿಕ ವಿಜೃಂಭಣೆಯಿಂದ ನಡೆಯಿತು.
ಧಾರ್ಮಿಕ ಕಾರ್ಯಕ್ರಮದ ಭಾಗವಾಗಿ, ಪುಣ್ಯ ಕ್ಷೇತ್ರ ಹೇಮಗಿರಿ ಹೇಮಾವತಿ ನದಿಯಲ್ಲಿ ಉತ್ಸವ ಮೂರ್ತಿಗೆ ಪವಿತ್ರ ಸ್ನಾನ ನೆರವೇರಿಸಲಾಯಿತು. ಫಲಪುಷ್ಪಗಳಿಂದ ಅಲಂಕರಿಸಿದ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಗ್ರಾಮದ ಪುಟ್ಟ ಮಕ್ಕಳು ತಮ್ಮ ತಲೆಯ ಮೇಲೆ ಕಲಶ ಒತ್ತಿ, ಸಾಂಪ್ರದಾಯಿಕ ಜಾನಪದ ಹಾಡುಗಳ ಸದ್ದು ನಡುವೆ ಉತ್ಸವ ಮೂರ್ತಿಯನ್ನು ಭಕ್ತಿಪೂರ್ವಕವಾಗಿ ಗ್ರಾಮದೊಳಗೆ ಕರೆತರಲಾಯಿತು.
ಸಂಜೆ ಗೋಧೂಳಿ ಲಗ್ನದಲ್ಲಿ ಯಾಗಶಾಲೆಯಲ್ಲಿ ಗಣಪತಿ ಪೂಜೆ, ನಂದಿ, ಅಂಕುರಾರೋಪಣ, ಕಲಶ ಸ್ಥಾಪನೆ, ಅಗ್ನಿ ಪ್ರತಿಷ್ಠೆ, ಪಂಚಬ್ರಹ್ಮ, ನವಗ್ರಹ, ಮೃತ್ಯುಂಜಯ, ಏಕಾದಶ ರುದ್ರ ಪೂಜೆಗಳು ವಿಜ್ಞಾನಪೂರ್ಣವಾಗಿ ನಡೆಯಿತು. ಹೋಮ–ಹವನಗಳಿಂದ ಸಾಂಪ್ರದಾಯಿಕ ಶುದ್ಧತೆ ಮತ್ತು ಭಕ್ತಿಮಯ ವಾತಾವರಣ ಸೃಷ್ಟಿಯಾಯಿತು.
ಹೆಚ್ಚು ಜನಸಾಮಾನ್ಯರ ಹಾಜರಾತಿ, ಜಾತಿ-ಭೇದ ಮರೆತು ಆಚರಿಸುವ ಭಾವೈಕ್ಯತೆ ಮತ್ತು ಗ್ರಾಮದ ರಾಜ ಬೀದಿಯಲ್ಲಿ ನಡೆಸಿದ ವಿದ್ಯುತ್ ದೀಪ ಅಲಂಕಾರ ಈ ಧಾರ್ಮಿಕ ಮಹೋತ್ಸವಕ್ಕೆ ಮೆರುಗು ನೀಡಿದವು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಯುವ ಮುಖಂಡರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಾಲಯದ ಲೋಕಾರ್ಪಣೆಗೆ ಶೋಭೆಸೇರಿಸಿದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ

[…] […]