ಶೃಂಗೇರಿ- ಶೃಂಗೇರಿಯ ತುಂಗಾ ನದಿಯ ಸ್ನಾನಘಟ್ಟದಲ್ಲಿ ಹಾಗೂ ಅದರ ಸುತ್ತಮುತ್ತಲಿನ ಪರಿಸರದಲ್ಲಿ ಪ್ಲಾಸ್ಟಿಕ್ ಸ್ವಚ್ಛತೆ ಅಭಿಯಾನವನ್ನು ಸುಮಾರು 30 ಜನ ಬೆಂಗಳೂರಿಂದ ಬಂದ ಸ್ವಯಂ ಸೇವಕರ ಶ್ರಮದೊಂದಿಗೆ ಬೇರುಭೂಮಿ ತಂಡವು ಪ್ಲಾಸ್ಟಿಕ್ ಸ್ವಚ್ಛತಾ ಅಭಿಯಾನವನ್ನು ಪೂರ್ಣಗೊಳಿಸಿತು.
ಅಭಿಯಾನಕ್ಕೆ ಸಂಪೂರ್ಣ ಕೈ ಜೋಡಿಸಿದ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಿಬ್ಬಂದಿಗಳು ಹಾಗೂ ಶೃಂಗೇರಿ ಮಠದ ಆಡಳಿತ ಮಂಡಳಿ ಆಯೋಗದೊಂದಿಗೆ ಅಲ್ಲಿನ ಸುತ್ತಮುತ್ತಲಿನ ಅಂಗಡಿಗಳಿಗೆ ಪ್ರತಿ ಅಂಗಡಿಯ ಮುಂದೆ ಡಸ್ಟಬಿನ್ ವ್ಯವಸ್ಥೆ ಕಡ್ಡಾಯವಾಗಿ ಇರಬೇಕು, ಹಾಗೂ ಅಲ್ಲಿಗೆ ಬರುವ ಗ್ರಾಹಕರು ಕಡ್ಡಾಯವಾಗಿ ಅದನ್ನು ಉಪಯೋಗಿಸಬೇಕು, ಎಲ್ಲೆಂದರಲ್ಲಿ ಕಸ ಬಿಸಾಡುವ ಹಾಗಿಲ್ಲ ಎಂದು ಮನದಟ್ಟು ಮಾಡಿಸಿ, ಅರಿವು ಮೂಡಿಸಲಾಯಿತು.
ಈ ಒಂದು ಪರಿಸರ ಸ್ವಚ್ಛತೆಯ ಅಭಿಯಾನಕ್ಕೆ ಬೇರೆ ಬೇರೆ ಭಾಗದಿಂದ ಬಂದು ಶ್ರಮಿಸಿದ ಸ್ವಯಂ ಸೇವಕರಿಗೂ ಒಂದು ಸಾರ್ಥಕತೆಯ ಭಾವ ಸಿಕ್ಕಿತು.
ಬೇರುಭೂಮಿ ತಂಡದ ಯಶಸ್, ದೀಪರಾಣಿ, ಶ್ರೀನಿವಾಸಮೂರ್ತಿ ಅವರ ಜೊತೆಗೂಡಿ ಬಂದ ಸ್ವಯಂ ಸೇವಕರು ಅಚ್ಚುಕಟ್ಟಾಗಿ ಶಾರದೆಯ ಮಡಿಲಿನ ತುಂಗೆಯ ತಟವನ್ನು ಸ್ವಚ್ಛಗೊಳಿಸಿದರು.
ಶಾರದೆಯ ಮಡಿಲಿಗೆ ಬಂದಿದ್ದ ಕೆಲವು ಭಕ್ತಾದಿಗಳಿಗೆ ಹಾಗೂ ಅಲ್ಲಿನ ಸುತ್ತಮುತ್ತಲಿನ ವ್ಯಾಪಾರಸ್ಥರಿಗೆ ನಮ್ಮ ಸುತ್ತಮುತ್ತಲಿನ ಪ್ರಕೃತಿ ತಾಯಿಯನ್ನ ಸ್ವಚ್ಛತೆಯಿಂದ ಕಾಪಾಡೋದು ನಮ್ಮೆಲ್ಲರ ಹೊಣೆ, ನಮ್ಮ ಕರ್ತವ್ಯ ವೆಂದು ಅರಿವು ಮೂಡಿಸಲಾಯಿತು.

ವಾಸ್ತವ ಹೇಗಿದೆ ಎಂದರೆ ಭಕ್ತಾದಿಗಳು ತಾವು ಮಾಡಿರುವ ಕರ್ಮಗಳನ್ನು ತೊಳೆಯಲು ಧಾರ್ಮಿಕ ಸ್ಥಳಗಳಿಗೆ ಹೋಗಿ ಅಲ್ಲಿನ ಪರಿಸರವನ್ನು ಗಂಗೆಯನ್ನು ಭಕ್ತಿಯ ಹೆಸರಿನಲ್ಲಿ ಮಲಿನ ಮಾಡುತ್ತಿದ್ದಾರೆ.
ನಾವು ಸ್ವಚ್ಛಗೊಳಿಸಿದ ತುಂಗೆಯ ತೀರದಲ್ಲಿ ಸುಮಾರು ಒಂದು ಟ್ರಾಕ್ಟರ್ ಅಷ್ಟು ಅಯ್ಯಪ್ಪ ಸ್ವಾಮಿಯ ಮಾಲಧಾರಿಗಳ ವಸ್ತ್ರವೇ ಸಿಕ್ಕಿದೆ. ಹಾಗೆ ಅಲ್ಲಿಗೆ ಬಂದು ಸ್ನಾನ ಮಾಡಿ ಹೋಗುವ ಭಕ್ತಾದಿಗಳು ಅವರು ಬಂದು ಹೋಗಿರುವ ಗುರುತಿಗೆ ಅವರುಟ್ಟ ಬಟ್ಟೆಯನ್ನು ಅಲ್ಲೇ ಬಿಸಾಕಿ, ತಾವುಗಳು ಬಂದು ಹೋಗಿರುವ ಗುರುತನ್ನು ಬಿಟ್ಟಿದ್ದಾರೆ. ಮನುಷ್ಯ ಎಂಥಾ ಸ್ವಾರ್ಥಿ ಅಲ್ಲವಾ? ಪರಿಸರ ಪ್ರಕೃತಿಯಿಂದ ನಾವೆಲ್ಲರೂ ಎಂದು ತಿಳಿದಿರುವ ನಾವುಗಳೇ ನೆಮ್ಮದಿಯಿಂದ ಬದುಕುತ್ತಿರುವ ಪ್ರಕೃತಿಯನ್ನು ಭಕ್ತಿಯ ರೂಪದಲ್ಲಿ ಧಾರ್ಮಿಕವಾಗಿ ಕಲುಷಿತಗೊಳಿಸುತ್ತಿದೇವೆ.

ಒಂದು ದಿನದ ಪ್ರಕೃತಿ ಅಭಿಯಾನ ಮಾಡಿದರೆ ಸಾಕೆ ? ಅರಿವು ಮೂಡಿತೇ ? ಎಂದು ಕೇಳುವ ಕೆಲವರಿಗೆ ಪ್ರಕೃತಿಯ ಅರಿವಾಗದು. ಕೆಲವೊಮ್ಮೆ ನಾವು ಮಾಡುವ ಕೆಲಸಗಳು ಚಿಕ್ಕದಿದ್ದರು, ಅದನ್ನು ಅರಿತ ಮನುಜರು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುತ್ತಾರೆ ಹಾಗೆ ನಾವು ಮಾಡಿದ ಒಂದು ದಿನದ ಸ್ವಚ್ಛತೆ ಅಲ್ಲಿನ ಜನರಿಗೆ ಅರಿವು ಮೂಡಿಸಿದೆ, ಮುಂದಿನ ದಿನಗಳಲ್ಲಿ ತುಂಗಾ ನದಿಯು ಪ್ಲಾಸ್ಟಿಕ್ ಮುಕ್ತಳಾಗಿ ಸಂತೋಷದಿಂದ ಹರಿಯುತ್ತಾಳೆ, ಅಲ್ಲಿನ ಜನರು ಆಕೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕೆಂಬ ಅರಿವು ಅವರಲ್ಲಿದೆ ಅಂದು ಭಾವಿಸುತ್ತೇವೆ.

ಈ ಒಂದು ದಿನದ ಶೃಂಗೇರಿಯ ಶಾರದೆಯ ಮಡಿಲಿನ ತುಂಗೆಯ ತಟದಲ್ಲಿ ಪ್ಲಾಸ್ಟಿಕ್ ಸ್ವಚ್ಛತೆಯ ಜೊತೆಗೆ ಅರಿವು ಮೂಡಿಸಲು ಕಾರಣರಾದ ಪ್ರತಿಯೊಬ್ಬ ಸ್ವಯಂ ಸೇವಕರಿಗೂ, ಅಲ್ಲಿನ ಪಂಚಾಯಿತಿ ಹಾಗೂ ಆಡಳಿತ ಮಂಡಳಿಯ ಅಧಿಕಾರಿಗಳಿಗೂ, ಮತ್ತು ಸ್ವಯಂ ಸೇವಕರಿಗೆ ಪಾನೀಯದ ವ್ಯವಸ್ಥೆ, ಊಟದ ವ್ಯವಸ್ಥೆ, ಉಳಿದುಕೊಳ್ಳಲು ರೂಮಿನ ವ್ಯವಸ್ಥೆಗೆ ಸಹಕರಿಸಿ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ತುಂಬು ಹೃದಯದ ಧನ್ಯವಾದಗಳು
-ಬೇರು ಭೂಮಿ
