ಕೊರಟಗೆರೆ ;- ತಾಲೂಕಿನ ದುಡ್ಡನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೊಂದು ವಿಶಿಷ್ಟ ಪಾಠಬೋಧನೆ ಇತ್ತು. ಇಕೋ ಕ್ಲಬ್ ವತಿಯಿಂದ ವನಭೇಟಿ ಮತ್ತು ಪೃಕೃತಿಯೆಡೆಗೆ ನಮ್ಮನಡಿಗೆ ಕಾರ್ಯಕ್ರಮ ಆಯೋಜನೆಯಲ್ಲಿ ದೊಡ್ಡಸಾಗ್ಗೆರೆ ಲಾಲ್ಬಾಗ್ ಗೆ ಶಾಲೆಯ 8, 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳನ್ನು ಕರೆದೊಯ್ಯಲಾಗಿದೆ ಎಂದು ಮುಖ್ಯೋಪಾಧ್ಯಾಯ ಹೊಸಕೆರೆ ರಿಜ್ವಾನ್ ಬಾಷ ತಿಳಿಸಿದ್ದಾರೆ,
ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಅಣಿಯಾಗುತ್ತಿರುವ ವಿದ್ಯಾರ್ಥಿಗಳನ್ನು ಮಾನಸಿಕವಾಗಿಸಿದ್ಧಗೊಳಿಸುವ ಉದ್ದೇಶವಾಗಿ ಪೃಕೃತಿಯ ಸೊಬಗಿನಲ್ಲಿ ಪಾಠಬೋಧನೆಯನ್ನು ಪ್ರಾರಂಭಿಸಿದ ಅವರು ತಮ್ಮ ವಿದ್ಯಾರ್ಥಿ ಜೀವನದ ಅನುಭವಗಳನ್ನು ಮಕ್ಕಳ ಮುಂದೆ ತೆರೆದಿಟ್ಟರು.
ಮಾತನಾಡಿ ಈಗ ಕಾಲ ಬದಲಾದಂತೆ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಅರಿವಿದೆ. ಅಂಗೈಯಲ್ಲೇ ಎಲ್ಲವನ್ನೂ ನೋಡಿ ತಿಳಿಯಬಹುದು. ಇಲಾಖೆ ಇಂಥದ್ದಿಲ್ಲ ಎನ್ನುವಷ್ಟರಮಟ್ಟಿಗೆ ಸೌಲಭ್ಯಗಳನ್ನು ಒದಗಿಸುತ್ತಿದೆ. ಶಾಲೆಗಳಲ್ಲಿ ಶಿಕ್ಷಕರು ತಮ್ಮ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪಾಸಾದರೆ ಸಾಕಪ್ಪಾ ದೇವರೆ! ಅಂತಿದ್ದಾರೆ. ಪೋಷಕರು ತಮ್ಮ ಮಕ್ಕಳು ಏನಾಗುವರೋ ಎನ್ನುವ ಧಾವಂತದಲ್ಲಿದ್ದಾರೆ. ಮುಖ್ಯ ಶಿಕ್ಷಕರು ಬೆಳಗಿನಜಾವ 4.30 ಕ್ಕೆ ತಮ್ಮ ವಿದ್ಯಾರ್ಥಿಗಳನ್ನು ಫೋನ್ ಮೂಲಕ ಎಬ್ಬಿಸಿ ಓದಲು ಕೂರಿಸಬೇಕಿದೆ. ಇಲಾಖೆ ಬ್ಲೂ ಪ್ರಿಂಟ್ ಮುಖಾಂತರ ಮಾದರಿಪ್ರಶ್ನೆ ಪತ್ರಿಕೆಗಳನ್ನು ಬಿಡುಗಡೆ ಮಾಡಿ 3 ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸಿ ಅಂತಿಮವಾಗಿ ವಾರ್ಷಿಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸಲು ಇನ್ನಿಲ್ಲದ ಅನುಕೂಲಮಾಡಿಕೊಡುತ್ತಿದೆ.
ಸರ್ಕಾರ ವಾರ್ಷಿಕ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಬಹುಮಾನವಾಗಿ 50,000 ರೂಪಾಯಿಗಳನ್ನು 625 ಕ್ಕೆ 625 ಅಂಕಪಡೆದ ವಿದ್ಯಾರ್ಥಿಗೆ 1,00,000 ರೂಪಾಯಿಗಳನ್ನು ಅವರ ಬ್ಯಾಂಕ್ ಖಾತೆಗೇ ಜಮಾ ಮಾಡುತ್ತಿದೆ. ವಾರ್ಷಿಕ ಪರೀಕ್ಷೆಯಲ್ಲಿ ಕಡಿಮೆ ಅಂಕಪಡೆದರೆ ಅಥವಾ ಫೇಲಾದರೆ ಇನ್ನೂ ಎರಡು ಪರೀಕ್ಷೆಗಳಲ್ಲಿ ಬರೆದು ಉತ್ತೀರ್ಣರಾಗಿ ಮುಂದೆ ಕಾಲೇಜಿಗೆ ಸೇರುವ ಅವಕಾಶವನ್ನೂ ಮಾಡಿಕೊಟ್ಟಿದೆ. ಈಗ ಎಸ್.ಎಸ್.ಎಲ್.ಸಿ ಪರೀಕ್ಷೆಯೆಂಬುದು ಅತ್ಯಂತ ಸುಲಭ. ನಿಸ್ಶಂಶಯವಾಗಿ ಎಲ್ಲರೂ ಪಾಸಾಗಬಹುದು. ಯಾವುದೇ ಭಯವಿಲ್ಲದೆ ಪರೀಕ್ಷೆಯನ್ನು ಬರೆಯಬಹುದು. ಮೂಲ್ನಾಲ್ಕು ಬಾರಿ ಉತ್ತರಿಸಿದ ಪ್ರಶ್ನೆಗಳಿಗೆ ನಿರಾಯಾಸವಾಗಿ ಕರಾರುವಕ್ಕಾದ ಉತ್ತರಗಳನ್ನು ದೃಢ ವಿಶ್ವಾಸದಿಂದ ಬರೆಯುವುದರಿಂದ ಅತಿಹೆಚ್ಚು ಅಂಕಗಳು ಖಂಡಿತಾ ಸಿಗುತ್ತವೆ. ಇಷ್ಟೆಲ್ಲಾ ಆದರೂ ಮುದ್ದುಮಕ್ಕಳಾದ ತಾವು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಲು ಅಥವಾ ಜಸ್ಟ್ಪಾಸ್ ಆಗಲು ತಿಣುಕಾಡುತ್ತಿರುವುದೇಕೆ….? ಎಂದು ಮುಖ್ಯೋಪಾಧ್ಯಾಯ ಹೊಸಕೆರೆ ರಿಜ್ವಾನ್ ಬಾಷ ತಮ್ಮ ವಿದ್ಯಾರ್ಥಿಗಳನ್ನು ನವಿರಾಗಿಯೇ ಪ್ರಶ್ನೆ ಮಾಡಿದರು.
ಒತ್ತಡರಹಿತ, ಭಯಮುಕ್ತರಾಗಿ ಪರೀಕ್ಷೆ ಬರೆಯಲು ಸಿದ್ಧರಾಗಿ. ಏಕಾಗ್ರತಯಿರಲಿ. ಅನಾವಶ್ಯಕವಾಗಿ ಕಾಲಕಳೆಯದೆ ಇರುವ ಸಮಯವನ್ನು ಸದ್ಬಳಕೆ ಮಾಡಿಕೊಳ್ಳಿ. ಆಸಕ್ತಿಯಿಂದ ಓದಿ. ಹಬ್ಬ-ಹರಿದಿನ,ಜಾತ್ರೆ, ಮದುವೆಯಂಥ ಶುಭ ಕಾರ್ಯಗಳಿಗೆ ಹೋಗುವುದನ್ನು ನಿಲ್ಲಿಸಿ. ಅರ್ಥವಾಗದ ವಿಷಯವನ್ನು ಶಿಕ್ಷಕರೊಂದಿಗೆ ಚರ್ಚಿಸಿ ಅನುಮಾನಗಳನ್ನು ಪರಿಹರಿಸಿಕೊಳ್ಳಿ. ಸಮಯಕ್ಕೆ ಸರಿಯಾಗಿ ಊಟ, ನಿದ್ರೆ ಇರಲಿ. ಚಂಚಲ ಮನಸ್ಸನ್ನು ಅತ್ತಿತ್ತ ಹರಿಯಲು ಬಿಡಬೇಡಿ. ಟಿ.ವಿ. ಮೊಬೈಲ್ ನಿಂದ ದೂರವಿರಿ. ಪೋಷಕರೊಂದಿಗೆ ವಾಗ್ವಾದಕ್ಕಿಳಿಯಬೇಡಿ. ಎಸ್.ಎಸ್.ಎಲ್.ಸಿ. ಪರೀಕ್ಷೆಯೆಂಬುದು ಒಂದು ಹಬ್ಬ ಎಂದು ಮನಸ್ಸಿನಲ್ಲಿ ಅಂದುಕೊಳ್ಳಿ. ನಾನು ಖಂಡಿತಾ ಹೆಚ್ಚು ಅಂಕಗಳನ್ನು ಪಡೆಯುತ್ತೇನೆಂಬ ಆತ್ಮವಿಶ್ವಾಸ ರೂಢಿಸಿಕೊಳ್ಳಿ. ಯಾರು ಏನೇ ಅಂದರೂ ತಲೆಕೆಡಿಸಿಕೊಳ್ಳಬೇಡಿ. ಬೇಗ ಉದ್ವೇಗಕ್ಕೊಳಗಾಗಬೇಡಿ. ನಿಮ್ಮ ದೃಷ್ಟಿ ಮುಂದಿನ ಗುರಿಯೆಡೆಗೆ ಮಾತ್ರ ಇರಲಿ. ಎಂದು ಪ್ರೀತಿಯಿಂದ ಮಕ್ಕಳಿಗೆ ತಿಳಿಹೇಳಿದರು. ವಿದ್ಯಾರ್ಥಿಗಳಿಗೆ ಇದು ತರಗತಿಯ ಬೋಧನೆಗಿಂತ ಭಿನ್ನವಾಗಿತ್ತು.
ತರಗತಿಯ ನಾಲ್ಕು ಗೋಡೆಗಳ ನಡುವೆ ಒತ್ತಡದಲ್ಲಿದ್ದ ವಿದ್ಯಾರ್ಥಿಗಳು ಪ್ರಕೃತಿಯಲ್ಲಿನ ಗಿಡ ಮರ ಹಕ್ಕಿ ಪಕ್ಷಿಗಳೊಂದಿಗೆ ಒಂದು ದಿನಪೂರ್ತಿ ಆನಂದಿಸಿದರು. ಹಣ್ಣುಗಳನ್ನು ಸವಿದರು. ಸ್ನೇಹಿತರೊಟ್ಟಿಗೆ ಸಂತೋಷವಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಶಿಕ್ಷಕರು-ಮುಖ್ಯಶಿಕ್ಷಕರೊಂದಿಗೆ ಮುಕ್ತವಾಗಿ ಮಾತನಾಡಿದರು. ಮುಂಬರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಯಾವುದೇ ಭಯವಿಲ್ಲದೇ ಬರೆಯುತ್ತೇವೆಂದರು.
ಇಕೋಕ್ಲಬ್ ನ ನೋಡಲ್ ಶಿಕ್ಷಕಿ ಸುಜಾತ.ಎಸ್. ಮಹಲಿಂಗಪುರ ರವರು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅಶೋಕ್ ಪೂಜಾರ್ ಮತ್ತು ಚಿಕ್ಕಪ್ಪಯ್ಯ ಇವರುಗಳು ಮಕ್ಕಳೊಂದಿಗಿದ್ದು ಶೈಕ್ಷಣಿಕ ವಿಚಾರಗಳನ್ನು ಹಂಚಿಕೊಂಡರು. ವಿನೋದಮ್ಮ, ಗೌರಮ್ಮ, ಅಶ್ವತ್ಥಮ್ಮ ಮಕ್ಕಳಿಗೆ ಬಿಸಿಯೂಟ ಮೊಟ್ಟೆ ಬಾಳೆಹಣ್ಣು ವಿತರಿಸಿದರು. ದೊಡ್ಡಸಾಗ್ಗೆರೆ ಲಾಲ್ಬಾಗ್ನ ಸಿಬ್ಬಂದಿ ತುಂಬಾ ಸಹಕರಿಸಿದರು.
ಎಸ್.ವಿ.ಎಸ್. ಬಸ್ಸು ಮಕ್ಕಳನ್ನು ಶಾಲೆಯಿಂದ ಲಾಲ್ಬಾಗ್ ಗೂ ಮತ್ತು ಸಸ್ಯಕ್ಷೇತ್ರದಿಂದ ಶಾಲೆಗೂ ಸುರಕ್ಷಿತವಾಗಿ ತಲುಪಿಸಿತು. ಒಟ್ಟಾರೆ ಇಕೋಕ್ಲಬ್ನ ಈ ಕಾರ್ಯಕ್ರಮ ಮಕ್ಕಳಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ ಎಂದರು.
– ಶ್ರೀನಿವಾಸ್ ಕೊರಟಗೆರೆ
