
ಬೆಂಗಳೂರು ಹಾಗೂ ರಾಜ್ಯದಲ್ಲಿ ಆಸ್ತಿಗಳ ನೋಂದಣಿ, ಮಾರಾಟ ಹಾಗೂ ಖರೀದಿ ಸೇರಿದಂತೆ ವಿವಿಧ ವ್ಯವಹಾರಗಳನ್ನು ಸುಧಾರಿಸಲು ಹಾಗೂ ಮೋಸ ತಪ್ಪಿಸುವ ಉದ್ದೇಶದಿಂದ ಇ – ಖಾತಾ ಪರಿಚಯಿಸಲಾಗಿದೆ. ಇದೀಗ ಇ – ಖಾತಾಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮಹತ್ವದ ಆದೇಶವೊಂದನ್ನು ಮಾಡಿದೆ.
ಆಸ್ತಿ ನೋಂದಣಿಯಲ್ಲಿ ಆಗುವ ಲೋಪ ಮತ್ತು ಅಕ್ರಮ ಆಸ್ತಿ ಮಾರಾಟ ಮಾಡುವುದನ್ನು ತಪ್ಪಿಸುವ ಉದ್ದೇಶದಿಂದ ಎಲ್ಲಾ ಆಸ್ತಿಗಳಿಗೆ ಸರ್ಕಾರವು ಇ – ಖಾತಾ ಕಡ್ಡಾಯ ಮಾಡಿದೆ. ಇನ್ನು ಇ -ಖಾತಾ ಪ್ರಕ್ರಿಯೆಗೆ ಸರ್ಕಾರವು ಗಡುವು ನಿಗದಿ ಮಾಡಲಾಗಿದೆ. ಇ – ಖಾತಾ ಮಾಡಿಸಿಕೊಳ್ಳಲು ಗೊಂದಲಗಳ ನಡುವೆಯೇ ಈ ಅಪ್ಡೇಟ್ ಬಂದಿದೆ. ಆದರೆ, ಆಸ್ತಿದಾರರು ಆತಂಕಪಡುವ ಅವಶ್ಯಕತೆ ಇಲ್ಲ. ಯಾಕೆ ಎನ್ನುವ ವಿವರ ಇಲ್ಲಿದೆ.
ರಾಜ್ಯ ಸರ್ಕಾರವು ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸಂಬಂಧಿಸಿದಂತೆ ಮಹತ್ವದ ಆದೇಶವೊಂದನ್ನು ಕಳೆದ ತಿಂಗಳು ಮಾಡಿತ್ತು. ಲಕ್ಷಾಂತರ ಆಸ್ತಿಗಳು ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದಿದ್ದು. ಇದರಿಂದ ಬಿಬಿಎಂಪಿ ಸೇರಿದಂತೆ ರಾಜ್ಯದ ಪ್ರಮುಖ ಪಾಲಿಕೆಗಳು, ಸ್ಥಳೀಯ ಸಂಸ್ಥೆ ಹಾಗೂ ಸರ್ಕಾರಕ್ಕೆ ಭಾರೀ ಆರ್ಥಿಕ ನಷ್ಟವುಂಟಾಗುತ್ತಿದೆ. ಹೀಗಾಗಿ ಎಲ್ಲಾ ಆಸ್ತಿಗಳಿಗೂ ಇ- ಖಾತಾ ಕಡ್ಡಾಯ ಮಾಡಲಾಗಿದೆ. ಇದೀಗ ಇ – ಖಾತಾ ಮಾಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಮಹತ್ವದ ಆದೇಶ ಮಾಡಲಾಗಿದೆ.
90 ಲಕ್ಷಕ್ಕಿಂತ ಹೆಚ್ಚು ಆಸ್ತಿ: ಇನ್ನು ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಅಂದಾಜು 90 ಲಕ್ಷಕ್ಕೂ ಹೆಚ್ಚು ಆಸ್ತಿಗಳು ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿವೆ ಎಂದು ರಾಜ್ಯ ಸರ್ಕಾರ ಹೇಳಿದೆ. ಇದರಿಂದ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ. ಕರ್ನಾಟಕದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 30 ಲಕ್ಷ ಆಸ್ತಿಗಳು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂದಾಜು 90 ಲಕ್ಷಕ್ಕಿಂತ ಹೆಚ್ಚು ಆಸ್ತಿಗಳು ಖಾತಾ ವ್ಯಾಪ್ತಿಯಿಂದ ಹೊರಗುಳಿದಿವೆ. ಹೀಗಾಗಿ, ಎಲ್ಲಾ ಆಸ್ತಿಗಳನ್ನು ಇ – ಖಾತಾ ವ್ಯಾಪ್ತಿಗೆ ತರುವುದು. ಇದರ ಮೂಲಕ ಡಿಜಿಟಲ್ ಕಣ್ಗಾವಲು ಇರಿಸುವುದು ಸರ್ಕಾರದ ಉದ್ದೇಶವಾಗಿದೆ.
ಅಲ್ಲದೆ ಡಿಜಿಟಲ್ನಲ್ಲಿ ಆಸ್ತಿ ವಿವರ ಸಿಗುವುದರಿಂದ ಆಸ್ತಿ ಯಾರ ಹೆಸರಿನಲ್ಲಿ ಇದೆ. ಯಾರು ಮಾರಾಟ ಮಾಡಿದ್ದಾರೆ ಹಾಗೂ ಯಾರಿಗೆ ಮಾರಾಟ ಮಾಡಿದ್ದಾರೆ ಎನ್ನುವ ಸಂಪೂರ್ಣ ವಿವರ ಸಿಗಲಿದೆ.
ಇ – ಖಾತಾ ಮೇಳ: ರಾಜ್ಯದಲ್ಲಿ ಆಸ್ತಿದಾರರು ಸರಳ ಹಾಗೂ ಸುಲಭವಾಗಿ ಇ – ಖಾತಾ ಮಾಡಿಸಿಕೊಳ್ಳಲು ನೆರವಾಗುವ ಉದ್ದೇಶದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಸೇರಿದಂತೆ ಎಲ್ಲಾ ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಇ – ಖಾತಾ ಮೇಳವನ್ನು ಆಯೋಜಿಸಲಾಗುತ್ತಿದೆ.
ಇ – ಖಾತಾ: ಫೆಬ್ರವರಿ 10ರ ಗಡುವು
ಇನ್ನು ರಾಜ್ಯದಲ್ಲಿ ಎಲ್ಲಾ ಆಸ್ತಿಗಳ ಆಸ್ತಿದಾರರಿಗೆ ಇ – ಖಾತಾ ಕಡ್ಡಾಯ ಮಾಡಲಾಗಿದ್ದು. ಇ ಖಾತಾ ನೀಡುವುದನ್ನು ಫೆಬ್ರವರಿ 10ರ ಒಳಗೆ ಮುಗಿಸಬೇಕು ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ಕೊಟ್ಟಿದ್ದಾರೆ. ಹೀಗಾಗಿ ಎಲ್ಲಾ ಆಸ್ತಿದಾರರ ಅರ್ಜಿಗಳನ್ನು ಫೆಬ್ರವರಿ 10ರ ಒಳಗಾಗಿ ವಿಲೇವಾರಿ ಮಾಡುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ.