
ಸಿ.ಟಿ.ರವಿ ಅವರ ವಿರುದ್ಧ ರಾಜ್ಯ ಸರ್ಕಾರ ಬಲವಂತದ ಕ್ರಮಕೈಗೊಳ್ಳಬಾರದು: ಹೈ ಕೋರ್ಟ್ ಆದೇಶ
ಸಿ.ಟಿ.ರವಿ ಅವರ ವಿರುದ್ಧ ರಾಜ್ಯ ಸರ್ಕಾರ ಬಲವಂತದ ಕ್ರಮಕೈಗೊಳ್ಳಬಾರದು: ಹೈ ಕೋರ್ಟ್ ಆದೇಶ
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಬಿಜೆಪಿ ಎಂಎಲ್ಸಿ ಸಿ.ಟಿ.ರವಿ ಅವರು ಪರಿಷತ್ನಲ್ಲಿ ಆಡಿದ್ದಾರೆನ್ನಲಾದ ಅವಾಚ್ಯ ಪದಬಳಕೆ ಆರೋಪ ಸಂಬಂಧ ಇಂದು ವಿಚಾರಣೆ ನಡೆಸಿರುವ ಕರ್ನಾಟಕ ಹೈಕೋರ್ಟ್ ಜ.30ಕ್ಕೆ ಮುಂದೂಡಿ ಆದೇಶಿಸಿದೆ.
ನ್ಯಾ.ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಅರ್ಜಿ ವಿಚಾರಣೆ ನಡೆಸಿದ್ದು, ಪೊಲೀಸರು ತನಿಖೆ ನಡೆಸಿ, ವರದಿ ಸಲ್ಲಿಸಲು ಅನುಮತಿಸಬೇಕೆ ಎಂಬುವುದನ್ನು ನಿರ್ಧರಿಸಬೇಕಿದೆ. ಹೀಗಾಗಿ ಮುಂದಿನ ವಿಚಾರಣೆವರೆಗೂ ರಾಜ್ಯ ಸರ್ಕಾರ ರವಿ ಅವರ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು ಎಂದು ಕೋರ್ಟ್ ಹೇಳಿದೆ.
ಸಿ.ಟಿ.ರವಿ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು, ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಅವಾಚ್ಯ ಶಬ್ದ ಬಳಕೆ ತಪ್ಪು. ಅದು ಅಪರಾಧವಾಗುತ್ತದೆ. ಆದರೆ, ಎಫ್ಐಆರ್ನಲ್ಲಿ ಉಲ್ಲೇಖಿಸಿರುವ ಅಪರಾಧವಲ್ಲ. ಇನ್ನು ಘಟನೆ ಬಗ್ಗೆ ಸಭಾಧ್ಯಕ್ಷರ ನಿಲುವೇನು ಎಂದು ಪೀಠ ಪ್ರಶ್ನಿಸಿದ್ದು, ಸದನದಲ್ಲಿ ಏನೂ ನಡೆದಿಲ್ಲ ಎಂದು ಸಭಾಧ್ಯಕ್ಷರು ಹೇಳಿದ್ದರು ಎಂದು ನಾಗೇಶ್ ಅವರು ವಾದಿಸಿದರು.
ರಾಜ್ಯ ಸರ್ಕಾರದ ಪರವಾಗಿ ಎಸ್ಪಿಪಿ ಬೆಳ್ಳಿಯಪ್ಪ ಪ್ರತಿವಾದಿಸಿ, ಸದನವನ್ನು ಮುಂದೂಡಲಾಗಿದ್ದು, ಸಭಾಧ್ಯಕ್ಷರೂ ಇರಲಿಲ್ಲ. ಆಗ ರವಿ ಅವರು ಆಕ್ಷೇಪಾರ್ಹವಾದ ಬಳಸಿದ್ದಾರೆ. ಇದೇ ವೇಳೆ ಆಡಿಯೋ ಸಂಬಂಧ ಎಫ್ಎಸ್ಎಲ್ ವರದಿ ಇದೆಯೇ ಎಂದು ಪೀಠ ಪ್ರಶ್ನಿಸಿದೆ. ಎಫ್ಎಸ್ಎಲ್ ವರದಿ ಬಂದಿಲ್ಲ. ಸದನದ ಕಾರ್ಯದರ್ಶಿ ಅವರು ಆಕ್ಷೇಪಾರ್ಹವಾದ ವಿಡಿಯೊ ಕ್ಲಿಪ್ ನೀಡಿಲ್ಲ. ಸದನ ಮುಂದೂಡಿದ್ದರಿಂದ ಸಭಾಧ್ಯಕ್ಷರು ಇರಲಿಲ್ಲ. ತನಿಖೆ ನಡೆಸಲು ಸಿಸಿಟಿವಿ ತುಣುಕು ನೀಡುವಂತೆ ಕಾರ್ಯದರ್ಶಿ ಅವರನ್ನು ಕೋರಿದ್ದೇವೆ ಎಂದು ಎಸ್ಪಿಪಿ ಪೀಠದ ಗಮನಕ್ಕೆ ತಂದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್, ವಿಚಾರಣೆಯನ್ನು ಮುಂದೂಡಿ ಆದೇಶ ಹೊರಡಿಸಿದೆ.