ಬೆಂಗಳೂರು: ಜಮ್ಮು–ಕಾಶ್ಮೀರದಲ್ಲಿರುವ ಪ್ರಸಿದ್ಧ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡುವ ಕರ್ನಾಟಕದ ಯಾತ್ರಾರ್ಥಿಗಳಿಗೆ ಸಹಾಯಧನ ನೀಡುವ ಹೊಸ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿದೆ. ಕಾಶಿ ಯಾತ್ರೆ ಮಾದರಿಯಲ್ಲಿ, ವೈಷ್ಣೋದೇವಿ ಯಾತ್ರೆ ಮಾಡಿ ವಾಪಸ್ ಬಂದ ಯಾತ್ರಾರ್ಥಿಗಳು ಅಗತ್ಯ ದಾಖಲೆಗಳನ್ನು ಸಲ್ಲಿಸಿದಲ್ಲಿ ₹5,000 ಸಹಾಯಧನ ಪಡೆಯಲು ಅವಕಾಶ ದೊರೆಯಲಿದೆ.
ಈ ಸಂಬಂಧ ಮುಜರಾಯಿ ಇಲಾಖೆ ಮಾರ್ಗಸೂಚಿಗಳನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದು, ಸರ್ಕಾರದಿಂದ ಅನುಮೋದನೆ ದೊರೆತ ಕೂಡಲೇ ಯೋಜನೆಗೆ ಅಧಿಕೃತ ಚಾಲನೆ ನೀಡಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆ, ವೈಷ್ಣೋದೇವಿ ಯಾತ್ರೆ ಸಹಾಯಧನ ಯೋಜನೆಗೆ ತಾತ್ವಿಕ ಅನುಮೋದನೆ ದೊರೆತಿದ್ದು, ಮಾರ್ಗಸೂಚಿಗಳ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದೆ.
ಸೇವಾ ಸಿಂಧು ಮೂಲಕ ಅರ್ಜಿ
ಯಾತ್ರಾರ್ಥಿಗಳು ಸಹಾಯಧನಕ್ಕಾಗಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿಯೊಂದಿಗೆ ಪ್ರಯಾಣದ ಟಿಕೆಟ್ಗಳು, ಜಿಪಿಎಸ್ ಹೊಂದಿದ ಫೋಟೋ, ವಯಸ್ಸಿನ ದೃಢೀಕರಣ ಪತ್ರ, ಆಧಾರ್ ಕಾರ್ಡ್ ಪ್ರತಿ ಹಾಗೂ ನೋಟರಿ ಮಾಡಿಸಿದ ಛಾಪಾ ಖಾಗದ ಸೇರಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.
ಇತರೆ ಯಾತ್ರೆಗಳಿಗೆ ಈಗಾಗಲೇ ಸಹಾಯಧನ
ಮುಜರಾಯಿ ಇಲಾಖೆ ಬಹಳ ವರ್ಷಗಳಿಂದ ಮಾನಸ ಸರೋವರ ಯಾತ್ರೆಗೆ ₹30,000, ಚಾರ್ಧಾಮ್ ಯಾತ್ರೆ (ಗಂಗೋತ್ರಿ, ಯಮುನೋತ್ರಿ, ಕೇದಾರನಾಥ್, ಬದರಿನಾಥ್)ಗೆ ₹20,000 ಹಾಗೂ ಕಾಶಿ ಯಾತ್ರೆಗೆ ₹5,000 ಸಹಾಯಧನ ನೀಡುತ್ತಿದೆ. 2025ರಲ್ಲಿ ಕಾಶಿ ಯಾತ್ರೆ ಮಾಡಿದ 8,197 ಮಂದಿ, ಮಾನಸ ಸರೋವರ ಯಾತ್ರೆ ಮಾಡಿದ 812 ಮಂದಿ ಹಾಗೂ ಚಾರ್ಧಾಮ್ ಯಾತ್ರೆ ಮಾಡಿದ 4,241 ಮಂದಿ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಮುಂದಿನ ದಿನಗಳಲ್ಲಿ ಈ ಪಟ್ಟಿಗೆ ವೈಷ್ಣೋದೇವಿ ಯಾತ್ರೆಯೂ ಸೇರಲಿದೆ.
ಷರತ್ತುಗಳು ಅನ್ವಯ
ಧಾರ್ಮಿಕ ಪ್ರವಾಸದ ಸಹಾಯಧನ ಪಡೆಯಲು ಫಲಾನುಭವಿಗಳು 18 ವರ್ಷ ಮೇಲ್ಪಟ್ಟವರಾಗಿರಬೇಕು, ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು. ಪ್ರತಿಯೊಂದು ಯಾತ್ರೆಗೆ ಒಮ್ಮೆ ಮಾತ್ರ ಸಹಾಯಧನ ಪಡೆಯಲು ಅವಕಾಶ ಇರುತ್ತದೆ. ನಾಲ್ಕು ಯಾತ್ರೆಗಳಿಗೂ ತಲಾ ಒಂದು ಬಾರಿ ಸಹಾಯಧನ ಪಡೆಯಬಹುದಾಗಿದೆ.
ರಾಜ್ಯದ ಯಾತ್ರಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಜಾರಿಗೆ ಬರುತ್ತಿರುವ ಈ ಯೋಜನೆಗೆ ವ್ಯಾಪಕ ಸ್ವಾಗತ ವ್ಯಕ್ತವಾಗುತ್ತಿದೆ.
