ಹಾಸನ: ಹಾಸನದ ಹಿಮ್ಸ್ (HIMS) ಆಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆಗೆ ತೊಡಕಾಗುವಂತಹ ಆಘಾತಕಾರಿ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಮೂರನೇ ಮಹಡಿಯ ವಾರ್ಡ್ ನಂ. 340ಕ್ಕೆ ಬೀದಿ ನಾಯಿಯೊಂದು ನುಗ್ಗಿದ ಘಟನೆ ರೋಗಿಗಳು ಹಾಗೂ ಅವರ ಕುಟುಂಬದವರಲ್ಲಿ ಭಾರೀ ಆತಂಕವನ್ನು ಉಂಟುಮಾಡಿದೆ.
ರಾತ್ರಿ ವೇಳೆ ಚಿಕಿತ್ಸೆಗೆ ದಾಖಲಾಗಿದ್ದ ರೋಗಿಗಳು ಮಲಗಿರುವ ಸಮಯದಲ್ಲಿ ನಾಯಿ ವಾರ್ಡ್ ಒಳಗೆ ಸುತ್ತಾಡಿದುದನ್ನು ಕಂಡು ರೋಗಿಗಳು ಬೆಚ್ಚಿಬಿದ್ದರು. ತಕ್ಷಣ ಸಿಬ್ಬಂದಿ ಎಚ್ಚರಗೊಂಡು ನಾಯಿಯನ್ನು ಹೊರಹಾಕಿದರೂ, ಈ ಘಟನೆ ಆಸ್ಪತ್ರೆಯ ಭದ್ರತೆ ಹಾಗೂ ನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ಸ್ಥಳೀಯರ ಪ್ರಕಾರ, ಸೆಕ್ಯೂರಿಟಿ ಗಾರ್ಡ್ಗಳ ನಿರ್ಲಕ್ಷ್ಯದಿಂದಲೇ ನಾಯಿ ಮೂರನೇ ಮಹಡಿಯವರೆಗೂ ತಲುಪಿ ವಾರ್ಡ್ಗೆ ಪ್ರವೇಶಿಸಿದೆ. “ರೋಗಿಗಳ ಕುಟುಂಬ ಸದಸ್ಯರು ಆಸ್ಪತ್ರೆಗೆ ಬಂದಾಗ ಗಾರ್ಡ್ಗಳು ಅಹಂಕಾರ ತೋರುತ್ತಾರೆ. ಆದರೆ ನಾಯಿ ವಾರ್ಡ್ ಒಳಗೆ ಓಡಾಡಿದಾಗ ಅವರು ಕಣ್ಮುಚ್ಚಿ ಕುಳಿತಿದ್ದಾರೆ” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಯಾವುದೇ ಗಂಭೀರ ಹಾನಿ ಉಂಟುಮಾಡದಿದ್ದರೂ, ಆಸ್ಪತ್ರೆಯ ಸ್ವಚ್ಛತೆ, ಭದ್ರತೆ ಹಾಗೂ ಆಡಳಿತದ ಕಾರ್ಯನಿರ್ವಹಣೆಯಲ್ಲಿರುವ ಲೋಪವನ್ನು ಬಯಲು ಮಾಡಿದೆ. ವಿಶೇಷವಾಗಿ, ಹಾಸನದಲ್ಲಿ ಬೀದಿ ನಾಯಿಗಳ ಹಾವಳಿ ದಿನೇ ದಿನೇ ಹೆಚ್ಚುತ್ತಿರುವ ಪರಿಸ್ಥಿತಿಯಲ್ಲಿ, ಆಸ್ಪತ್ರೆಯೊಳಗೆ ನಾಯಿ ನುಗ್ಗಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಇದೇ ವೇಳೆ, ಸಾರ್ವಜನಿಕರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿ, ಜವಾಬ್ದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
