ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಹಾಗೂ ನೌಕರರು ಇನ್ನು ಮುಂದೆ ಕಟ್ಟುನಿಟ್ಟಾದ ಶಿಸ್ತು ಪಾಲಿಸಬೇಕು ಎಂದು ಇಲಾಖೆ ಆಯುಕ್ತರು ಸೂಚಿಸಿದ್ದಾರೆ.
ಈ ಕುರಿತು ಅಧಿಕೃತ ಸುತ್ತೋಲೆ ಹೊರಡಿಸಲಾಗಿದ್ದು, ಕಚೇರಿ ಸಮಯದಲ್ಲಿ ನೌಕರರು ಸಮಯಕ್ಕೆ ಹಾಜರಾಗದಿರುವುದು, ಗುರುತಿನ ಚೀಟಿ ಧರಿಸದಿರುವುದು ಹಾಗೂ ಸಾರ್ವಜನಿಕರೊಂದಿಗೆ ಸರಿಯಾಗಿ ಸ್ಪಂದಿಸದಿರುವ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.
ಸುತ್ತೋಲೆ ಪ್ರಕಾರ ನೌಕರರು ಕಚೇರಿಗೆ ಬರುವ ಹಾಗೂ ತೆರಳುವ ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೆಲಸದ ಅವಧಿ ಮುಗಿಯುವವರೆಗೆ ನಿಗದಿತ ಸ್ಥಳದಲ್ಲೇ ಇರಬೇಕು ಎಂದು ಸೂಚಿಸಲಾಗಿದೆ. ಕಚೇರಿ ಕೆಲಸದ ನಿಮಿತ್ತ ಹೊರಗೆ ಹೋಗಬೇಕಾದರೆ ‘ಚಲನ-ವಲನ ವಹಿ’ (ಮೂವ್ಮೆಂಟ್ ರಿಜಿಸ್ಟರ್) ಯಲ್ಲಿ ಕಾರಣ ದಾಖಲಿಸಿ ಮೇಲಧಿಕಾರಿಗಳ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಇದೇ ವೇಳೆ ಕೆಲಸದ ಅವಧಿಯಲ್ಲಿ ಇಲಾಖೆ ನೀಡಿರುವ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಬೇಕು. ಜೊತೆಗೆ ಪ್ರತಿಯೊಬ್ಬ ಸಿಬ್ಬಂದಿಯ ಮೇಜಿನ ಮೇಲೆ ಅವರ ಹೆಸರು ಹಾಗೂ ಹುದ್ದೆ ವಿವರ ಹೊಂದಿರುವ ನಾಮಫಲಕ ಇರಬೇಕೆಂದು ಸೂಚಿಸಲಾಗಿದೆ.
ಕಚೇರಿಗೆ ಬರುವ ಸಾರ್ವಜನಿಕರು ಹಾಗೂ ಹಿರಿಯ ನಾಗರಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಅವರ ಸಮಸ್ಯೆಗಳಿಗೆ ಧನಾತ್ಮಕವಾಗಿ ಸ್ಪಂದಿಸಬೇಕು. ಇ-ಆಫೀಸ್ ಮೂಲಕ ಬರುವ ಕಡತಗಳು ಮತ್ತು ಪತ್ರಗಳನ್ನು ನಿಯಮಾನುಸಾರ ತಕ್ಷಣವೇ ವಿಲೇವಾರಿ ಮಾಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಈ ಮಾರ್ಗಸೂಚಿಗಳನ್ನು ಪಾಲಿಸದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ CCA (Classification, Control and Appeal) ನಿಯಮಗಳ ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.

