
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ವಿಶ್ವೇಶ್ವರಯ್ಯ ನಗರದ ಅಪಾರ್ಟ್ಮೆಂಟ್ ವೊಂದರಲ್ಲಿ ಒಂದೇ ಕುಟುಂಬದ ನಾಲ್ವರ ಮೃತದೇಹ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
ಮೃತರನ್ನು ಚೇತನ್ (45ವ), ಅವರ ಪತ್ನಿ ರೂಪಾಲಿ (43ವ), ಮತ್ತು ಅವರ ಮಗ ಕುಶಾಲ್ (15ವ) ಮತ್ತು ಚೇತನ್ ಅವರ ತಾಯಿ ಪ್ರಿಯಂವದ (62ವ) ಎಂದು ಗುರುತಿಸಲಾಗಿದೆ.
ಪ್ರಾಥಮಿಕ ತನಿಖೆಯನ್ನು ಉಲ್ಲೇಖಿಸಿ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಚೇತನ್ ತಮ್ಮ ಕುಟುಂಬ ಸದಸ್ಯರಿಗೆ ವಿಷವುಣಿಸಿ ಕೊಂದು ನಂತರ ತಾವು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮೈಸೂರು ಪೊಲೀಸ್ ಆಯುಕ್ತೆ ಸೀಮಾ ಲಟ್ಕರ್, ವಿದ್ಯಾರಣ್ಯಪುರದ ಸಂಕಲ್ಪ ಅಪಾರ್ಟ್ಮೆಂಟ್ನಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಈ ಅಪಾರ್ಟ್ ಮೆಂಟಿನಲ್ಲಿ ಇವರು ಎರಡು ಪ್ರತ್ಯೇಕ ಫ್ಲಾಟ್ಗಳಲ್ಲಿ ವಾಸಿಸುತ್ತಿದ್ದರು.
ಚೇತನ್ ಅವರ ತಾಯಿ ಒಂದರಲ್ಲಿ ವಾಸಿಸುತ್ತಿದ್ದರೆ, ಚೇತನ್, ಅವರ ಪತ್ನಿ ಮತ್ತು ಅವರ ಮಗ ಇನ್ನೊಂದು ಫ್ಲಾಟ್ನಲ್ಲಿ ವಾಸಿಸುತ್ತಿದ್ದರು.
ಚೇತನ್ ಮೂಲತಃ ಹಾಸನದ ಗೊರೂರಿನವರು, ಅವರ ಪತ್ನಿ ಮೈಸೂರಿನವರು.
ಸಾಯುವುದಕ್ಕೆ ಮೊದಲು ಚೇತನ್ ಅಮೆರಿಕದಲ್ಲಿರುವ ತನ್ನ ಸಹೋದರ ಭರತ್ ಗೆ ಕರೆ ಮಾಡಿದ್ದರು, ಅವರು ಚೇತನ್ ಪತ್ನಿ ರೂಪಾಲಿಯವರ ಪೋಷಕರಿಗೆ ಕರೆ ಮಾಡಿ ಅಪಾರ್ಟ್ ಮೆಂಟ್ ಬಳಿ ಹೋಗಿ ವಿಚಾರಿಸಿ ಎಂದು ಹೇಳಿದ್ದರಂತೆ. ಪೋಷಕರು ಫ್ಲಾಟ್ ಬಳಿ ಬಂದು ನೋಡುವಾಗ ಘಟನೆ ಬೆಳಕಿಗೆ ಬಂದಿದೆ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚೇತನ್ ಮೂಲತಃ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದು, 2019 ರಲ್ಲಿ ಮೈಸೂರಿಗೆ ಸ್ಥಳಾಂತರಗೊಳ್ಳುವ ಮೊದಲು ದುಬೈನಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಮೈಸೂರಿಗೆ ಬಂದು ಅಪಾರ್ಟ್ ಮೆಂಟ್ ಖರೀದಿಸಿ ಕಾರ್ಮಿಕ ಗುತ್ತಿಗೆದಾರರಾಗಿದ್ದು, ಆನ್ಲೈನ್ ಮೂಲಕ ಸೌದಿ ಅರೇಬಿಯಾಕ್ಕೆ ಕಾರ್ಮಿಕರನ್ನು ಕಳುಹಿಸುತ್ತಿದ್ದರು.
ಸಾವಿಗೆ ನಿಖರ ಕಾರಣವನ್ನು ವಿಧಿವಿಜ್ಞಾನ ಪ್ರಯೋಗಾಲಯ ಮತ್ತು ಅಪರಾಧ ಅಧಿಕಾರಿಯ (SOCO) ತಂಡವು ಖಚಿತಪಡಿಸಿಕೊಳ್ಳುತ್ತಿದೆ. ಅವರ ಅಭಿಪ್ರಾಯವನ್ನು ಪಡೆದ ನಂತರ ನಿಖರ ಕಾರಣ ತಿಳಿದುಬರಲಿದೆ ಎಂದು ತಿಳಿಸಿದ್ದಾರೆ.