
ಕಾರವಾರ: ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಹಾಡುಹಕ್ಕಿ, ಪದ್ಮಶ್ರೀ ಸುಕ್ರಿ ಬೊಮ್ಮ ಗೌಡ(88) ಗುರುವಾರ ನಸುಕಿನ ವೇಳೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಡಿಗೇರಿಯ ಸುಕ್ರಜ್ಜಿ ಕಳೆದ ಹಲವು ವರ್ಷದಿಂದ ಉಸಿರಾಟದ ಸಮಸ್ಯೆ ಸೇರಿದಂತೆ ಕೆಲ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಕಳೆದ ಎರಡು ದಿನದ ಹಿಂದೆಯೂ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ವಾಪಸ್ ಆಗಿದ್ದರು. ಆದರೆ ಗುರುವಾರ ಇಂದು ನಸುಕಿನ ಜಾವ ಸುಮಾರು 3.30 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.
ಸುಕ್ರಜ್ಜಿ ಅಂತಾನೇ ಸುಕ್ರಿ ಬೊಮ್ಮಗೌಡ ಜನಪ್ರಿಯರಾಗಿದ್ದರು. ಸುಕ್ರಜ್ಜಿ ಅವರಿಗೆ ಸುಮಾರು 5000 ಕ್ಕೂ ಹೆಚ್ಚು ಹಾಲಕ್ಕಿ ಹಾಡು ಕಂಠಪಾಠ ಇತ್ತು ಹಾಲಕ್ಕಿ ಹಾಡುಗಳ ಕೋಗಿಲೆ ಎಂದು ಪ್ರಸಿದ್ಧರಾಗಗಿದ್ದರು.
2017ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಸುಕ್ರಿ ಬೊಮ್ಮು ಗೌಡ ಅವರನ್ನು ಗೌರವಿಸಲಾಗಿತ್ತು. ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಸುಕ್ರಿ ಬೊಮ್ಮುಗೌಡ ಒತ್ತಾಯ ಮಾಡಿದ್ದರು. ಪರಿಶಿಷ್ಟ ಪಂಗಡಕ್ಕೆ ಸೇರಿಸಲು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ ಹಾಗೂ ಜಿಲ್ಲೆಯ ಅಭಿವೃದ್ಧಿ ಸಂಬಂಧಿಸಿದ ವಿವಿಧ ಹೋರಾಟಗಳಲ್ಲಿ ಸುಕ್ರಜ್ಜಿ ಭಾಗಿಯಾಗಿದ್ದರು.
ಸುಕ್ರಜ್ಜಿಯ ಅಗಲಿಕೆಯಿಂದ ಜಿಲ್ಲೆಯ ಜಾನಪದ ಲೋಕದ ಮೇರು ಕೊಂಡಿ ಕಳಚಿದಂತಾಗಿದೆ. ಸುಕ್ರಿ ಬೊಮ್ಮ ಗೌಡ ನಿಧನಕ್ಕೆ ಜಿಲ್ಲೆಯ ಅನೇಕ ಗಣ್ಯರು, ಸಾಹಿತಿಗಳು, ಜಾನಪದ ಕಲಾವಿದರು, ಜನಸಾಮಾನ್ಯರು ಕಂಬನಿ ಮಿಡಿದಿದ್ದಾರೆ.
ಇನ್ನು ಇತ್ತೀಚೆಗೆ ಹಾಲಕ್ಕಿ ಒಕ್ಕಲಿಗ ಸಮುದಾಯದವರೇ ಆಗಿದ್ದ ವೃಕ್ಷಮಾತೆ ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಕೂಡ ನಿಧನರಾಗಿದ್ದರು. ಅಕ್ಕತಂಗಿಯರಂತೆ ಇದ್ದ ಇಬ್ಬರು ಹಾಲಕ್ಕಿ ಸಮುದಾಯದಲ್ಲಿ ಪದ್ಮಶ್ರೀ ಪುರಸ್ಕೃತರಾಗಿ ಸಮುದಾಯದಲ್ಲಿ ಕಳಸಪ್ರಾಯದಂತಿದ್ದರು.