ಬೆಂಗಳೂರು : ಭೂಸ್ವಾಧೀನ ಪ್ರಕರಣಗಳಲ್ಲಿ ಕರ್ನಾಟಕ ರಾಜ್ಯದ ಪರ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ರಾಜ್ಯ ಸರ್ಕಾರ ಸಲ್ಲಿಸಿದ್ದ ಕೃಷ್ಣಾ ಮೇಲ್ದಂಡೆ ಯೋಜನೆ, ಸಿಂಗಟಾಲೂರು ಏತ ನೀರಾವರಿ ಯೋಜನೆ, ರಾಜ್ಯ ಹೆದ್ದಾರಿ ಯೋಜನೆಗಳು ಸೇರಿ ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ 530 ಭೂಸ್ವಾಧೀನ ಪ್ರಕರಣಗಳ ಮೇಲ್ಮನವಿಗಳನ್ನು ಎತ್ತಿ ಹಿಡಿದಿದೆ.
ರಾಜ್ಯದ ಆರ್ಥಿಕ ಸ್ಥಿತಿಗತಿಗಳ ಮೇಲೆ ವ್ಯಾಪಕ ಪರಿಣಾಮ
ಸುಪ್ರೀಂ ಕೋರ್ಟ್ ನೀಡಿರುವ ಈ ತೀರ್ಪು ರಾಜ್ಯದ ಆರ್ಥಿಕ ಸ್ಥಿತಿಗತಿಗಳ ಮೇಲೆ ವ್ಯಾಪಕ ಪರಿಣಾಮ ಬೀರುವಂತದ್ದಾಗಿದ್ದು, ಕರ್ನಾಟಕ ಸರ್ಕಾರದ ಯಶಸ್ವಿ ಕಾನೂನು ಸವಾಲಿನ ಫಲವಾಗಿ ಪಣದಲ್ಲಿದ್ದ ಹತ್ತು ಸಾವಿರ ಕೋಟಿ ರು.ಗಳ ಸಾರ್ವಜನಿಕ ಹಣ ಉಳಿಸಲು ಅತ್ಯಮೂಲ್ಯವಾದ ಅವಕಾಶ ನೀಡಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.
ಮೂಲಸೌಕರ್ಯ ಯೋಜನೆಗಳಿಗಾಗಿ ಭೂಸ್ವಾಧೀನ
ರಾಜ್ಯ ಸರ್ಕಾರ ವಿವಿಧ ಭಾಗಗಳಲ್ಲಿ ಮೂಲಸೌಕರ್ಯ ಯೋಜನೆಗಳಿಗಾಗಿ ಭೂಸ್ವಾಧೀನ ಪಡಿಸಿಕೊಂಡಿತ್ತು. ಈ ವೇಳೆ ಭೂಸ್ವಾಧೀನ ಅಧಿಕಾರಿಗಳು ನೀಡಿದ ಪರಿಹಾರಕ್ಕಿಂತ ಹೆಚ್ಚಿನ ಪರಿಹಾರಕ್ಕಾಗಿ ಭೂ ಮಾಲೀಕರು ನ್ಯಾಯಾಲಯಗಳಲ್ಲಿ ದಾವೆ ಸಲ್ಲಿಸಿದ್ದರು. ಹೆಚ್ಚಿನ ಪ್ರಕರಣಗಳಲ್ಲಿ ನ್ಯಾಯಾಲಯಗಳು ಸರಿಯಾದ ಮಾರುಕಟ್ಟೆ ಮೌಲ್ಯ ಅಥವಾ ಮಾರ್ಗಸೂಚಿ ಮೌಲ್ಯಗಳನ್ನು ಪರಿಗಣಸದೆ ಅತಿಯಾದ ಮತ್ತು ಸಂಶಯಾಸ್ಪದ ಪರಿಹಾರ ವೃದ್ಧಿಯನ್ನು ಮಂಜೂರು ಮಾಡಿದ್ದವು. ಈ ಆದೇಶಗಳನ್ನು ಪ್ರಶ್ನಿಸಲು ರಾಜ್ಯ ಸರ್ಕಾರವು ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ಸ್ಥಾಪನೆಗಳಲ್ಲಿ ನ್ಯಾಯಸಮ್ಮತ ಪರಿಹಾರ ಮತ್ತು ಪಾರದರ್ಶಕತೆ ಕಾಯ್ದೆ ಅಡಿ ಹೈಕೋರ್ಟ್ಗಳಿಗೆ ಮೇಲ್ಮನವಿಗಳನ್ನು ಸಲ್ಲಿಸಿತ್ತು.
ಆದರೆ, ಹೆಚ್ಚಿನ ಮೇಲ್ಮನವಿಗಳು 120 ದಿನಗಳ ಅವಧಿ ಮೀರಿದ್ದಾಗಿತ್ತು. ಹೀಗಾಗಿ ಇಂಥ ವಿಳಂಬ ಕ್ಷಮಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿ ಹೈಕೋರ್ಟ್ ಆ ಮನವಿಯನ್ನು ವಜಾಗೊಳಿಸಿತ್ತು. ಪರಿಣಾಮವಾಗಿ ಇಂತಹ ಪ್ರಕರಣಗಳ ತಾತ್ವಿಕ ಅಂಶಗಳನ್ನು ಪರಿಶೀಲಿಸದೆ, ರೆಫರೆನ್ಸ್ ಕೋರ್ಟ್ಗಳು ನೀಡಿದ್ದ ಅತಿಯಾದ ಪರಿಹಾರಗಳು ಅಂತಿಮವಾಗುವ ಸಾಧ್ಯತೆಯೇ ಹೆಚ್ಚಾಗಿತ್ತು ಎಂದು ತಿಳಿಸಿದೆ.
ಆದರೆ ಭೂಸ್ವಾಧೀನ ಪ್ರಕರಣಗಳಲ್ಲಿ ವಿಳಂಬ ಅರ್ಜಿಗಳನ್ನು ಪರಿಗಣಿಸುವಾಗ, ಹೈಕೋರ್ಟ್ಗಳು ಉದಾರ ಮತ್ತು ಪ್ರಾಯೋಗಿಕ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಬೇಕು ಎಂದು ಕೋರ್ಟ್ ನಿರ್ದೇಶಿಸಿದೆ. 2013ರ ಕಾಯ್ದೆಯ ಸೆಕ್ಷನ್ 74 ಅಡಿ ನಿಗದಿಪಡಿಸಿದ 120 ದಿನಗಳ ಅವಧಿಯನ್ನು ಮೀರಿದರೂ, ಮಿತಿ ಕಾಯ್ದೆಯ ಸೆಕ್ಷನ್ 5 ಅನ್ನು ಅನ್ವಯಿಸಿ ವಿಳಂಬವನ್ನು ಕ್ಷಮಿಸಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಅನೇಕ ಪ್ರಕರಣಗಳಲ್ಲಿ ರೆಫರೆನ್ಸ್ ಕೋರ್ಟ್ ತೀರ್ಪಿನ ನಂತರ ನಿಗದಿತ ಅವಧಿಯಲ್ಲಿ ಪ್ರಮಾಣಿತ ಪ್ರತಿಗಳ ಅರ್ಜಿಯನ್ನೂ ಸಲ್ಲಿಸಲಾಗಿರಲಿಲ್ಲ ಎಂದು ಕೋರ್ಟ್ ಸೂಚಿಸಿದೆ ಎಂದು ಹೇಳಿದೆ.
ರಾಜ್ಯದ ಖಜಾನೆ ಮೇಲೆ ಉಂಟಾಗುವ ಗಂಭೀರ ಆರ್ಥಿಕ ಪರಿಣಾಮ ಗಮನಿಸಿದ ರಾಜ್ಯ ಸರ್ಕಾರ ಈ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿತು. ಇದೀಗ ಸುಪ್ರೀಂ ಕೋರ್ಟ್ ನೀಡಿರುವ ಆದೇಶದಿಂದ ರಾಜ್ಯ ಸರ್ಕಾರಕ್ಕೆ ಹತ್ತು ಸಾವಿರ ಕೋಟಿ ರು.ಗಳ ನಷ್ಟ ತಪ್ಪಿದಂತಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
