ಟಿ.ನರಸೀಪುರ : ಪ್ರಖ್ಯಾತ ಅಂತರರಾಷ್ಟ್ರೀಯ ಕಂಪ್ಯೂಟರ್ ವಿಜ್ಞಾನಿ ಹಾಗೂ ರೋಬೋಟಿಕ್ ತಜ್ಞರಾದ ಎಸ್. ಎಸ್. ಐಯ್ಯಂಗಾರ್ ರವರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಸಂತೇಮಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಇಂದು ಟಿ ನರಸೀಪುರ ತಾಲೂಕು ಹೆಮ್ಮಿಗೆ ಮೂಲದ ಅಮೆರಿಕದ ಪ್ರಖ್ಯಾತ ಕಂಪ್ಯೂಟರ್ ವಿಜ್ಞಾನಿ ಹಾಗೂ ರೋಬೋಟಿಕ್ ತಜ್ಞರಾದ ಪ್ರೊಫೆಸರ್ ಸುಂದರರಾಜ ಸೀತಾರಾಮ್ ಐಯ್ಯಂಗಾರ್ ಅವರು ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿ ಶಿಕ್ಷಣದ ಮಹತ್ವ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ವಿದ್ಯಾರ್ಥಿಗಳು ಮೊದಲು ಅರಿಯಬೇಕೆಂದರು.
ಬದುಕಿನಲ್ಲಿ ಏನೇ ಕಷ್ಟಗಳು ಬಂದರೂ, ಅವುಗಳನ್ನು ಎದುರಿಸಿ ಶಿಸ್ತು, ಶ್ರದ್ಧೆ ಮತ್ತು ಏಕಾಗ್ರತೆಯಿಂದ ಸಂಬಂಧಿಸಿದ ವಿಷಯಗಳಲ್ಲಿ ಉತ್ತಮ ಶಿಕ್ಷಣವನ್ನು ಪಡೆದು ಶ್ರೇಷ್ಠ ಸಾಧನೆಗಳನ್ನು ಮಾಡಿ ಭಾರತದ ಹೆಮ್ಮೆಯ ಮಕ್ಕಳಾಗಬೇಕೆಂದು ಅತ್ಯಂತ ಪ್ರೀತಿಯಿಂದ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆಚ್.ವಿ.ಉದಯಕುಮಾರ್ ಮಾತನಾಡಿ ಪ್ರೊಫೆಸರ್ ಎಸ್.ಎಸ್. ಐಯ್ಯಂಗಾರ್ ಅವರು ಅಮೇರಿಕಾದ ವಿವಿಧ ವಿಶ್ವವಿದ್ಯಾಲಯಗಳ ಸಂದರ್ಶಕ ಪ್ರಾಧ್ಯಾಪಕರು ಹಾಗೂ ಫ್ಲೋರಿಡಾದ ಅಂತರಾಷ್ಟ್ರೀಯ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ವಿಭಾಗದ ನಿರ್ದೇಶಕರು ಹಾಗೂ ಕಂಪ್ಯೂಟರ್ ವಿಜ್ಞಾನಕ್ಕೆ ಸಂಬಂಧಿಸಿದ ತಮ್ಮ ಹಲವು ಸಂಸ್ಥೆಗಳ ನಿರ್ದೇಶಕರು ಆಗಿರುವುದು ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ ಅವರು ನಿಮ್ಮೆಲ್ಲರಿಗೂ ಸ್ಫೂರ್ತಿಯಾಗಬೇಕೆಂದರು.
ಇದೇ ಸಂದರ್ಭದಲ್ಲಿ ಪ್ರೊಫೆಸರ್ ಅವರು ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಮೆಷಿನ್ ಲಾಂಗ್ವೇಜ್ ಇನ್ನಿತರ ಸಾಫ್ಟ್ವೇರ್ ಗಳನ್ನು ಒಳಗೊಂಡ ವಿಶೇಷವಾದ ಕಂಪ್ಯೂಟರ್ ಅನ್ನು ಕಾಲೇಜಿಗೆ ಕೊಡುಗೆಯಾಗಿ ನೀಡಿ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಲೇಖಕಿ ಕಮಲ ರಾಜೇಶ್, ರಾಜೇಶ್, ಡಾ. ವಿಠ್ಠಲ್, ಡಾ.ನಂದೀಶ್ವರ್, ಕಾಲೇಜಿನ ಗ್ರಂಥಪಾಲಕರಾದ ಡಾ. ಪುಟ್ಟಸ್ವಾಮಿ, ಸಹ ಪ್ರಾಧ್ಯಾಪಕರುಗಳಾದ ಡಾ. ಕವಿತಾ ಡಿ, ಡಾ. ಕೆಂಪರಾಜು ಆರ್, ಸವಿತಾ ಪಿ.ಆರ್. , ಪ್ರೊ. ರಾಮಮೂರ್ತಿ ಬಿ. ಎಂ., ಪ್ರೊ. ಮಹೇಶ, ಪ್ರೊ. ರಾಘವೇಂದ್ರ ಪ್ರಸಾದ ಮತ್ತು ಬೋಧಕೇತರ ವೃಂದ, ವಿದ್ಯಾರ್ಥಿಗಳು ಹಾಜರಿದ್ದರು.
– ಎಂ.ನಾಗೇಂದ್ರ ಕುಮಾರ್
