ಟಿ.ನರಸೀಪುರ : ಸಮಗ್ರ ಅಭಿವೃದ್ಧಿ ಬೆನಿಫಿಟ್ ಫಂಡ್ ನಿಧಿ ಲಿಮಿಟೆಡ್ ಸಂಸ್ಥೆಯು ಸರ್ಕಾರದಿಂದ ಮಾನ್ಯತೆ ಪಡೆದಿದೆ ಎಂದು ಪಿಗ್ಮಿ ಉಳಿತಾಯ ಖಾತೆಯಲ್ಲಿ ಹಣ ಪಡೆದು ಕಿರಣ್ ಕುಮಾರ್ ಎಂಬುವರಿಂದ 1ಲಕ್ಷದ 91 ಸಾವಿರ ರೂಪಾಯಿಗಳನ್ನು ವಂಚಿಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಈ ಸಂಬಂಧ ಹಣ ಕಟ್ಟಿ ವಂಚನೆಗೆ ಒಳಗಾಗಿರುವ ಕಿರಣ್ ಕುಮಾರ್ ಮಾತನಾಡಿ ಸಮಗ್ರ ಅಭಿವೃದ್ಧಿ ಹೆಸರಿನ ಖಾಸಗಿ ಸಂಸ್ಥೆ ಆರಂಭದಲ್ಲಿ ಗ್ರಾಹಕರಿಂದ ಸಣ್ಣ,ಸಣ್ಣ ಮೊತ್ತದ ಹಣ ಕಟ್ಟಿಸಿಕೊಂಡು ವಾಪಸ್ಸು ನೀಡಿದ್ದರು.ನಂಬಿಕೆ ಗಳಿಸಿಕೊಂಡು ದೊಡ್ಡ ಮೊತ್ತದ ಹಣವನ್ನು ದಿನ ನಿತ್ಯ ಕಟ್ಟಿಸಿಕೊಂಡು ಈಗ ಸಂಸ್ಥೆಯವರು ನಾಪತ್ತೆಯಾಗಿದ್ದು ಮೋಸ ಮಾಡಿರುತ್ತಾರೆ.ನಾವು ಪೊಲೀಸ್ ಠಾಣೆಗೆ ಹೋಗಿ ದೂರು ನೀಡುತ್ತಿದ್ದೇವೆ.ಸಾರ್ವಜನಿಕರು ಇಂತಹ ನಂಬಿಕೆಗೆ ಅರ್ಹವಲ್ಲದ ಹಣಕಾಸು ಸಂಸ್ಥೆಗಳಿಗೆ ಹಣ ಕಟ್ಟಿ ಮೋಸ ಹೋಗಬೇಡಿ ಎಂದು ಮನವಿ ಮಾಡಿದರು.
ನಿರುದ್ಯೋಗ ಸಮಸ್ಯೆಯಿಂದ ದೇಶದಲ್ಲಿ ನನ್ನಂತಹ ಎಷ್ಟೋ ಕೋಟಿ ಯುವಕರು ಸ್ವಂತ ಸಣ್ಣ,ಸಣ್ಣ ಉದ್ಯಮವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ.ಮೊಬೈಲ್ ರಿಪೇರಿ ಕೆಲಸ ಮಾಡಿಕೊಂಡು ಬಂದ ಹಣದಲ್ಲಿ ಪ್ರತಿದಿನ ಸ್ವಲ್ಪ ಉಳಿತಾಯ ಮಾಡುವ ದೃಷ್ಟಿಯಿಂದ ಪಿಗ್ಮಿ ಕಟ್ಟಿಕೊಂಡು ಹೋಗುತ್ತಿದ್ದೆ.ಇಂತಹ ಮೋಸ ಮಾಡುವ ಸಂಸ್ಥೆಗಳಿಗೆ ಮುಂದೆ ಯಾರೂ ಮಾರು ಹೋಗಬೇಡಿ.ಸರ್ಕಾರ ಹಾಗೂ ಪೊಲೀಸ್ ಇಲಾಖೆ ಇಂತಹವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು.ಎಂದು ಕಿರಣ್ ಕುಮಾರ್ ಮನವಿ ಮಾಡಿದ್ದಾರೆ.
ವರದಿ : ಎಂ ನಾಗೇಂದ್ರ ಕುಮಾರ್
