ಟಿ.ನರಸೀಪುರ : ಫುಟ್ ಪಾತ್ ವ್ಯಾಪಾರಿಗಳಿಗೆ ಸ್ಥಳಾವಕಾಶ ಕಲ್ಪಿಸದ ಪುರಸಭೆ ಆಡಳಿತ ವರ್ಗ…! ಪಟ್ಟಣದ ಮುಖ್ಯ ರಸ್ತೆಗಳಲ್ಲಿ ವಾಹನ ಸವಾರರು ಸಂಚರಿಸಲು ಪರದಾಟ…!ಪಾದಚಾರಿಗಳಿಗೆ ಸುಗಮವಾಗಿ ಓಡಾಡಲು ಸ್ಥಳಾವಕಾಶವಿಲ್ಲದೆ ಹಿಡಿಶಾಪ ಹಾಕುತ್ತಿರುವ ಪಟ್ಟಣ ಸೇರಿದಂತೆ ತಾಲ್ಲೂಕಿನ ಜನತೆ.
ಟಿ.ನರಸೀಪುರ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ವ್ಯಾಪಾರ ವಹಿವಾಟುಗಳು ಹೆಚ್ಚುತ್ತಿರುವ ಕಾರಣ,ಗ್ರಾಹಕರೂ ಸಹ ಹೆಚ್ಚುತ್ತಿದ್ದಾರೆ.ಕಾಂಗ್ರೆಸ್ ಸರ್ಕಾರದ ಶಕ್ತಿ ಹಾಗೂ ಗೃಹಲಕ್ಷಿ ಯೋಜನೆಗಳು ಗ್ರಾಮಾಂತರ ಪ್ರದೇಶದ ಮಹಿಳೆಯರನ್ನು ಪಟ್ಟಣ ನೋಡುವಂತೆ ಮಾಡಿದ್ದು ತಮ್ಮ ದಿನ ನಿತ್ಯದ ಬದುಕಿಗೆ ಬೇಕಿರುವ ದಿನಸಿ ಸಾಮಗ್ರಿಗಳು ಸೇರಿದಂತೆ ಹಬ್ಬ,ಹರಿದಿನ ಹಾಗೂ ವಿಶೇಷ ಸಂದರ್ಭಗಳಲ್ಲಿ ಬಟ್ಟೆ,ಬರೆ,ಚಿನ್ನ,ಬೆಳ್ಳಿ,ಹೂ,ಹಣ್ಣು,ತರಕಾರಿಗಳು,ಪಾತ್ರೆ ಪನ್ನಂಗಗಳು ಸೇರಿದಂತೆ ಇತರೆ ಎಲ್ಲಾ ಅಗತ್ಯ ಸಾಮಗ್ರಿಗಳನ್ನು ಕೊಂಡುಕೊಳ್ಳಲು ಟಿ.ನರಸೀಪುರ ಪಟ್ಟಣಕ್ಕೆ ಆಗಮಿಸುತ್ತಾರೆ.
ಜೊತೆ,ಜೊತೆಗೆ ಶಾಲಾ,ಕಾಲೇಜು ವಿದ್ಯಾರ್ಥಿಗಳು ಸರ್ಕಾರಿ ಬಸ್ ನಿಲ್ದಾಣದಲ್ಲಿ ಇಳಿದು ತಮ್ಮ ಶಾಲೆ,ಕಾಲೇಜುಗಳಿಗೆ ತೆರಳಲು ಪ್ರಮುಖ ರಸ್ತೆಗಳಾದ ಸರ್ಕಾರಿ ಬಸ್ ನಿಲ್ದಾಣ,ಭಗವಾನ್ ವೃತ್ತ ಹಾಗೂ ಲಿಂಕ್ ರಸ್ತೆಗಳನ್ನು ಅವಲಂಬಿಸಿರುತ್ತಾರೆ.ಫುಟ್ಪಾತ್ ವ್ಯಾಪಾರಿಗಳು ಹಾಗೂ ಅತಿಯಾದ ವಾಹನ ಸಂಚಾರಗಳಿಂದ ಪಾದಚಾರಿಗಳು ನಿರಮ್ಮಳಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ.

ಈ ಹಿಂದೆ ಪುರಸಭೆ ಮುಖ್ಯಾಧಿಕಾರಿಗಳು ವ್ಯಾಪಾರಿಗಳಿಗೆ ಬೇರೆ ಸ್ಥಳಾವಕಾಶ ಕಲ್ಪಿಸಿ ಪೊಲೀಸ್ ಇಲಾಖೆ ಸಹಾಯ ಪಡೆದು ಫುಟ್ ಪಾತ್ ವ್ಯಾಪಾರಿಗಳನ್ನು ಸ್ಥಳಾಂತರಗೊಳಿಸಿದ್ದರು.ಅದನ್ನು ವ್ಯಾಪಾರಿಗಳು ಒಪ್ಪದೆ ಸರ್ಕಾರಿ ಬಸ್ ನಿಲ್ದಾಣದ ಬಳಿಯೇ ಅವಕಾಶ ಕಲ್ಪಿಸಿಕೊಡುವಂತೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡಿದ್ದರು.ನಂತರ ಅವರ ಹೊಟ್ಟೆ ಮೇಲೆ ಹೊಡೆಯುವುದು ಬೇಡ ಎಂದು ಕೆಲವು ಸ್ಥಳೀಯ ಜನ ಪ್ರತಿನಿಧಿಗಳು ರಾಜಕೀಯ ಪ್ರಭಾವ ಬೀರಿ ಆ ಸ್ಥಳದಲ್ಲಿಯೇ ಪುನಃ ವ್ಯಾಪಾರ ವಹಿವಾಟು ಮಾಡಲು ಅವಕಾಶ ಕಲ್ಪಿಸಿದ್ದರು.
ಗಾರ್ಮೆಂಟ್ಸ್ ಗೋಗುವ ಮಹಿಳಾ ಕಾರ್ಮಿಕರು ಮೈಸೂರು, ಚಾಮರಾಜನಗರ ಸೇರಿದಂತೆ ತಾಲ್ಲೂಕಿನ ವಿವಿಧ ಭಾಗಗಳಿಗೆ ಸರ್ಕಾರಿ ಬಸ್ಸುಗಳನ್ನು ಅವಲಂಬಿಸಿರುವುದರಿಂದ ಹಣ್ಣು,ತರಕಾರಿಗಳನ್ನು ಕೊಳ್ಳಲು ಸರ್ಕಾರಿ ಬಸ್ ನಿಲ್ದಾಣದ ಗೋಪಾಲಪುರ ಹಾಗೂ ಪಟ್ಟಣಕ್ಕೆ ಹಾದುಹೋಗುವ ಮುಖ್ಯ ರಸ್ತೆಯ ಫುಟ್ ಪಾತ್ ವ್ಯಾಪಾರಿಗಳಿಂದ ಖರೀದಿ ಮಾಡುವಾಗ ವಾಹನ ಸವಾರರಿಗೆ ಸಂಚರಿಸಲು ಸ್ಥಳಾವಕಾಶವೇ ಇಲ್ಲದಾಗಿದೆ.

ದಿನದಿಂದ ದಿನಕ್ಕೆ ವಿದ್ಯಾರ್ಥಿಗಳು, ಪಾದಚಾರಿಗಳು,ವಾಹನಗಳ ಸಂಚಾರ ಹೆಚ್ತುತ್ತಾ ಹೋದಂತೆ ಸುಗಮ ಸಂಚಾರಕ್ಕೆ ಅಡಚಣೆಯಾಗಿದ್ದು,ಫುಟ್ ಪಾತ್ ವ್ಯಾಪಾರಿಗಳಿಗೆ ಒಂದು ಕಡೆ ಅವಕಾಶ ಕಲ್ಪಿಸಿ ಅವರ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟು ಪಟ್ಟಣ ಹಾಗೂ ತಾಲ್ಲೂಕಿನ ಜನತೆ ಸುಗಮ ಸಂಚಾರಕ್ಕೆ ಪುರಸಭೆ ಆಡಳಿತ ವರ್ಗ ಹಾಗೂ ಪೊಲೀಸ್ ಇಲಾಖೆ ಅವಕಾಶ ಕಲ್ಪಿಸಿಕೊಡಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
– ಎಂ.ನಾಗೇಂದ್ರಕುಮಾರ್
