ವರದಿ: ಎಂ.ನಾಗೇಂದ್ರ ಕುಮಾರ್
ಟಿ. ನರಸೀಪುರ, ಜುಲೈ 28: ಪಟ್ಟಣದ ಭಗವಾನ್ ಚಿತ್ರಮಂದಿರದ ಸರ್ಕಲ್ ಸಮೀಪದ ಸೀನು ಫ್ಯಾಷನ್ ಬಟ್ಟೆ ಅಂಗಡಿಯಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಅಂಗಡಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಅಂದಾಜು ಸುಮಾರು ಒಂದೂವರೆ ಕೋಟಿ ರೂಪಾಯಿ ಮೌಲ್ಯದ ಬಟ್ಟೆಗಳು ಬೆಂಕಿಗಾಹುತಿಯಾಗಿದೆ ಎಂದು ಪ್ರಾಥಮಿಕ ಮಾಹಿತಿ. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಕ್ಷಿಪ್ರವಾಗಿ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು.
ಸ್ಥಳಕ್ಕೆ ಪೊಲೀಸರು ಕೂಡ ಆಗಮಿಸಿ ಪರಿಶೀಲನೆ ನಡೆಸಿದ್ದು, ಬೆಂಕಿ ಅವಘಡದ ನಿಖರ ಕಾರಣ ತಿಳಿದುಬಂದಿಲ್ಲ. ಶಾರ್ಟ್ ಸರ್ಕ್ಯೂಟ್ ಶಂಕೆ ವ್ಯಕ್ತವಾಗಿದ್ದರೂ, ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.
ಅಂಗಡಿಯ ಮಾಲೀಕರು ಈ ಅಪಘಾತದಿಂದ ಶಾಕ್ಗೆ ಒಳಗಾಗಿದ್ದು, ಸ್ಥಳೀಯ ವ್ಯಾಪಾರ ವಲಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
