ಟಿ.ನರಸೀಪುರ : ಮುಖ್ಯಮಂತ್ರಿಗಳು ಹಾಗೂ ಸಚಿವರು ಪ್ರತಿನಿಧಿಸುವ ಕ್ಷೇತ್ರವಾಗಿರುವುದರಿಂದ ಈ ಕ್ಷೇತ್ರದ ವ್ಯಾಪ್ತಿಯ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆ ತೋರದಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕೆಂದು ತಾಲ್ಲೂಕು ಪಂಚಾಯತಿ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಕೆ.ರಂಗಸ್ವಾಮಿ ಸೂಚನೆ ನೀಡಿದರು.
ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಯೋಗದೊಂದಿಗೆ ತಾಲ್ಲೂಕು ವ್ಯಾಪ್ತಿಯ 36 ಗ್ರಾಮ ಪಂಚಾಯಿತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕಂಪ್ಯೂಟರ್ ಆಪರೇಟರ್ಗಳು ಹಾಗೂ ನೀರುಗಂಟಿಗಳ ಕುಡಿಯುವ ನೀರಿನ ನಿರ್ವಹಣೆ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ಬೇಸಿಗೆ ಸಮೀಪಿಸುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮವಹಿಸಬೇಕು.ಸಾರ್ವಜನಿಕರಿಂದ ನಿಮ್ಮ,ನಿಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಕುಡಿಯುವ ನೀರಿನ ಸಂಬಂಧ ದೂರುಗಳು ಬಂದ ತಕ್ಷಣ ಅದನ್ನು ಬಗೆ ಹರಿಸುವತ್ತ ಗಮನ ನೀಡಬೇಕು.ಶಾಸಕರುಗಳ ಗಮನಕ್ಕೆ ದೂರುಗಳು ಹೋಗದಂತೆ ಕರ್ತವ್ಯ ನಿರ್ವಹಿಸಬೇಕೆಂದು ಕಟ್ಟು ನಿಟ್ಟಿನ ಸೂಚನೆ ನೀಡಿದರು.
ಒಂದು ವೇಳೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ನಿರ್ಲಕ್ಷತೆಯಿಂದ ಕುಡಿಯುವ ನೀರಿನ ಅಭಾವ/ತೊಂದರೆ ಎದುರಾದಲ್ಲಿ ಸಂಬಂಧಪಟ್ಟ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಹಾಗೆಯೇ ಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲಾ ಕುಡಿಯುವ ನೀರಿನ ಸ್ಥಾವರಗಳನ್ನು ಆಗಿಂದಾಗ್ಗೆ ಸ್ವಚ್ಛಗೊಳಿಸಿ ಎಲ್ಲಾ ಸಾರ್ವಜನಿಕರಿಗೂ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡಲು ಎಚ್ಚರಿಕೆ ನೀಡಲಾಯಿತು.
– ಎಂ.ನಾಗೇಂದ್ರಕುಮಾರ್
