ಟಿ.ನರಸೀಪುರ : ಎಸ್ಎಲ್ಎನ್ ಎಂಟರ್ ಪ್ರೈಸಸ್ ಟೆಂಡರ್ ದಾರರು ಸರ್ಕಾರಿ ಆಸ್ಪತ್ರೆಯಲ್ಲಿ ನಾನ್ ಕ್ಲೀನಿಕ್ ಹಾಗೂ ಡಿ ಗ್ರೂಪ್ ನೌಕರರಿಗೆ ಕೊಡುವ ಸಂಬಳದಲ್ಲಿ ಲಂಚ ಪಡೆದು ತಿಂಗಳಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲವೆಂದು ಆರೋಪಿಸಿ ಇಂದು ಕೆಲಸಕ್ಕೆ ಗೈರಾಗುವ ಮೂಲಕ ಪ್ರತಿಭಟನೆ ನಡೆಸಿ ನಮಗೆ ನ್ಯಾಯ ಕೊಡಿಸಬೇಕೆಂದು ಮನವಿ ಮಾಡಿದ್ದಾರೆ.

ಸರ್ಕಾರಿ ಆಸ್ಪತ್ರೆ ಮುಂಭಾಗ ಕೆಲಸಕ್ಕೆ ಗೈರಾಗಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ (ಭೀಮವಾದ) ರಾಜ್ಯ ವಿಭಾಗೀಯ ಸಂಚಾಲಕ ಆಲಗೂಡು ಡಾ.ಎಸ್.ಚಂದ್ರಶೇಖರ್ ಇವರ ನೆರವಿಗೆ ಧಾವಿಸಿ ಬಂದು ಮನವಿ ಆಲಿಸಿ ಮಾತನಾಡಿ ನಮ್ಮ ಎಂಜಲು,ನಮ್ಮ ಗಲೀಜುಗಳನ್ನು ನೋಡಲು ಅಸಹ್ಯ ಪಡುವ ನಾವು ಇಂತಹ ನೌಕರರು ಹೊಟ್ಚೆ ಪಾಡಿಗಾಗಿ ಯಾವುದೇ ಹಿಂಜರಿಕೆ,ಅಸಹ್ಯವಿಲ್ಲದೇ ಆಸ್ಪತ್ರೆಯ ಎಲ್ಲಾ ಗಲೀಜುಗಳನ್ನು ಸ್ವಚ್ಚಗೊಳಿಸಿ ನೈರ್ಮಲ್ಯ ಕಾಪಾಡುವಂತಹವರಿಗೆ ಸಮಯಕ್ಕೆ ಸರಿಯಾಗಿ ಸಂಬಳ ಮಾಡದೇ ಅವರು ಕಷ್ಟಪಟ್ಟು ದುಡಿದ ಹಣದಲ್ಲೂ ಪಾಲು ಕೇಳಿ ಕಸಿದುಕೊಂಡು ತಿನ್ನುವ ಟೆಂಡರ್ ದಾರರನ್ನು ಕೂಡಲೇ ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿದರು.

ಮುಖ್ಯಮಂತ್ರಿಗಳ ತವರು ಕ್ಷೇತ್ರದಲ್ಲಿ ಅಸಾಯಕ ನೊಂದ ಜನತೆಗೆ ಅನ್ಯಾಯವಾಗುತ್ತಿದೆ.ಈ ಸಮಸ್ಯೆಯ ಬಗ್ಗೆ ಖುದ್ದು ಮುಖ್ಯಮಂತ್ರಿಗಳ ಗಮನ ಸೆಳೆಯಲು ನಮ್ಮ ಸಂಘಟನೆ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು. ಇಂತಹ ನೌಕರರ ಬಗ್ಗೆ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿಗಳು ಖುದ್ದು ಗಮನ ಹರಿಸಿ ಟೆಂಡರ್ ದಾರರೊಂದಿಗೆ ಮಾತನಾಡಿ ನ್ಯಾಯ ಕಲ್ಪಿಸುವ ಜವಾಬ್ದಾರಿ ಇದೆ.ಆದರೆ ಆ ಕೆಲಸ ನೀವು ಮಾಡುತ್ತಿಲ್ಲವಾದ್ದರಿಂದ ನಿಮ್ಮ ಮೇಲೂ ನಾವು ಅನುಮಾನ ಪಡುವ ಸಂದರ್ಭ ಬಂದಾಗ ನೀವು ಕೂಡ ಹೊಣೆಗಾರರಾಗುತ್ತೀರಿ ಎಂದರು.
ಎಲ್ಲಾ ನೌಕರರ ದೂರು ಒಂದೇ, ತಿಂಗಳು,ತಿಂಗಳು ಸಂಬಳ ನೀಡದೇ,ಸಂಬಳ ನೀಡುವಾಗ ನಾನ್ ಕ್ಲೀನಿಕ್ ನೌಕರರ ಬಳಿ 1,500 ರೂ ಹಾಗೂ ಡಿ ಗ್ರೂಪ್ ನೌಕರರ ಬಳಿ 2,000 ರೂ ಲಂಚ ಪಡೆದು ಸಂಬಳ ನೀಡುತ್ತಿದ್ದು ನಮ್ಮ ಜೀವನ ದುಸ್ತರವಾಗಿದೆ.ಸರ್ಕಾರ ನಿಗದಿ ಪಡಿಸಿರುವ ಸಂಬಳವನ್ನು ಪೂರ್ತಿಯಾಗಿ ನೀಡಬೇಕು,ನಮ್ಮ ಸಂಬಳದಲ್ಲಿ ಯಾವುದೇ ಕಮೀಷನ್ ಪಡೆಯಬಾರದು ಹಾಗೂ ಪ್ರತಿ ತಿಂಗಳು ನಮಗೆ ಸಂಬಳ ನೀಡುವಂತೆ ಒತ್ತಾಯಿಸಿ ತಮ್ಮ ಅಳಲನ್ನು ತೋಡಿಕೊಂಡರು.

ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಡೆನ್ನಿಸ್ ಸ್ಯಾಮ್ಯುಯೆಲ್ ಮಾತನಾಡಿ ಟೆಂಡರ್ ದಾರರು ಕೊಡುವ ಸಂಬಳದಲ್ಲಿ ಲಂಚ ತೆಗೆದುಕೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ ಎಂದಾಗ ನೌಕರರು ಇವರಿಗೆ ದೂರು ಸಲ್ಲಿಸಿದ್ದೇವೆಂದರು.ಇನ್ನೆರೆಡು ದಿನದಲ್ಲಿ ಸಂಬಳ ನೀಡಲು ಕ್ರಮ ವಹಿಸುವುದಾಗಿ ತಿಳಿಸಿದಾಗ,ಒಂದು ವೇಳೆ ಆಗದಿದ್ದರೆ ದಸಂಸ ನಿಮ್ಮ ವಿರುದ್ಧ ಆಸ್ಪತ್ರೆ ಮುಂಭಾಗ ಪ್ರತಿಭಟನೆ ಮಾಡಬೇಕಾಗುತ್ತದೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಅಭಿಲಾಶ್, ನಾನ್ ಕ್ಲೀನಿಕ್ ಸಿಬ್ಬಂದಿಗಳಾದ ರಾಧಮ್ಮ,ನೀಲಮ್ಮ,ಮಂಜುಳ,ಶಾಂತಮ್ಮ,ಮಹದೇವಮ್ಮ,ರಾಧ,ಅರುಣ್ ಕುಮಾರ್ ಡಿ.ಗ್ರೂಪ್ ಸಿಬ್ಬಂಧಿಗಳಾದ ರಾಜೇಶ್,ಮಲ್ಲಿಕಾರ್ಜುನ, ಶ್ರೀಧರ್,ಯೋಗೇಶ್,ರೇವಣ್ಣ,ರಾಜೇಶ್,ಪ್ರಕಾಶ್,ಚಿಕ್ಕರಾಜು,ನಾಗಮ್ಮ,ಶೋಭಾ ಹಾಗೂ ಕಾವ್ಯ ಇದ್ದರು.
ಎಂ.ನಾಗೇಂದ್ರಕುಮಾರ್
