ಟಿ.ನರಸೀಪುರ : ವಿದ್ಯೋದಯ ಶಿಕ್ಷಣ ಸಂಸ್ಥೆಯಲ್ಲಿ ಬಿಸಿಯೂಟ ಯೋಜನೆ ಹೆಸರಿನಲ್ಲಿ ನಡೆಯುತ್ತಿದ್ದ ಅನುದಾನ ದುರುಪಯೋಗ,ನಕಲಿ ಬಿಲ್ಗಳ ಸೃಷ್ಟಿ ಮತ್ತು ಲೆಕ್ಕಪತ್ರ ಗೊಂದಲಗಳ ಬಗ್ಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಬಣ) ಜಿಲ್ಲಾ ಸಂಚಾಲಕ ಸೋಸಲೆ ರಾಜಶೇಖರ್ ದಾಖಲೆ ಬಿಡುಗಡೆ ಮಾಡಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ“ಬಿಸಿಯೂಟಕ್ಕೆ ಬಂದಿರುವ ಸರ್ಕಾರದ ಹಣವನ್ನು ಶಾಲೆ ವ್ಯವಸ್ಥಿತವಾಗಿ ದುರುಪಯೋಗ ಮಾಡಿದೆ.ಕೆಲ ಅಕ್ರಮಗಳನ್ನು ಆರ್ ಟಿ ಐ ಮೂಲಕ ಬಹಿರಂಗ ಪಡಿಸಲಾಗಿದೆ ಎಂದರು.
ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಅಸಮಾನತೆ,ಹಾಜರಿಲ್ಲದ ಮಕ್ಕಳಿಗೂ ಹಾಜರಾತಿ ದಾಖಲು,ನಕಲಿ ಬಿಲ್ಗಳ ಸೃಷ್ಟಿ,ಬಿಸಿಯೂಟ ವೆಚ್ಚದ ಲೆಕ್ಕಪತ್ರ ಗೊಂದಲ ಅನುದಾನ ದುರುಪಯೋಗದ ಸಾಕ್ಷ್ಯಗಳು ಹೀಗೆ ಎಲ್ಲಾ ಅಕ್ರಮಗಳನ್ನು ಬಿ.ಎಂ. ನವೀನ್ ರವರು ಮಾಹಿತಿ ಹಕ್ಕು ಕಾಯ್ದೆಯಡಿ ಮೂಲಕ ಪಡೆದು ಬಹಿರಂಗ ಪಡಿಸಿದ್ದಾರೆಂದರು.
28-10-2025 ರಂದು ಜಿಲ್ಲಾ ಪಂಚಾಯತ್ ಮೈಸೂರು ಪಿ.ಎಂ. ಪೋಷಣ್ ವಿಭಾಗ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ತಂಡ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ. ವರದಿಯಲ್ಲಿ ಬಿಸಿಯೂಟ ಲೆಕ್ಕಪತ್ರ ಸರಿಯಾಗಿ ನಿರ್ವಹಣೆಗೊಂಡಿಲ್ಲ,ಅಡುಗೆ ಸಹಾಯಕರ ನೇಮಕಾತಿಯಲ್ಲಿ ಮಾರ್ಗಸೂಚಿ ಉಲ್ಲಂಘನೆ,ದಾಖಲೆಗಳ ಅಸ್ಪಷ್ಟತೆ ಇದೆ ಎಂದು ತಿಳಿಸಿದರು.
ಇದನ್ನು ಓದಿ: ಟಿ.ನರಸೀಪುರ : ಡಿ.14ರಂದು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಬಹುಮಾನ ವಿತರಣೆ ಹಾಗೂ “ಭೀಮ ಗೀತಾ ಗಾಯನ” ಕಾರ್ಯಕ್ರಮ
ಶಾಲೆಯ ಮುಖ್ಯ ಶಿಕ್ಷಕರು ಸಹ ಶಿಕ್ಷಕರಿಗೆ ಗೈರು ಹಾಜರಾತಿ ಮಕ್ಕಳ ಹೆಸರಿನಲ್ಲಿ ಹಾಜರಾತಿ ದಾಖಲಿಸಲು ಒತ್ತಡ ಹಾಕಿದ್ದು, ನಕಲಿ ಬಿಲ್ಗಳಿಗೆ ಸಹಿ ಮಾಡಿಸಲು ಒತ್ತಾಯ ಮಾಡಿದ್ದಾರೆ. ಕೆಲ ಶಿಕ್ಷಕರ ಮೇಲೆ ಜಾತಿ ಆಧಾರಿತ ಪ್ರಕರಣ ದಾಖಲಿಸಲು ಸೂಚನೆ ನೀಡಿರುವುದು ವರದಿಯಲ್ಲಿ ಉಲ್ಲೇಖವಾಗಿದೆ ಎಂದರು.
ಶಾಲೆಯ ಗ್ರಂಥಪಾಲಕರು ಮತ್ತು ಆಡಳಿತ ಮಂಡಳಿಯ ಕೆಲವು ಸದಸ್ಯರು ದೂರುದಾರರಿಗೆ ಒತ್ತಡ ಹಾಕಿ ಪ್ರಕರಣದಿಂದ ಹಿಂದೆ ಸರಿಯುವಂತೆ ಒತ್ತಾಯಿಸಿದ್ದಾರೆ. ದೂರು ಹೊರಬಿದ್ದ ನಂತರ ಮಾತ್ರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಭೇಟಿ ಸಂಭವಿಸಿದ್ದು, ಅಧಿಕಾರಿಗಳ ಕಾರ್ಯನೈಪುಣ್ಯಕ್ಕೂ ಪ್ರಶ್ನೆ ಎಬ್ಬಿಸಿದೆ.2021ರಿಂದ 2025ರವರೆಗೆ ದುರುಪಯೋಗಗೊಂಡ ಕೆಲವು ಮೊತ್ತವನ್ನು ಶಾಲೆಯವರು ಸರ್ಕಾರಕ್ಕೆ ಮರುಪಾವತಿಸಿದ್ದಾರೆ. ಎಂದು ಹೇಳಿದ ಸೋಸಲೆ ರಾಜಶೇಖರ್ “2008ರಿಂದ ಪೂರ್ಣ ಪರಿಶೀಲನೆ ನಡೆದರೆ ಇನ್ನಷ್ಟು ದುರುಪಯೋಗ ಹೊರ ಬರುವ ಸಾಧ್ಯತೆ ಹೆಚ್ಚಿದೆ ಎಂದರು.
ಕರ್ನಾಟಕ ಶಿಕ್ಷಣ ಕಾಯಿದೆ 1983ರ ಕಲಂ 53ರಡಿ ಮೂವರು ಶಿಕ್ಷಕರ ಅಮಾನತು ಶಿಫಾರಸು ಮಾಡಿದ್ದರೂ, ಆಡಳಿತ ಮಂಡಳಿ ಕ್ರಮ ಕೈಗೊಂಡಿಲ್ಲ.ರಾಜಕೀಯ ಒತ್ತಡದಿಂದ ವಿಚಾರಣೆ ನಿಲ್ಲಿಸಲಾಗಿದೆ.ವಿದ್ಯೋದಯ ಶಾಲೆಗೆ ಅನುದಾನ ತಾತ್ಕಾಲಿಕವಾಗಿ ತಡೆಹಿಡಿಯಬೇಕು, ಮಾನ್ಯತೆ ನವೀಕರಣ ರದ್ದುಪಡಿಸಬೇಕು ಹಾಗೂ ಸಂಬಂಧಿತ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸಮಿತಿ ಮನವಿ ಸಲ್ಲಿಸಿದೆ.ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಧರಣಿಗೆ ಇಳಿಯುತ್ತೇವೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಸಂಚಾಲಕರಾದ ಕುಂತನಹಳ್ಳಿ ಪುರುಷೋತ್ತಮ್,ಕೋಣಗಳ್ಳಿ ಮಹೇಶ್,ಅತ್ತಹಳ್ಳಿ ರವಿ,ಸದಸ್ಯರಾದ ಸೋಸ್ಲೆ ನಾರಾಯಣ್,ಬಿ.ಎಂ.ನವೀನ್, ಕುಂತನಹಳ್ಳಿ ಗೋಪಿ ಹಾಜರಿದ್ದರು.
- ಎಂ.ನಾಗೇಂದ್ರ ಕುಮಾರ್
