ಟಿ.ನರಸೀಪುರ : ತೋಟಗಾರಿಕೆ ಇಲಾಖೆಯಲ್ಲಿ ಡಿ.ಬಿ.ಪ್ರೇಮಕುಮಾರ್ ಎಂಬ ವ್ಯಕ್ತಿಯನ್ನು ಹೊರಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ತೆಗೆದುಕೊಂಡು 14 ವರ್ಷಗಳ ಸೇವೆ ಪಡೆದು ಈಗ ಏಕಾಏಕಿ ಕೆಲಸದಿಂದ ತೆಗೆದು ಹಾಕಿ 11ತಿಂಗಳ ವೇತನವನ್ನು ನೀಡದಿರುವ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳದಿದ್ದರೆ ಅನಿರ್ಧಿಷ್ಟಾವಧಿ ಧರಣಿ ಕೈಗೊಳ್ಳಬೇಕಾಗುತ್ತದೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ವಿಭಾಗೀಯ ಸಂಚಾಲಕರಾದ ಡಾ.ಆಲಗೂಡು ಎಸ್.ಚಂದ್ರಶೇಖರ್ ಎಚ್ಚರಿಸಿದರು.
ಟಿ.ನರಸೀಪುರ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ತೋಟಗಾರಿಕೆ ಇಲಾಖೆಯ ಹೊರ ಆವರಣದಲ್ಲಿ ದಸಂಸ ವಿಭಾಗೀಯ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿ ಮಾತನಾಡಿ, ಇಲ್ಲಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಡಿ.ಬಿ.ಪ್ರೇಮಕುಮಾರ್ ರವರನ್ನು 2025 ಏಪ್ರಿಲ್ ತಿಂಗಳಲ್ಲಿ ಕೆಲಸದಿಂದ ತೆಗೆದು ಹಾಕಿದ್ದಾರೆ.ಈ ವಿಷಯಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಡಾ.ಹೆಚ್.ಸಿ.ಮಹದೇವಪ್ಪರವರು ಹಾಗೂ ಸಂಸದರಾದ ಸುನಿಲ್ ಬೋಸ್ ರವರು ಬಾಕಿ ವೇತನ ನೀಡಿ, ಕರ್ತವ್ಯದಲ್ಲಿ ಮುಂದುವರೆಸುವಂತೆ ಹೇಳಿದ್ದರೂ ಅವರ ಮಾತಿಗೂ ಮನ್ನಣೆ ನೀಡದಿರುವುದು ಇವರ ಉದ್ಧಟತನಕ್ಕೆ ಸಾಕ್ಷಿಯಾಗಿದೆ ಎಂದರು.

ಒಬ್ಬ ಜವಾಬ್ದಾರಿಯುತ ಅಧಿಕಾರಿಯಾಗಿ ಕ್ರಿಯಾ ಯೋಜನೆ ಅನುಮೋದನೆಯಾಗದೇ ತೋಟಗಾರರ ಸೇವೆಯನ್ನು ಪಡೆದಿರುತ್ತೀರಿ?ಇಲಾಖೆಗೆ ತೋಟಗಾರರನ್ನು ನೇಮಿಸಿಕೊಂಡಿರುವ ಬಗ್ಗೆ ಕಛೇರಿಗೆ ಮಾಹಿತಿ ನೀಡಿದ್ದೀರಾ?ಎಂದು ಕಾರಣ ಕೇಳಿ 6 ತಿಂಗಳಾದರು ಉತ್ತರ ನೀಡದಿರುವ ಅಧಿಕಾರಿಯ ಕರ್ತವ್ಯ ಬೇಜವಾಬ್ದಾರಿತನಕ್ಕೆ ಕಾರಣವಾಗಿದೆ ಎಂದು ದೂರಿದರು.
ಡಿಸೆಂಬರ್ 2024 ರಿಂದ ಮಾರ್ಚ್ 2025 ರವರೆಗೆ ಅವಧಿಯ ಪೂರ್ಣ ವೇತನವನ್ನು ಏಜೆನ್ಸಿ ಮೂಲಕ ಪಾವತಿಸಲಾಗಿದೆ ಎಂದು ಹೇಳಿದ ಮೇಲೆ ಜನವರಿ 2024 ರಿಂದ ನವಂಬರ್ ವರೆಗೆ ಒಟ್ಟು 11 ತಿಂಗಳ ಬಾಕಿ ವೇತನ ಮೊತ್ತ ತಿಂಗಳಿಗೆ 13,500 ರಂತೆ ಒಟ್ಟು1,48,500 ರೂಗಳನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ.ಆರ್ಥಿಕವಾಗಿ ಸಂಕಷ್ಟದಲ್ಲಿರುವ ಈತನಿಗೆ ನ್ಯಾಯ ದೊರಕಿಸಿ ಕೊಡಬೇಕು.ಕ್ರಿಯಾ ಯೋಜನೆ ಅನುಮೋದನೆಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಿಗೆ ಪತ್ರ ಕಳುಹಿಸದೇ ವಿಳಂಬ ನೀತಿ ಅನುಸರಿಸಿ ಸರ್ಕಾರಿ ಸೇವಾ ನಿಯಮ ಉಲ್ಲಂಘನೆ ಮಾಡಿ ಕರ್ತವ್ಯ ಲೋಪವೆಸಗಿರುವ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ಮೇಲೆ ಕಾನೂನು ರೀತ್ಯಾ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಕೆಂಪಯ್ಯನಹುಂಡಿ ಆರ್.ರಾಜು,ಕನ್ನಾಯಕನಹಳ್ಳಿ ಮರಿಸ್ವಾಮಿ,ಕೊಳತ್ತೂರು ಪ್ರಭಾಕರ್,ನೆರಗ್ಯಾತನಹಳ್ಳಿ ಮನೋಜ್ ಕುಮಾರ್,ನಿಲಸೋಗೃ ಕುಮಾರ್, ತೊಟ್ಚವಾಡಿ ರಾಜಪ್ಪ,ಸೋಸಲೆ ಶಿವಕುಮಾರ್, ಕುಪ್ಯಾಗವಿಸಿದ್ದಯ್ಯ,ಗಿರೀಶ್,ಹೆಮ್ಮಿಗೆ ಪ್ರಸನ್ನ,ಚೌಹಳ್ಳಿ,ಮಲ್ಲೇಶ್, ಪರಶುರಾಮ, ಯಡದೊರೆ ಚಂದ್ರಪ್ಪ,ಬೆಟ್ಟಹಳ್ಳಿ ರವಿಕಾಂತ್,ಜಯಕುಮಾರ್,ಕೊಳತ್ತೂರು ಮಹದೇವ,ಬೆನಕನಹಳ್ಳಿ ಸ್ವಾಮಿ,ಶಿವಕುಮಾರ್, ಡಿ.ಪ್ರೇಮಕುಮಾರ್ ಸೇರಿದಂತೆ ಇತರರಿದ್ದರು.
ವರದಿ: ಎಂ.ನಾಗೇಂದ್ರಕುಮಾರ್.
