ವಿಶೇಷ ವರದಿ
ಎಂ.ನಾಗೇಂದ್ರಕುಮಾರ್.
ಟಿ.ನರಸೀಪುರ : ಸರ್ಕಾರಿ ಆಸ್ಪತ್ರೆ ದಂತ ವೈದ್ಯರು ಉಚಿತವಾಗಿ ಸಿಗಬೇಕಾದ ಚಿಕಿತ್ಸೆಗಳನ್ನು ಖಾಸಗಿ ಲ್ಯಾಬ್ ಗಳಲ್ಲಿ ಪರೀಕ್ಷೆ ಮಾಡಿಸಿ,ಔಷಧಿಗಳನ್ನು ಖಾಸಗಿ ಮೆಡಿಕಲ್ ಸ್ಟೋರ್ ಗಳಿಗೆ ಬರೆಯುವ ಮೂಲಕ ಬಡ,ಬಗ್ಗರಿಗೆ ಬರೆ ಎಳೆಯುತ್ತಿದ್ದು ರೋಗಿಗಳು ಹೈರಾಣಾಗುತ್ತಿದ್ದಾರೆ.
ಮುಖ್ಯ ಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರಗಳಿಗೆ ಒಳಪಡವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಸೇವೆ ಹಣವಿದ್ದರೆ ಮಾತ್ರ ಎಂಬಂತ್ತಾಗಿದೆ.ಮುಖ್ಯಮಂತ್ರಿಗಳು ಹಾಗೂ ಸರ್ಕಾರ ರಾಜ್ಯದ ಜನತೆಗೆ ಉತ್ತಮ ವೈದ್ಯಕೀಯ ಸೌಲಭ್ಯಗಳು ಸಿಗಬೇಕೆನ್ನುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನ ಜಾರಿಗೆ ತರುವ ಮೂಲಕ ಬಡವರು,ಮಧ್ಯಮ ವರ್ಗದವರ ಆರೋಗ್ಯ ಸೇವೆಗೆ ಬೆಳಕು ಚೆಲ್ಲಿದ್ದರೂ ಸ್ಥಳೀಯವಾಗಿ ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಆರೋಗ್ಯ ಸೇವೆ ದೊರೆಯದಿರುವುದು ಶೋಚನೀಯ.
ಸರ್ಕಾರಿ ಆರೋಗ್ಯ ಸೇವೆಗಳು ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.ಎಲ್ಲರಿಗೂ ಸಮಾನವಾಗಿ ಆರೋಗ್ಯ ರಕ್ಷಣೆ ಸಿಗುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಕೂಡ ಹೌದು.ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದಿಡಿದು ಆಸ್ಪತ್ರೆಗಳಿಗೆ ಅಗತ್ಯಕ್ಕನುಗುಣವಾಗಿ ಎಲ್ಲಾ ಆರೋಗ್ಯ ಸೇವೆಗಳಿಗೆ ಸಂಬಂಧಿಸಿದ ವೈದ್ಯಕೀಯ ಪರಿಕರಗಳು ಹಾಗೂ ಔಷಧಿಗಳನ್ನು ಸರ್ಕಾರ ಹೊದಗಿಸಿರುತ್ತದೆ.ಆದಾಗ್ಯೂ ಕೆಲವು ವೈದ್ಯರು ಮಾತ್ರ ಯಾಕೋ ಬಡವರೆಂದರೆ ಒಂದು ರೀತಿ ತಾತ್ಸಾರ ಮನೋಭಾವನೆ.ಬಡವರ ಕಷ್ಟ ಸುಖಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ.

ಸರ್ಕಾರ ಕೈ ತುಂಬಾ ಸಂಬಳ ನೀಡಿಯೂ ಬಡವರ ಬಳಿ ಸುಲಿಗೆ ಮಾಡುವ ಇಂತಹ ಕೆಲವು ವೈದ್ಯರಿಂದ ಕಪ್ಪು ಚುಕ್ಕೆ ಇಟ್ಟಂತ್ತಾಗುತ್ತದೆ.ಆರೋಗ್ಯ ಸೇವೆಗಳ ಮಹತ್ವ ಬಹಳ ದೊಡ್ಡದಾಗಿದೆ.ಆರೋಗ್ಯವು ವ್ಯಕ್ತಿಯ ಮತ್ತು ಸಮಾಜದ ಯೋಗಕ್ಷೇಮಕ್ಕೆ ಅತ್ಯಗತ್ಯ. ಇದು ಸಾಮಾನ್ಯ ಜನರ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ.ಜೀವಿತಾವಧಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.ಸಮಾಜದಲ್ಲಿ ತಮ್ಮ ಜೀವನವನ್ನು ಹೆಚ್ಚು ಆನಂದಿಸಲು ಸಹಾಯವಾಗುತ್ತದೆ.ಆದರೆ ಇಂತಹ ವೈದ್ಯರ ಹಣದಾಹದ ಸೇವೆಗೆ ರೋಗಿಗಳು ಬಲಿಯಾಗುತ್ತಿದ್ದು ಸರ್ಕಾರ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ಉತ್ತಮ ಸೇವೆ ಹೊದಗಿಸಲು ಮುಂದಾಗಬೇಕಿದೆ.

ಜನರ ಧ್ವನಿ:-
ಅನಿವಾರ್ಯವಾಗಿ ವೈದ್ಯರಿಗೆ ಹಣ ನೀಡಬೇಕಿದೆ.ಅವರ ಕೇಳಿಲ್ಲವೆಂದರೆ ನಾವು ಆಗೆಯೇ ಬರಬಹುದು.ಆದರೆ ಅವರೇ ಬಾಯಿಬಿಟ್ಟು ಹಣ ಕೇಳಿದಾಗ ನಮ್ಮ ಬಳಿ ಇಲ್ಲದಿದ್ದರೂ ಅದನ್ನು ಸಂಗ್ರಹಿಸಿ ಕೊಟ್ಚು ನಮ್ಮ ಖಾಯಿಲೆ ಗುಣಪಜಿಸಿಕೊಳ್ಳಲೇಬೇಕಿದೆ.
- ನೊಂದ ರೋಗಿ
ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆಗಳು ಸಿಗುತ್ತವೆ ಎಂಬ ಆಶಾಭಾವನೆಯಿಂದ ಬರುತ್ತೇವೆ.ಬಂದು ತೋರಿಸಿದಾಗ ವೈದ್ಯರು ಬರೆದು ಕೊಡುವ ಎಲ್ಲಾ ಪರೀಕ್ಷೆಗಳು ಹಾಗೂ ಔಷಧಿಗಳನ್ನು ಖಾಸಗಿಯಾಗೇ ಮಾಡಿಸಬೇಕು.ಮಾಡಿಸದಿದ್ದರೆ ನಮಗೆ ನಮ್ಮ ಖಾಯಿಲೆ ಗುಣ ಪಡಿಸಲು ಆಗುವುದಿಲ್ಲ ಎಂಬ ಭಯದಿಂದ ಹೊರಗಡೆ ಪರೀಕ್ಷೆ ಮಾಡಿಸುತ್ತೇವೆ.

- ನೊಂದ ವೃದ್ದೆ
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳು ಸುಲಿಗೆಯ ತಾಣವಾಗಬಾರದು.ಸರ್ಕಾರ ಎಲ್ಲಾ ರೀತಿಯ ಸೌಲಭ್ಯಗಳನ್ನು ಹೊದಗಿಸುತ್ತಿದೆ ಅದನ್ನು ರೋಗಿಗಳಿಗೆ ನೀಡಬೇಕಾದದ್ದು ವೈದ್ಯರ ಜವಾಬ್ದಾರಿ.ಸಾರ್ವಜನಿಕರಿಂದ ಅನೇಕ ದೂರುಗಳು ಕೇಳಿ ಬರುತ್ತಿದ್ದು ವೈದ್ಯರು ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳದಿದ್ದರೆ ನಮ್ಮ ಸಂಘಟನೆ ವತಿಯಿಂದ ಆಸ್ಪತ್ರೆ ಮುಂಭಾಗ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.

- ಡಾ.ಆಲಗೂಡು ಎಸ್.ಚಂದ್ರಶೇಖರ್
ರಾಜ್ಯ ವಿಭಾಗೀಯ ಸಂಚಾಲಕರು
ದಲಿತ ಸಂಘರ್ಷ ಸಮಿತಿ
ಟಿ.ನರಸೀಪುರ.

[…] […]