ವಿಶೇಷ ವರದಿ:- ಎಂ.ನಾಗೇಂದ್ರಕುಮಾರ್
ಟಿ.ನರಸೀಪುರ : ಮುಖ್ಯಮಂತ್ರಿಗಳೇ ನಿಮ್ಮ ಕ್ಷೇತ್ರಕ್ಕೆ ತಾವೇ ನೀಡಿರುವ ಹೈಟೆಕ್ ಸರ್ಕಾರಿ ಸಂಯುಕ್ತ ಆಯುಷ್ ಆಸ್ಪತ್ರೆ ಪಟ್ಟಣದ ಹೊರ ವಲಯದಲ್ಲಿ ನಿರ್ಮಿಸಿ,ರೋಗಿಗಳು ಹೋಗಿ ಬರಲು ಸಾರಿಗೆ ವ್ಯವಸ್ಥೆ ಇಲ್ಲದೇ ಬಿಕೋ ಎನ್ನುತ್ತಿದ್ದು, ವೈದ್ಯರೊಬ್ಬರು ಕುಳಿತು ರೋಗಿಗಳನ್ನು ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಅಂದಾಜು ಮೂರು ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಆಯುರ್ವೇದ ಆಸ್ಪತ್ರೆ ಪಟ್ಟಣದ ಹೊರ ವಲಯದಲ್ಲಿ ವಾಹನಗಳ ಸಂಚಾರವೇ ಇಲ್ಲದ ಸ್ಥಳದಲ್ಲಿ ನಿರ್ಮಾಣವಾಗಿ ಸಾರ್ವಜನಿಕರ ತೆರಿಗೆ ಹಣ ಪೋಲಾಗುವುದೇ ಎಂಬ ಆತಂಕ ಹಾಗೂ ಬೇಸರ ಟಿ.ನರಸೀಪುರ ತಾಲ್ಲೂಕಿನ ಜನತೆಯಲ್ಲಿ ಮನೆ ಮಾಡಿದೆ.

ಆಯುಷ್ ವೈದ್ಯರು ಹೇಳುವ ಪ್ರಕಾರ ಸರ್ಕಾರ ಎಲ್ಲಾ ಅವಕಾಶ ಕಲ್ಪಿಸಿದೆ.ನೂತನ ಆಸ್ಪತ್ರೆಗೆ ವೈದ್ಯರು,ಸಿಬ್ಬಂದಿಗಳನ್ನು ಸಹ ನೇಮಿಸಿದ್ದು ಅಲ್ಲಿ ಹೋಗಿ ಕರ್ತವ್ಯದ ಸಮಯವನ್ನು ಪೋಲು ಮಾಡಿ ಬರುವಂತಹ ಸ್ಥಿತಿ ಟಿ.ನರಸೀಪುರ ಸರ್ಕಾರಿ ಆಯುರ್ವೇದ ಆಸ್ಪತ್ರೆಯದ್ದಾಗಿದ್ದು ಏನು ಮಾಡಬೇಕೆಂಬುದೇ ತಿಳಿಯುತ್ತಿಲ್ಲ ಎಂದು ತಮ್ಮ ಅಸಾಯಕತೆ ತೋಡಿತೊಂಡಿದ್ದಾರೆ.
ಪಟ್ಣದಿಂದ ಅಂದಾಜು ಮೂರು ಕಿ.ಮೀ ದೂರದಲ್ಲಿರುವ ಆಸ್ಪತ್ರೆಗೆ ರೋಗಿಗಳು ಹೋಗಲು ಯಾವುದೇ ಸಾರಿಗೆ ಸೌಲಭ್ಯ ಕೂಡ ಅಲ್ಲಿಗೆ ಇಲ್ಲವಾಗಿರುವುದರಿಂದ ಕಡುಬಡವರು,ಬಡವರು ಹಾಗೂ ಮಧ್ಯಮ ವರ್ಗದ ಜನರು ದುಪ್ಪಟ್ಟು ಹಣ ನೀಡಿ ಆಟೋಗಳ ಮೊರೆ ಹೋಗಿ ಚಿಕಿತ್ಸೆ ಪಡೆಯುವುದು ಕನಸಿನ ಮಾತಾಗಿದೆ.

ಎಳವರ ಹುಂಡಿ ಮೂಲಕ ತಾಯೂರು ಅಡ್ಡ ರಸ್ತೆಗೆ ಸಂಪರ್ಕ ಮಾಡಿ ನಂಜನಗೂಡಿಗೆ ಹೋಗುವ ಬಸ್ಸುಗಳನ್ನು ಈ ರಸ್ತೆಯ ಮೂಲಕ ಹೋಗಿ ಬರಲು ಅವಕಾಶ ಕಲ್ಪಿಸಿದರೆ ಸಾರ್ವಜನಿಕರು ಆಸ್ಪತ್ರೆಗೆ ಹೋಗಿ ಬರಲು ಸಹಾಯಕವಾಗಬಹುದು.
ಈ ನಿಟ್ಟಿನಲ್ಲಿ ವರುಣಾ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳೂ ಆಗಿರುವ ಸಿದ್ದರಾಮಯ್ಯರವರು ತಮ್ಮ ಕ್ಷೇತ್ರದ ಆಯುರ್ವೇದ ಆಸ್ಪತ್ರೆಗೆ ಜೀವ ತುಂಬಿ ರೋಗಿಗಳಿಗೆ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಆಸ್ಪತ್ರೆಯಿಂದ ಉತ್ತಮ ಚಿಕಿತ್ಸೆ ದೊರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ಕಳೆದ ತಿಂಗಳಿನಿಂದ ನಾನು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಉಳ್ಳವರು ಹಾಗೂ ಸ್ವಂತ ವಾಹನ ಹೊಂದಿರುವವರು ಮಾತ್ರ ಚಿಕಿತ್ಸೆ ಪಡೆಯಲು ಬೆರಳೆಣಿಕೆಯಷ್ಟು ರೋಗಿಗಳು ಬರುತ್ತಿದ್ದಾರೆ.ಆಸ್ಪತ್ರೆಗೆ ಸಂಪರ್ಕ ಹೊಂದಲು ಸಾರಿಗೆ ವ್ಯವಸ್ಥೆ ಇಲ್ಲದಿರುವುದು ಬಹು ದೊಡ್ಜ ಸಮಸ್ಯೆ. ನಾವು ರೋಗಿಗಳನ್ನು ಕಾಯುತ್ತಾ ಕುಳಿತು ನಮ್ಮ ಕರ್ತವ್ಯ ನಿರ್ವಹಿಸುತ್ತಿದ್ದೇವೆ.ಸರ್ಕಾರ ಸಾರಿಗೆ ವ್ಯವಸ್ಥೆ ಕಲ್ಪಿಸಿದರೆ ಜನರು ಬರಲು ಅನುಕೂಲವಾಗುತ್ತದೆ.ಹತ್ತು ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆ ಇದಾಗಿದೆ.
– ಡಾ.ದಿನಕರ್
ತಜ್ಞ ವೈದ್ಯರು
ಹೋಮಿಯೋಪತಿ
ಆಯುರ್ವೇದ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗಿದ್ದು,ಯಾವುದೇ ರೋಗಗಳಿಗೆ ಉತ್ತಮ ಚಿಕಿತ್ಸೆಯಾಗಿದೆ.ದೇಹದ ಮಂಡಿ,ಸೊಂಟ ನೋವುಗಳು,ಹೊಟ್ಟೆ ಸಂಬಂಧಿತ ಖಾಯಿಲೆಗಳು ಸೇರಿದಂತೆ ಇತರೆ ಎಲ್ಲಾ ಖಾಯಿಲೆಗಳಿಗೆ ಉತ್ತಮ ಚಿಕಿತ್ಸೆ ಆಯುರ್ವೇದ ಹಾಗೂ ಹೋಮಿಯೋಪತಿಯಲ್ಲಿ ಸಿಗಲಿದೆ.ಪಟ್ಟಣದ ಮದ್ಯ ಭಾಗದಲ್ಲಿ ಯಾವುದೇ ಸ್ಥಳವಾಗಿದಲ್ಲಿ ನಿರ್ಮಾಣ ಮಾಡಿದ್ದರೆ ಅನುಕೂಲವಾಗುತ್ತಿತ್ತು.ಹೊರ ವಲಯದಲ್ಲಿ ನಿರ್ಮಾಣ ಮಾಡಿರುವುದರಿಂದ ಆಟೋ ಬಾಡಿಗೆ 200 ರೂ ಕೇಳುತ್ತಾರೆ.ಸರ್ಕಾರಿ ಆಸ್ಪತ್ರೆಯ ಉಚಿತ ಸೇವೆ ಪಡೆಯಲು ಕಷ್ಟ ಸಾಧ್ಯವಾಗಿದೆ.ಮುಖ್ಯಮಂತ್ರಿಗಳು ಕೂಜಲೇ ಸಮಸ್ಯೆ ಬಗೆಹರಿಸಿ ಸಾರಿಗೆ ವ್ಯವಸ್ಥೆ ಕಲ್ಪಿಸಿದರೆ ಬಡವರಿಗೆ ಒಳ್ಳೆಯದಾಗುತ್ತದೆ.
- ರಮೇಶ್
ಪಟ್ಟಣ ವಾಸಿ.
