ಟಿ.ನರಸೀಪುರ : ಸಹಕಾರ ಸಂಘಗಳ ಕಾಯ್ದೆ ಮತ್ತು ಸದರಿ ಸಹಕಾರ ಸಂಘದ ಬೈಲಾ ನಿಯಮಗಳಿಗೆ ವಿರುದ್ಧವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎ ಆರ್ ಸೇರಿದಂತೆ ಸಹಕಾರ ಇಲಾಖೆಯ ನಾಲ್ವರು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತಕ್ಕೆ ದೂರು ದಾಖಲಿಸಿರುವುದಾಗಿ ಸಾಮಾಜಿಕ ಹೋರಾಟಗಾರರಾದ ಎಸ್ ಕೆ ರಾಜೂಗೌಡ ಮಾಹಿತಿ ನೀಡಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ತಾಲ್ಲೂಕಿನ ಬನ್ನೂರು ಹೋಬಳಿ ಸೀಹಳ್ಳಿ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸದರಿ ಗ್ರಾಮದಲ್ಲಿ ಆಗ್ರೋ ಟ್ರೇಡರ್ಸ್ ವ್ಯಾಪಾರ ನಡೆಸುತ್ತಿರುವ ಜವರೇಗೌಡರು
ಕಾನೂನು ಬಾಹಿರವಾಗಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡಿ ಅವಿರೋಧ ಆಯ್ಕೆಯಾಗಿ ಅಧ್ಯಕ್ಷರು ಸಹ ಆಗಿದ್ದಾರೆ. ಇದರಿಂದಾಗಿ ಸೀಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ರೈತರಿಗೆ ಸರ್ಕಾರದ ಆದೇಶದಂತೆ ನ್ಯಾಯಯುತ ಬೆಲೆಯಲ್ಲಿ ಬಿತ್ತನೆ ಭತ್ತ , ಹಾಗೂ ಬಿತ್ತನೆ ಬೀಜಗಳು ಮತ್ತು ರಸಗೊಬ್ಬರ, ಕ್ರಿಮಿನಾಶಕ, ಕಳೆನಾಶಕಗಳನ್ನು ಸಂಘದ ವತಿಯಿಂದ ರೈತರಿಗೆ ನೀಡದೇ ರೈತರಿಗೆ ಹಾಗೂ ಸದರಿ ಸಹಕಾರ ಸಂಘಕ್ಕೆ ಅನ್ಯಾಯ ಮಾಡುತ್ತಿದ್ದು ಆ ಮೂಲಕ ರೈತರು ಮತ್ತು ಸಂಘದ ಬೆಳವಣಿಗೆಗೆ ಮಾರಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಸಹಕಾರ ಕಾಯ್ದೆಯಲ್ಲಿಯೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬೆಳವಣಿಗೆ ಹಾಗೂ ರೈತರ ಹಿತದೃಷ್ಟಿಯಿಂದ ಸದರಿ ಸಂಘದ ಧ್ಯೇಯುದ್ದೇಶಗಳಿಗೆ ಸಂಬಂಧಿಸಿದಂತಹ ವ್ಯಾಪಾರ ಹಾಗೂ ವ್ಯವಹಾರಗಳನ್ನು ಸದರಿ ಸಂಘದ ವ್ಯಾಪ್ತಿಯಲ್ಲಿ ಅಧಿಕೃತ ಪರವಾನಗಿ ಹೊಂದಿ ವ್ಯಾಪಾರ, ವ್ಯವಹಾರಗಳನ್ನು ನಡೆಸುವ ವ್ಯಕ್ತಿಗಳಿಗೆ ಸಹಕಾರ ಸಂಘಗಳ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡುವುದನ್ನು ನಿರ್ಬಂಧಿಸಲಾಗಿದೆ. ಈಗಿದ್ದರೂ ಸೀಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಗೆ ನಮ್ಮ ಸೀಹಳ್ಳಿ ಗ್ರಾಮದಲ್ಲೇ ಶ್ರೀ ಮಲ್ಲಿಕಾರ್ಜುನ ಆಗ್ರೋ ಟ್ರೇಡರ್ಸ್ ಅಂಗಡಿ ಇಟ್ಟುಕೊಂಡು ವ್ಯಾಪಾರ, ವ್ಯವಹಾರ ನಡೆಸುತ್ತಿರುವ ನಮ್ಮ ಸೀಹಳ್ಳಿ ಗ್ರಾಮದವರೇ ಆದ ಜವರೇಗೌಡ ರವರು ಚುನಾವಣೆಗೆ ಕಾನೂನು ಬಾಹಿರವಾಗಿ ಸ್ಪರ್ಧಿಸಿ , ಅವಿರೋಧವಾಗಿ ಆಯ್ಕೆಯಾಗಿ ಅಧ್ಯಕ್ಷರಾಗಿದ್ದಾರೆ ಇದು ಸದರಿ ವ್ಯಕ್ತಿಯ ಜೊತೆಗೆ ಸಂಬಂಧಿಸಿದ ಸಹಕಾರ ಸಂಘಗಳ ಅಧಿಕಾರಿಗಳು ಸೇರಿ ನಡೆಸಿದ ಷಂಡ್ಯತ್ರದ ಪ್ರತಿಫಲವಾಗಿದೆ ಎಂದು ದೂರಿದರು.
ಇದನ್ನು ಓದಿ: ಟಿ.ನರಸೀಪುರ : ವಿದ್ಯೋದಯ ಸಂಸ್ಥೆಯಲ್ಲಿ ರೋಸ್ಟರ್ ಉಲ್ಲಂಘನೆ – ಎಸ್ಸಿ/ಎಸ್ಟಿ ಮಹಿಳೆಯರಿಗೆ ಅನ್ಯಾಯ: ದಲಿತ ಸಂಘರ್ಷ ಸಮಿತಿ ಆಕ್ರೋಶ
ಇದರಿಂದಾಗಿ ಕಳೆದ ೪ ವರ್ಷಗಳಿಂದ ಕಾನೂನು ಬಾಹಿರವಾಗಿ ಸೀಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿರುವ ಆಗ್ರೋ ಟ್ರೇಡರ್ಸ್ ಮಾಲೀಕ ಜವರೇಗೌಡರ ಸ್ವರ್ಧೆ ಮತ್ತು ಆಯ್ಕೆಯನ್ನು ರದ್ದುಗೊಳಿಸುವಂತೆ ಮೈಸೂರು ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಮನೋಜ್ ಕುಮಾರ್ ಎಸ್ ಹೆಚ್ ರವರಿಗೆ ದಿನಾಂಕ:06/06/2024 ರಂದು ದೂರು ನೀಡಿದರೂ ವಿಚಾರಣೆ ನಡೆಸಿಯೂ ಇದುವರೆಗೂ ಸೂಕ್ತ ಕ್ರಮ ಕೈಗೊಳ್ಳದೇ ವಿಳಂಬ ಮತ್ತು ನಿರ್ಲಕ್ಷ್ಯ ಧೋರಣೆ ತೋರಿ ಸಹಕಾರ ಕಾಯ್ದೆಗೆ ವಿರುದ್ಧವಾಗಿ ಸದರಿ ಸಂಘದ ನಿರ್ದೇಶಕರಾಗಿ ಮತ್ತು ಅಧ್ಯಕ್ಷರಾಗಿ ಅಧಿಕಾರದಲ್ಲಿ ಸದರಿ ವ್ಯಕ್ತಿಗೆ ಮುಂದುವರಿಯಲು ಅವಕಾಶ ಮಾಡಿಕೊಟ್ಟಿದ್ದಾರೆ.
ಇದಕ್ಕೆ ಪ್ರಮುಖ ಕಾರಣರಾದ ಸದರಿ ಸಂಘದ ಚುನಾವಣೆಗೆ ಚುನಾವಣಾಧಿಕಾರಿಯಾಗಿ ಬಂದಿದ್ದ ಸಹಕಾರ ಸಂಘಗಳ ಉಪ ನಿಬಂಧಕರ ಕಛೇರಿ ಮೈಸೂರು ಇಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿರುವ ಕೆ.ಬಿ.ಅಶ್ವಿನ್ ಕುಮಾರ್ ಇವರ ವಿರುದ್ಧ ಸೂಕ್ತ ಕೈಗೊಳ್ಳಬೇಕೆಂದು ಸಹಕಾರ ಸಂಘಗಳ ಉಪ ನಿಬಂಧಕರಾದ ಬಿರೇಶ್ ರವರಿಗೆ ದೂರು ನೀಡಿದ್ದು ಅಲ್ಲದೆ ಸದರಿ ವಿಚಾರವಾಗಿ ಆಗುತ್ತಿರುವ ವಿಳಂಬ ಧೋರಣೆಯ ಕುರಿತು ಸಹಕಾರ ಸಂಘಗಳ ಜಂಟಿ ನಿಬಂಧಕರಾದ ಪ್ರಸಾದ್ ರೆಡ್ಡಿ ರವರಿಗೂ ದೂರು ನೀಡಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಇದರಿಂದಾಗಿ ಸಹಕಾರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿಲ್ಲದ ವ್ಯಕ್ತಿಯೊಬ್ಬ ಸಹಕಾರ ಸಂಘಗಳ ಇಲಾಖೆಯ ಅಧಿಕಾರಿಗಳ ಜೊತೆಗೆ ಮಾಡಿಕೊಂಡ ಕಾನೂನು ಬಾಹಿರ ಒಳ ಒಪ್ಪಂದದಂತೆ ಚುನಾವಣೆಯಲ್ಲಿ ಸ್ಪರ್ಧಿಸಿ , ಅವಿರೋಧವಾಗಿ ಆಯ್ಕೆಯಾಗಿ, ಅಧ್ಯಕ್ಷರಾಗಿ ಕಳೆದ ೪ ವರ್ಷಗಳಿಂದ ಅಧಿಕಾರದಲ್ಲಿ ಮುಂದುವರೆಯುತ್ತಿದ್ದು ಇದು ಸದರಿ ಅಧಿಕಾರಿಗಳ ಕರ್ತವ್ಯ ಲೋಪದ ಪರಿಣಾಮವಾಗಿದ್ದು ಇವರುಗಳ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಎಂ.ನಾಗೇಂದ್ರಕುಮಾರ್
