ಟಿ.ನರಸೀಪುರ : ಬಲಗೈ ಸಮುದಾಯದ ಘಟಾನುಘಟಿ ರಾಜಕೀಯ ನಾಯಕರಿದ್ದೂ ಒಳ ಮೀಸಲಾತಿಯಲ್ಲಿ ಪ್ರವರ್ಗ ಬಿ ಗೆ ಬಲಗೈ ಸಮುದಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸೇರಿಸಿದ್ದರೂ ಏಕೆ ಯಾರು ಚಕಾರವೆತ್ತುತ್ತಿಲ್ಲವೆಂದು ಜನಸ್ಪಂದನಾ ಸೇವಾ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರಾದ ಎಸ್.ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ಸೋಸಲೆ ಗ್ರಾಮದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಒಳ ಮೀಸಲಾತಿಯಲ್ಲಿ ಪ್ರವರ್ಗ ಬಿ 9ನೇ ಕಾಲಂನಲ್ಲಿ ಬಲಗೈ ಸಮುದಾಯವನ್ನು ಸೇರಿಸಿದ್ದು ಇದಕ್ಕೆ ಸಿದ್ದರಾಮಯ್ಯರವರ ಸರ್ಕಾರದ ಬೆಂಬಲವೇ ಕಾರಣ.ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಒಮ್ಮತವಾಗಿ ರಾಜ್ಯಾದ್ಯಂತ ಬಲಗೈ ಸಮುದಾಯ ಮತ ನೀಡಿರುವುದೇ ಕಾರಣ ಎಂಬುದನ್ನು ಮುಖ್ಯಮಂತ್ರಿಗಳು ಮರೆಯಬಾರದೆಂದರು.
ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ಬಲಗೈ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಮಾರಕ ಕೊಡುಗೆ ಇದಾಗಿದೆ.ಇದು ಮುಂದಿನ ತಲೆಮಾರುಗಳಲ್ಲಿ ಬಲಗೈ ಸಮುದಾಯ ಯಾವ ರಂಗದಲ್ಲೂ ಮುಂದೆ ಬಾರದಂತೆ ಷಡ್ಯಂತ್ರ ರೂಪಿಸಿ ಮಾಡಿರುವ ಕುತಂತ್ರ ರಾಜಕಾರಣವಾಗಿದೆ ಎಂದು ನೇರವಾಗಿ ಸಿದ್ದರಾಮಯ್ಯರವರು ಇದಕ್ಕೆ ಹೊಣೆ ಎಂದು ಆರೋಪಿಸಿದರು.
ಬಲಗೈ ಸಮುದಾಯದಲ್ಲಿ ಮಲ್ಲಿಕಾರ್ಜುನ ಖರ್ಗೆ,ಜಿ. ಪರಮೇಶ್ವರ್,ಡಾ.ಹೆಚ್.ಸಿ.ಮಹದೇವಪ್ಪ,ನರೇಂದ್ರ ಸ್ವಾಮಿ, ಪ್ರಿಯಾಂಕ ಖರ್ಗೆ ಅವರುಗಳಿದ್ದೂ ಸಮುದಾಯಕ್ಕೆ ಅನ್ಯಾಯವಾಗುತ್ತಿರುವುದನ್ನು ನೋಡಿಯೋ ಏಕೆ ಮೌನ ವಹಿಸಿದ್ದಾರೆ ಎಂಬುದನ್ನು ಸಮುದಾಯ ಅರಿಯದಷ್ಟು ದಡ್ಡರಲ್ಲ ಎಂದರು.
ಸರ್ಕಾರದ ವಿರುದ್ಧದ ಹೋರಾಟಕ್ಕೆ ಬಲಗೈ ಸಮುದಾಯದ ರಾಜಕೀಯ ನಾಯಕರು ಧುಮುಕಬೇಕು.
ಒಳ ಮೀಸಲಾತಿ ಜಾರಿ ಮಾಡಲು ಸಂವಿಧಾನದಲ್ಲಿ ಅವಕಾಶವೇ ಇಲ್ಲ.ಆಳುವ ಸರ್ಕಾರಗಳು ತಮ್ಮ ಓಟ್ ಬ್ಯಾಂಕನ್ನು ಗಟ್ಟಿ ಮಾಡಿಕೊಳ್ಳಲು ಇಂತಹ ದುಸ್ಸಾಹಸಕ್ಕೆ ಕೈ ಹಾಕುತ್ತವೆ.ಸರ್ಕಾರ ಗಣತಿ ಮಾಡುವ ಜವಾಬ್ದಾರಿ ತೆಗೆದುಕೊಂಡ ಮೇಲೆ ಅನ್ಯಾಯವಾಗದಂತೆ ಕೆಲಸ ಮಾಡಬೇಕು.ತಮ್ಮ ತಪ್ಪು ನಿರ್ಧಾರಗಳಿಂದ ಬಲಗೈ ಸಮುದಾಯದ ಮುಂದಿನ ಪೀಳಿಗೆಗೆ ತುಂಬಾ ತೊಂದರೆ ಆಗುತ್ತದೆ.ಯಾವುದೇ ಒಂದು ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ಎಸ್.ಮಂಜುನಾಥ್ಅಧ್ಯಕ್ಷರು
ಜನಸ್ಪಂದನಾ ಸೇವಾ ಸಂಸ್ಥೆ
ಟಿ.ನರಸೀಪುರ.
ವರದಿ : ಎಂ ನಾಗೇಂದ್ರ ಕುಮಾರ್
