ಟಿ.ನರಸೀಪುರ : ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳ ಹಂತದಲ್ಲೇ ವಿದ್ಯಾಭ್ಯಾಸದ ಜೊತೆ,ಜೊತೆಯಲ್ಲಿ ನಮ್ಮ ಹಳ್ಳಿಗಾಡಿನ ಜನಪದ ಕಲೆಗಳನ್ನು ಕಲಿತು ಮುಂದಿನ ಪೀಳಿಗೆಗೆ ಉಳಿಸಬೇಕಿರುವುದು ತುಂಬಾ ಅನಿವಾರ್ಯವಾಗಿದೆ ಎಂದು ಬೃಂದಾ ಆಸ್ಪತ್ರೆ ಮಾಲೀಕರಾದ ಗುರು ತಿಳಿಸಿದರು.
ಪಟ್ಟಣದ ಗೋಪಾಲಪುರದ ಬಳಿ ಇರುವ ಪಿ.ಆರ್.ಎಂ.ಕಾಲೇಜು ಆವರಣದಲ್ಲಿ ನಯನ ನಾಟ್ಯ ಟ್ರಸ್ಟ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ ಜನಪದ ಕಲಾ ತರಬೇತಿಗಳ ಉಚಿತ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಕೋಲಾಟ, ಕಂಸಾಳೆ, ಮಾರಿಕುಣಿತ, ಜನಪದ ಗಾಯನ, ಪೂಜಾ ಕುಣಿತ,ಇಂಥ ಜನಪದ ಕಲೆಗಳನ್ನು ಕಲಿಯುವುದಕ್ಕೆ ಹಣ ಕೊಟ್ಟು ಕಲಿಯುತ್ತಾರೆ ಆದರೆ ನಯನ ನಾಟ್ಯ ಟ್ರಸ್ಟ್ ನವರು ಉಚಿತವಾಗಿ ಕಲಿಸುತ್ತಿರುವುದು ಬಹಳ ಒಳ್ಳೆಯದು ಇದನ್ನು ವಿದ್ಯಾರ್ಥಿಗಳು ಅಗತ್ಯವಾಗಿ ಉಪಯೋಗಿಸಿಕೊಳ್ಳಿ ಏಕೆಂದರೆ ಈ ಜನಪದ ಜನರ ಪದ ಜನರಿಂದ ಜನರಿಗೆ ಹಂಚುತ್ತಿರುವ ಈ ಪದ ಜನಪದ ಹಾಗಾಗಿ ವಿದ್ಯಾರ್ಥಿಗಳು ಇದನ್ನ ಉಪಯೋಗ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾ.ವೀರಭದ್ರ ಸ್ವಾಮಿ ಮಾತನಾಡಿ, ಜನಪದವಿಲ್ಲದೆ ಜನರಿಲ್ಲ ಜನರಿಲ್ಲದೆ ಸಂಸ್ಕೃತಿ ಆಚಾರ ವಿಚಾರ ಉಳಿಯುವುದಿಲ್ಲ.ಇದು ಇಂದಿನ ತಲೆಮಾರಿನಿಂದ ಮುಂದಿನ ತಲೆಮಾರಿಗೆ ಉಳಿಯಬೇಕೆಂದರೆ ಜನಪದ ತಲೆಮಾರಿನಿಂದ ತಲೆಮಾರಿಗೆ ನೀರಿನಂತೆ ಹರಿಯುತ್ತಿರಬೇಕು ಅದಕ್ಕೆ ಯುವ ಜನತೆ ಮನಸ್ಸು ಮಾಡಿ.ಇಂದಿನ ದಿನಮಾನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹೆಚ್ಚು ತೊಡಗಿಕೊಂಡು ವಿದ್ಯಾರ್ಥಿಗಳು ಯುವಜನರು ನಮ್ಮ ನೆಲಮೂಲ ಸಂಸ್ಕೃತಿಯನ್ನು ಕಡೆಗಣಿಸುತ್ತಿರುವುದು ತುಂಬಾ ದುರದೃಷ್ಟಕರ ಶಿಕ್ಷಣದಷ್ಟೇ ಕಲೆ,ಸಂಸ್ಕೃತಿ ಪ್ರತಿಯೊಬ್ಬ ಮನುಷ್ಯನಿಗೂ ಅತ್ಯಗತ್ಯವಾದದ್ದು ಅದನ್ನ ಕಲಿಯುವುದರಿಂದ ನಮ್ಮ ಜೀವನವು ಕೂಡ ಉತ್ತಮ ದಾರಿಯಲ್ಲಿ ನಡೆಯಲು ಸಾಧ್ಯವಾಗುತ್ತದೆ. ಅದನ್ನು ಮತ್ತೊಬ್ಬರಿಗೆ ಕಲಿಸುವುದರಿಂದ ಆ ಕಲೆ ಜೀವಂತವಾಗಿ ಉಳಿಯುತ್ತದೆ. ಅದಕ್ಕಾಗಿ ನಯನ ನಾಟ್ಯ ಟ್ರಸ್ಟ್ ನವರು 10 ದಿನಗಳ ಉಚಿತ ಜಾನಪದ ತರಬೇತಿ ಶಿಬಿರವನ್ನು ಕೋಲಾಟ, ಕಂಸಾಳೆ, ಪೂಜಾ ಕುಣಿತ, ಮಾರಿ ಕುಣಿತ, ಜಾನಪದ ಗಾಯನ ಪ್ರಕಾರಗಳನ್ನು ನಮ್ಮ ಕಾಲೇಜಿನಲ್ಲಿ ಕಲಿಸುತ್ತಿರುವುದು ಬಹಳ ಸಂತೋಷದ ವಿಚಾರ ಇದನ್ನ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಅಗತ್ಯವಾಗಿ ಕಲಿತುಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ಪ್ರೊ ನಂದೀಶ್ ಎಸ್., ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳು, ಟ್ರಸ್ಟ್ ನ ಕಾರ್ಯದರ್ಶಿಗಳಾದ ಮಹಾಲಕ್ಷ್ಮಿ, ತರಬೇತುದಾರರಾದ ಕಲಿಯೂರು ರಾಜೀವ್ ಹಾಗೂ ಕಾಲೇಜು ಬೋಧಕ ಮತ್ತು ಬೋಧಕೇತರರು ಸಿಬ್ಬಂದಿಗಳು ಹಾಜರಿದ್ದರು.
- ಎಂ.ನಾಗೇಂದ್ರ ಕುಮಾರ್.
