ಟಿ.ನರಸೀಪುರ : ಮನುಷ್ಯನು ತಾನು ವಾಸ ಮಾಡುವ ತನ್ನ ಸುತ್ತ ಮುತ್ತಲಿನ ಪರಿಸರವನ್ನು ಹಾಳು ಮಾಡಿ ಸಮಸ್ಯೆ ಉಂಟು ಮಾಡುತ್ತಾನೆ. ಅದರ ಪರಿಣಾಮವಾಗಿ ಆರೋಗ್ಯಕರ ಜೀವನವನ್ನು ಅನಾರೋಗ್ಯಕರವಾಗಿ ಮಾಡಿ ನರಳುವಂತಹ ವ್ಯವಸ್ಥೆಯನ್ನು ಕೃತಕವಾಗಿ ಮಾಡಿ ಬಿಡುತ್ತಾನೆಂದು ಕರ್ನಾಟಕ ರಾಜ್ಯ ರೈತ ಮೂಲ ಸಂಘಟನೆಯ ಮೈಸೂರು ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್ ದೂಷಿಸಿದರು.
ತಾಲ್ಲೂಕಿನ ಮಲಿಯೂರಿನಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವಿಶಾಲವಾದ ಹೊರ ಆವರಣದಲ್ಲಿ ತಾಲ್ಲೂಕು ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ರೈತ ಮೂಲ ಸಂಘಟನೆಯ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ವಿವಿಧ ಜಾತಿಯ ಹಲವಾರು ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ಗಿಡ ನೆಟ್ಚು ಕಾರ್ಯಕ್ರದ ಉದ್ಘಾಟನೆಯನ್ನು ಗಿಡಕ್ಕೆ ನೀರೆರೆಯುವ ಮೂಲಕ ನೆರವೇರಿಸಿ ಮಾತನಾಡಿ ಪ್ರಕೃತಿಯನ್ನು ನಾಶ ಮಾಡುವ ಮನುಷ್ಯ ತಾನು ತೋಡಿದ ಹಳ್ಳಕ್ಕೆ ತಾನೇ ಬಿದ್ದು ಕೊನೆಯುಸಿರು ಎಳೆಯುತ್ತಾನೆ.ಆದರೂ ಇದನ್ನು ನೋಡಿಯೂ ಬುದ್ದಿ ಕಲಿಯದ ಮನುಷ್ಯ ಜೀವಗಳು ಮತ್ತದೇ ತಪ್ಪು ಕೆಲಸಗಳನ್ನು ಪುನರಾವರ್ತಿಸುತ್ತಾ ಹೋಗುತ್ತಾನೆ. ಇಂತಹವರಿಂದ ತಮ್ಮದಲ್ಲದ ತಪ್ಪಿಗೆ ಶಿಕ್ಷ ಅನುಭವಿಸುವವರು ಶ್ರೀ ಸಾಮಾನ್ಯ ಎಂದರು.

ಮುಂದಿನ ಪೀಳಿಗೆಗೆ ಪ್ರಕೃತಿ ಸಂಪತ್ತನ್ನು ಉಳಿಸಿಲ್ಲವೆಂದರೆ ಮನುಷ್ಯರು ಭೂಮಿಯ ಮೇಲೆ ವಾಸ ಮಾಡಲು ಅಸಾಧ್ಯವಾದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆಂದು ಆತಂಕ ವ್ಯಕ್ತಪಡಿಸಿ ಈಗಿನಿಂದಲೇ ಮಕ್ಕಳ ಎಳೆಯ ಮನಸ್ಸಿಗೆ ಪ್ರಕೃತಿ ಸಂಪತ್ತಿನಿಂದ ನಮಗಾಗುವ ಲಾಭ ಹಾಗೂ ನಷ್ಟಗಳನ್ನು ತಿಳಿಸುವ ಕೆಲಸವೂ ಜೊತೆ,ಜೊತೆಗೆ ನಡೆಯಬೇಕಿದೆ.ಆಗ ಮಾತ್ರ ಮನುಷ್ಯ ಜೀವಿಸಬಹುದೆಂದರು.ವಿಶ್ವ ಪರಿಸರ ದಿನಾಚರಣೆ ಮಾಡುವುದು ಕೇವಲ ನಾಲ್ಕು ಗಿಡ ನೆಟ್ಚು ಹೋಗುವುದಲ್ಲ. ಕಾರ್ಯಕ್ರಮದಲ್ಲಿ ಹಲವಾರು ಜನರು ಭಾಗಿಯಾಗುವಂತೆ ಮಾಡಿ ಪರಿಸರದ ಎಲ್ಲಾ ಮಜಲುಗಳನ್ನು ಮನದಟ್ಟು ಮಾಡಿ ಕಾರ್ಯಕ್ರಮದ ನಂತರ ಅವರ ತಲೆಯಲ್ಲಿ ಪರಿಸರ ನಮಗೆ ಎಷ್ಟು ಮಹತ್ವ ಎಂಬ ವಿಷಯ ಅವರ ಮನಸ್ಸಿನಲ್ಲಿ ಕೂರುವಂತ್ತಾಗಬೇಕೆಂದರು.
ಹಿರಿಯ ವಿಜ್ಞಾನಿಗಳಾದ ಗೋವಿಂದರಾಜುರವರು ಮಾತನಾಡಿ ಪ್ರಪಂಚದಲ್ಲಿ ಇರುವ ಎಲ್ಲಾ ಜೀವರಾಶಿಗಳಿಗಿಂತ ಅತ್ಯಂತ ಕಡಿಮೆ ಇರುವ ಜೀವರಾಶಿ ಎಂದರೆ ಅದು ಮನುಷ್ಯರು ಮಾತ್ರ.ಆದರೂ ಮನುಷ್ಯ ಅವುಗಳೆಲ್ಲವನ್ನು ಹತೋಟಿ ಮಾಡುತ್ತಾ ಬರುತ್ತಾನೆ.ವಾತಾವರಣದ ವೈಪರೀತ್ಯಗಳು ಸಂಭವಿಸುವುದೇ ಪ್ರಕೃತಿಯ ನಾಶದಿಂದ ಎಂಬುದನ್ನು ಮನುಷ್ಯ ಮೊದಲು ಅರಿಯಬೇಕು.ಈ ಭಾರಿ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಬಂದಿದೆ.ಆಗೆ ತಾಪಮಾನವು ಕೂಡ ವರ್ಷದಿಂದ ವರ್ಷಕ್ಕೆ .5 ಮಿಲಿ ಹೆಚ್ಚುತ್ತಿದೆ ಇದೆಲ್ಲಾ ಏಕೆ ಹೀಗಾಗುತ್ತಿದೆ ಎಂದರೆ ಮರಗಿಡಗಳ ನಾಶದಿಂದ ಎಂದರು.

ಅರಳೀಮರ ಹೆಚ್ಚು ಆ್ಯಕ್ಸಿಜನ್ ಹೊದಗಿಸುವ ಮರವಾಗಿದೆ.ಅದರ ಮಹತ್ವವನ್ನು ಅರಣ್ಯ ಇಲಾಖೆಯವರು ಜನರಿಗೆ ಮನದಟ್ಟು ಮಾಡಿ ಅವುಗಳ ಬೆಳವಣಿಗೆಗೆ ಮುಂದಾಗಬೇಕು.ಪ್ಲಾಸ್ಟಿಕ್ ಬಳಕೆಯಿಂದ ಇಂದು ಎಷ್ಟು ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ ಎಂದರೆ ಹಸು ಕರುಗಳು ಮನುಷ್ಯ ಎಲ್ಲೆಂದರಲ್ಲಿ ಬಿಸಾಡುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಿಂದು ಅವುಗಳ ಆರೋಗ್ಯ ಕ್ಷೀಣಿಸಿ ಮರಣ ಹೊಂದುತ್ತಿರುವುದು ನಮ್ಮ ಕಣ್ಣ ಮುಂದೆಯೇ ನಡೆಯುತ್ತಿದೆ.ನಾವೂ ಕೂಡ ದಿನ ನಿತ್ಯ ಬಳಕೆಯಲ್ಲಿ ಪ್ಲಾಸ್ಟಿಕ್ ನನ್ನು ಅವಿಭಾಜ್ಯ ಅಂಗವಾಗಿ ಮಾಡಿಕೊಂಡು ತಿನ್ನುವ ಎಲ್ಲಾ ಪದಾರ್ಥಗಳನ್ನು ಅದರಲ್ಲಿಯೇ ಪಾರ್ಸಲ್ ತಂದು ದಿನ ನಿತ್ಯ ನಮ್ಮ ಹೊಟ್ಟೆಗೆ ನಮಗರಿವಿಲ್ಲದಂತೆ ವಿಷವನ್ನು ತಿನ್ನುತ್ತಿದ್ದೇವೆಂದು ಆತಂಕ ವ್ಯಕ್ತಪಡಿಸಿದರು.
ಈ ಹಿಂದೆ ಹೊಲ,ಗದ್ದೆಗಳಿಗೆ ಕೊಟ್ಟಿಗೆ ಗೊಬ್ಬರಗಳನ್ನು ಮಾತ್ರ ಬಳಸುತ್ತಿದ್ದರು.ಆಧುನಿಕತೆ ಬದಲಾದಂತೆ ಇಂದು 24 ಮಿಲಿಯನ್ ಟನ್ ರಸಗೊಬ್ಬರಗಳನ್ನು ಬಳಕೆ ಮಾಡಿ ನಾವು ತಿನ್ನುವ ಆಹಾರಕ್ಕೆ ನಾವೇ ವಿಷ ಮಿಶ್ರಣ ಮಾಡಿ ತಿನ್ನುವಂತಹ ಪರಿಸ್ಥಿತಿಗೆ ಬಂದಿರುವುದು ಬೆಚ್ಚಿ ಬೀಳಿಸುವ ವಿಷಯವಾಗಿದೆ ಎಂದರು.ಇದರಿಂದ ಮನುಷ್ಯ ಅನೇಕ ಖಾಯಿಲೆಗಳಿಂದ ಬಳಲುವಂತ್ತಾಗಿದೆ.ಹಿಂದೆ ಪ್ಲೇಗು,ಕಾಲರಾ,ಜ್ವರ ಬಿಟ್ಟರೆ ಯಾವುದೇ ಖಾಯಿಲೆಗಳು ಮನುಷ್ಯರನ್ನು ಭಾದಿಸುತ್ತಿರಲಿಲ್ಲ.ಅದಕ್ಕಾಗಿ ಮನುಷ್ಯರು ತಾವೇ ಸೃಷ್ಟಿಸಿಕೊಂಡಿರುವ ಮೃತ್ಯು ಕೂಪದಿಂದ ಹೊರ ಬರಬೇಕಾದರೆ ಪರಿಸರ ಉಳಿಸಿ ಬೆಳೆಸುವುದು ಅತ್ಯಂತ ಅವಶ್ಯವಾಗಿದೆ ಎಂದರು.
ಕರ್ನಾಟಕ ಅರಣ್ಯ ಸೇವೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶಂಕರೇಗೌಡ ಮಾತನಾಡಿ ವಿಶ್ವ ಪರಿಸರ ದಿನಾಚರಣೆ ಮಾಡುವ ಉದ್ದೇಶ ನಾವೆಲ್ಲರೂ ಜಾಗೃತರಾಗಬೇಕೆಂದು.ಅದಕ್ಕಾಗಿ ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಗಟ್ಟುವುದು.ಜಾಗತಿಕ ಮಟ್ಟದಲ್ಲಿ ಸುಸ್ಥಿರವಾಗಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದ ರಾಷ್ಟ್ರ ಸೌತ್ ಕೋರಿಯಾ.ಅದಕ್ಕಾಗಿ ವಿಶ್ವ ಸಂಸ್ಥೆ ಸೌತ್ ಕೋರಿಯಾ ರಾಷ್ಟ್ರದ ಸಾರಥ್ಯದಲ್ಲಿ ಪ್ಲಾಸ್ಟಿಕ್ ನಿಷೇಧವನ್ನು ಹೇಗೆ ಮಾಡಬೇಕೆಂದು ವಿಶ್ವದೆಲ್ಲೆಡೆ ಕಾರ್ಯಕ್ರಮ ಮಾಡಲು ಉದ್ದೇಶಿಸಿದೆ ಎಂದರು.

ಸಂಶೋಧನೆ ಮಾಡಿದ ಪ್ರಕಾರ ಹಾಲುಣಿಸುವ ತಾಯಿ ಎದೆ ಹಾಲಿನಲ್ಲಿ ಮೈಕ್ರೋ ಪ್ಲಾಸ್ಟಿಕ್ ಅಂಶ ಪತ್ತೆಯಾಗಿದೆ.ಇದರಿಂದಾಗಿ ಕ್ಯಾನ್ಸರ್ ಕಾರಕ ಖಾಯಿಲೆಗಳು ಸಣ್ಣ ಮಗುವಿನಿಂದಲೇ ನಮ್ಮಿಂದ ನಾವೇ ಹಂಚುತ್ತಿದ್ದೇವೆ.ಎಂತಹ ದುರದೃಷ್ಟವಲ್ಲವೇ.ಮೂವತ್ತು ವರ್ಷಗಳ ಹಿಂದೆ ಹಣವಿಲ್ಲದಿದ್ದರೂ ಆರೋಗ್ಯ ಇತ್ತು.ಈಗ ಹಣವಿದೆ ಆರೋಗ್ಯವಿಲ್ಲ ವಿಪರ್ಯಾಸವೆಂದರೆ ಇದೇ ಅಲ್ಲವೇ.ಬಟ್ಟೆ ಬ್ಯಾಗು,ಉಲ್ಲನ್ ಬ್ಯಾಗುಗಳು,ಕಾಗದದ ಕವರ್ಗಳು,ಪಾತ್ರೆಯಂತಹ ವಸ್ತುಗಳನ್ನು ಉಪಯೋಗಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ವೈದ್ಯಾಧಿಕಾರಿಗಳಾದ ಡಾ.ರವಿಕುಮಾರ್, ಆಡಳಿತ ವೈದ್ಯಾಧಿಕಾರಿಗಳಾದ ಡಾ.ಮಾಲತೇಶ್ ಪರಿಸರದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಲಿಯೂರು ಗ್ರಾ.ಪಂ.ಅಧ್ಯಕ್ಷರಾದ ಮಮತಾ ನಾಗೇಂದ್ರ, ವಲಯ ಅರಣ್ಯಾಧಿಕಾರಿಗಳಾದ ಎಸ್.ಡಿ.ರಾಜೇಶ್,ಹಿರಿಯ ರೈತಪರ ಹೋರಾಟಗಾರರಾದ ಹೊನ್ನೇಗೌಡ,ಧರ್ಮಸ್ಥಳ ಸಂಘದ ಕೃಷಿ ಮೇಲ್ವಿಚಾರಕರಾದ ಮಂಜುನಾಥ್, ಉಪ ವಲಯ ಅರಣ್ಯ ಅಧಿಕಾರಿಗಳಾದ ಆಂಥೋನಿ ಸ್ವಾಮಿ,ವಿನಯ್,ಗಸ್ತು ಅರಣ್ಯಪಾಲಕ ಚೆನ್ನ ಬಸವಯ್ಯ ಸೇರಿದಂತೆ,ಹಲವಾರು ರೈತ ಮುಖಂಡರುಗಳು ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು,ಆಸ್ಪತ್ರೆ ದಾದಿಯರು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.
ವರದಿ
ಎಂ.ನಾಗೇಂದ್ರಕುಮಾರ್
