ಟಿ.ನರಸೀಪುರ : ಸಚಿವ ಡಾ.ಹೆಚ್.ಸಿ.ಮಹದೇವಪ್ಪರವರು ಜಾತ್ಯಾತೀತ ರಾಜಕಾರಣಿ.ಮೀಸಲಾತಿಯ ಬಗ್ಗೆ ತಾರತಮ್ಯ ಮಾಡದೆ ಕಾನೂನಾತ್ಮಕವಾಗಿ ಸರಿ ಸಮನಾಗಿ ಸಿಗುವಂತಹ ಮೀಸಲಾತಿಗೆ ಬದ್ದರಾಗಿರುವವರು.ಅಂತಹವರ ಬಗ್ಗೆ ಕೀಳಾಗಿ ಮಾತನಾಡುವ ಪ್ರವೃತ್ತಿಯನ್ನು ಕೈ ಬಿಡಬೇಕು.ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮದ ಜನತೆ ತಕ್ಕ ಪಾಠ ಕಲಿಸಬೇಕಾಗುತ್ತದೆಂದು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೂಗೂರು ಎಂ.ಡಿ.ಬಸವರಾಜು ಎಚ್ಚರಿಸಿದರು.
ತಾಲ್ಲೂಕಿನ ಮೂಗೂರು ಗ್ರಾಮದ ವಾಲ್ಮೀಕಿ ಸಮುದಾಯ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಮ್ಮ ಗ್ರಾಮದಲ್ಲಿ ಎಲ್ಲಾ ಸಮುದಾಯದ ಜನರು ಅಣ್ಣ,ತಮ್ಮಂದಿರಂತೆ ಬದುಕನ್ನು ಕಳೆಯುತ್ತಿದ್ದೇವೆ.ನಮ್ಮ ಕ್ಷೇತ್ರದ ಶಾಸಕರು ಹಾಗೂ ಸಚಿವರಾಗಿರುವ ಡಾ.ಹೆಚ್.ಸಿ.ಮಹದೇವಪ್ಪರವರು ಗ್ರಾಮದ ಅಭಿವೃದ್ಧಿ ಹಾಗೂ ಜನತೆಯ ಕಲ್ಯಾಣಕ್ಕಾಗಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ನೀಡಿದ್ದಾರೆ.ಎಡಗೈ,ಬಲಗೈ ಸಮುದಾಯಗಳ ನಡುವೆ ಬಿರುಕು ಮೂಡಿಸಲು ಸ್ವಯಂ ಘೋಷಿತ ನಾಯಕರೆಂದು ಹೇಳಿಕೊಂಡು ಹೆಚ್.ಸಿ.ಎಂ.ರವರ ಬಗ್ಗೆ ಹಗುರವಾಗಿ ಮಾತನಾಡುವ ಆ ವ್ಯಕ್ತಿ ಮಹದೇವಪ್ಪನವರ ಧೂಳಿಗೂ ಸಮ ಇಲ್ಲದ ವ್ಯಕ್ತಿ ಆತ.ಆನೆಗೂ,ನಾಯಿಗೂ ಸಮವೇ ಎಂದು ಪರೋಕ್ಷವಾಗಿ ಭಾಸ್ಕರ್ ಪ್ರಸಾದ್ ವಿರುದ್ಧ ಗುಡುಗಿದರು.
ಮೂಗೂರು ಗ್ರಾಮದಲ್ಲಿ ಬಲಗೈ ಸಮುದಾಯದವರು ಹೆಚ್ಚಿದ್ದರು,ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪರವರು ಎಡಗೈ ಸಮುದಾಯಕ್ಕೆ ಹೆಚ್ಚಿನ ರಾಜಕೀಯ ಪ್ರಾತಿನಿದ್ಯ ನೀಡಿದ್ದಾರೆ ಅಂತಹವರ ಬಗ್ಗೆ ಯಾರೋ ಒಬ್ಬ ಸ್ವಯಂಘೋಷಿತ ನಾಯಕರೆಂದು ಬಿಂಬಿಸಿಕೊಂಡು ಬಾಯಿಗೆ ಬಂದಂತೆ ಹೆಚ್.ಸಿ.ಎಂ.ರವರ ಬಗ್ಗೆ ಮಾತನಾಡಿರುವುದನ್ನು ತೀರ್ವವಾಗಿ ಖಂಡಿಸುತ್ತೇವೆ ಎಂದರು.

ಮುಂದಿನ ದಿನಗಳಲ್ಲಿ ನಮ್ಮ ಹಳ್ಳಿಗಳಿಗೆ ಬಂದು ಮಹದೇವಪ್ಪರವರ ಬಗ್ಗೆ ಹಗುರವಾಗಿ ಮಾತನಾಡಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆಂದರು.
ಎಡಗೈ ಸಮುದಾಯದ ಮುಖಂಡ ಮಹದೇವಸ್ವಾಮಿರವರು ಮಾತನಾಡಿ, ಮಾದಿಗರ ಒಳ ಮೀಸಲಾತಿ ವಿಚಾರದಲ್ಲಿ ಕ್ರಾಂತಿಕಾರಿ ರಥಯಾತ್ರೆ ಕೈಗೊಂಡು ಟಿ.ನರಸೀಪುರ ತಾಲ್ಲೂಕಿನ ಮೂಗೂರು ಗ್ರಾಮಕ್ಕೆ ರಥ ಯಾತ್ರೆ ಬಂದ ಸಂದರ್ಭದಲ್ಲಿ ಭಾಸ್ಕರ್ ಪ್ರಸಾದ್ ಎಂಬುವರು ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪರವರ ಬಗ್ಗೆ ಹಗುರ ಮಾತುಗಳನ್ನಾಡಿದ್ದು ಅದರ ಬಗ್ಗೆ ನಮಗೆ ವಿಷಾದವಿದೆ ಅದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ. ನಮ್ಮ ಎಡಗೈ ಸಮುದಾಯ ಬಲಗೈ ಸಮುದಾಯದ ಜೊತೆ ಅಣ್ಣ,ತಮ್ಮಂದಿರ ರೀತಿ ಒಡನಾಟದಲ್ಲಿ ಇದ್ದೇವೆ.ಡಾ.ಹೆಚ್.ಸಿ.ಎಂ ರವರು ಒಳ ಮೀಸಲಾತಿ ವಿಚಾರದಲ್ಲಿ ವಿರೋಧಿಯಲ್ಲ.101 ಉಪಜಾತಿಗಳ ದಲಿತರಿಗೆ ದಕ್ಷ ಗಟ್ಚಿ,ಮುಟ್ಚಾದ ನಾಯಕರು ಮಹದೇವಪ್ಪರವರು.ಸರ್ಕಾರ ಒಳ ಮೀಸಲಾತಿ ವಿಚಾರದಲ್ಲಿ ಖಂಡಿತವಾಗಿಯೂ ನ್ಯಾಯ ಕೊಡುತ್ತದೆ ಎಂಬ ನಂಬಿಕೆ ನಮಗಿದೆ ಎಂದರು.

ವೀರಶೈವ ಸಮಾಜದ ಮುಖಂಡ ನಾಗಪ್ಪ ಹಾಗೂ ಬಲಗೈ ಸಮುದಾಯದ ಮುಖಂಡರಾದ ಜಗದೀಶ್ ರವರು ಮಾತನಾಡಿ ಒಳ ಮೀಸಲಾತಿ ವಿಚಾರದಲ್ಲಿ ಹೋರಾಟ ಮಾಡುವಾಗ ಸರ್ಕಾರದ ಜೊತೆ ನೇರ ಹೋರಾಟವಿರಬೇಕೆ ಹೊರತು ವೈಯಕ್ತಿಕವಾಗಿ ವ್ಯಕ್ತಿಗಳನ್ನು ನಿಂದಿಸುವಂತಹ ಮನಸ್ಥಿತಿಗೆ ಬರಬಾರದು.ಭಾಸ್ಕರ್ ಪ್ರಸಾದ್ ಎಂಬ ವ್ಯಕ್ತಿಯು ಉದ್ದೇಶ ಪೂರ್ವಕವಾಗಿ ಡಾ.ಹೆಚ್.ಸಿ.ಎಂ.ರವರನ್ನು ಕೆಟ್ಟ ಪದಗಳಿಂದ ನಿಂದಿಸಿ ಅಮಾಯಕ ಎಡಗೈ ಸಮುದಾಯದವರನ್ನು ಎತ್ತಿ ಕಟ್ಟುವಂತಹ ಮಾತುಗಳನ್ನು ಆಡಿ ಹೋಗಿದ್ದಾರೆ.ಅಸಂವಿಧಾನಿಕ ಪದಗಳನ್ನು ಉಪಯೋಗಿಸಿ ಹೋಗಿದ್ದು ಖಂಡನೀಯ ಎಂದರು.ನಮ್ಮ ಗ್ರಾಮದಲ್ಲಿ ಅಣ್ಣ ತಮ್ಮಂದಿರಂತೆ ಬದುಕುತ್ತಿರುವ ನಮ್ಮೆಲ್ಲರಲ್ಲೂ ಬಿರುಕು ಮೂಡಿಸುವ ಸಲುವಾಗಿ ಪ್ರಚೋದನಕಾರಿ ಮಾತುಗಳನ್ನು ಆಡಿರುವ ಭಾಸ್ಕರ್ ಪ್ರಸಾದ್ ಎಂಬ ವ್ಯಕ್ತಿಯ ಮಾತುಗಳ ಬಗ್ಗೆ ಯಾರೂ ಕಿವಿಗೊಡಬೇಡಿ.ಆದರೆ ಆತನ ಮಾತುಗಳನ್ನು ತೀರ್ವವಾಗಿ ಖಂಡಿಸುತ್ತೇವೆ.ಹೆಚ್.ಸಿ.ಎಂ.ರವರು ಎಂದಿಗೂ ಜಾತಿ ರಾಜಕಾರಣ ಮಾಡಿದವರಲ್ಲ ನಾವೆಲ್ಲರೂ ಹೆಮ್ಮೆ ಪಡುವಂತಹ ವ್ಯಕ್ತಿ ಹೆಚ್.ಸಿ.ಎಂ.ರವರು ಎಂದರು.

ಈ ಸಂದರ್ಭದಲ್ಲಿ ಎಡಗೈ, ಬಲಗೈ ,ವೀರಶೈವ,ಕುರುಬ ಹಾಗೂ ನಾಯಕ ಸಮುದಾಯದ ಅನೇಕ ಮುಖಂಡರು ಹಾಜರಿದ್ದರು.
ವರದಿ-ಎಂ.ನಾಗೇಂದ್ರಕುಮಾರ್
ಟಿ.ನರಸೀಪುರ
