ಟಿ.ನರಸೀಪುರ : ತಾಲ್ಲೂಕಿನ ಮೂಗೂರು ಗ್ರಾಮದಲ್ಲಿ ಇತಿಹಾಸ ಪುರಾಣ ಪ್ರಸಿದ್ಧ ಶ್ರೀ ತ್ರಿಪುರಸುಂದರಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಬಂಡಿ ಉತ್ಸವವು ಸಾಂಪ್ರದಾಯಿಕವಾಗಿ ವಿಜೃಂಭಣೆಯಿಂದ ನಡೆಯಿತು.
ಸಹಸ್ರಾರು ಸಂಖ್ಯೆಯಲ್ಲಿ ಬಂಡಿಯನ್ನು ನೋಡಲು ಜಮಾಯಿಸಿದ್ದ ಭಕ್ತ ಗಣ.ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತಾದಿಗಳು ಬಂಡಿಯ ಓಟವನ್ನು ಕಣ್ತುಂಬಿಕೊಂಡರು.

ದೇವಾಲಯದಲ್ಲಿ ಪೂಜಾ ಕೈಂಕರ್ಯಗಳು ಧಾರ್ಮಿಕ ವಿಧಿ,ವಿಧಾನಗಳೊಂದಿಗೆ ನಡೆದವು. ಅಮ್ಮನವರ ಉತ್ಸವ ಮೂರ್ತಿ ದೇವಾಲಯವನ್ನು ಪ್ರದಕ್ಷಿಣೆ ಹಾಕಿದ ನಂತರ ದೇವಾಲಯದ ಮುಂಭಾಗದ ರುದ್ರಾಕ್ಷಿ ಮಂಟಪಕ್ಕೆ ತಂದು ಪ್ರತಿಷ್ಟಾಪನೆ ಮಾಡಲಾಯಿತು.
ನೆರೆದಿದ್ದ ಭಕ್ತರು ಮೊದಲ ಬಂಡಿ ಓಟಕ್ಕೆ ಹಿಡುಗಾಯಿ ಸುರಿಮಳೆಗೈದರು.ನಂತರ ಬಂಡಿ ಬೀದಿಯ ಮೂಲಕ ಬಂಡಿ ಮಂಟಪದ ಬಳಿ ತಲುಪುತ್ತಿದ್ದಂತೆ ಅಮ್ಮನವರಿಗೆ ಮಹಾ ಮಂಗಳಾರತಿ ಮಾಡುವ ಮೂಲಕ ಬಂಡಿ ಓಟಕ್ಕೆ ಚಾಲನೆ ನೀಡಲಾಯಿತು.

ನೆರೆದಿದ್ದ ಭಕ್ತರು ಅಮ್ಮನವರಿಗೆ ಜೈಕಾರ ಕೂಗುತ್ತಾ ಬಂಡಿಯ ಓಟವನ್ನು ಕಣ್ತುಂಬಿಕೊಂಡರು.
ಇದೇ ಸಂದರ್ಭದಲ್ಲಿ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಬ್ಯಾಡರಹಳ್ಳಿ ಗ್ರಾಮದ ಗ್ರಾಮಸ್ಥರ ಸೇವಾ ಸಮಿತಿ ವತಿಯಿಂದ 36 ನೇ ವರ್ಷದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು

ಮಾಜಿ ಸಚಿವರು ಹಾಗೂ ಸಂಸದರಾದ ಸಿ.ಎಸ್.ಪುಟ್ಟರಾಜುರವರ ಸಹೋದರರಾದ ಚಿಕ್ಕರಾಮಣ್ಣ ಮತ್ತು ಮಾಸ್ಟರ್ ಲಿಂಗಯ್ಯ ರವರು ಆರಂಭಿಸಿದ
ಅನ್ನದಾನಕ್ಕೆ ಕೊಡುವ ಕೊಡುಗೈ ದಾನಿಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದಾಗಿ ಗ್ರಾಮಸ್ಥರು ತಿಳಿಸಿದರು.

ದಾನಿಗಳಿಂದ ಅನ್ನ ದಾಸೋಹಕ್ಕೆ ಬೇಕಾದ ಆಹಾರ ಪದಾರ್ಥಗಳು ಹಾಗೂ ತಯಾರಿಕೆಗೆ ಬೇಕಾದ ಸಾಮಗ್ರಿಗಳ ಪೂರ್ವ ಸಿದ್ದತೆ ಆರಂಭಿಸಿ ಮೂಗೂರು ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ನಾಲ್ಕು ದಿನಗಳ ಕಾಲ ಅನ್ನ ಸಂತರ್ಪಣೆ ನಡೆಸಲಾಗುವುದೆಂದರು.

ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜುರವರು ಮೂಗೂರು ಶ್ರೀ ತ್ರಿಪುರಸುಂದರಿ ಅಮ್ಮನವರ ಸೇವಾಕಾರ್ಯವನ್ನು ಸಾಂಘಿಕವಾಗಿ ನಿರ್ವಹಿಸುತ್ತಾ ಬರುತ್ತಿದ್ದು,ಅನ್ನ ಸಂತರ್ಪಣೆ ಕಾರ್ಯವನ್ನು ಯಶಸ್ವಿಯಾಗಿ ನಡೆಯಲು ಸಹಕಾರ ನೀಡಿ ಅಮ್ಮನವರ ಸೇವೆ ಮಾಡುತ್ತಿದ್ದಾರೆಂದು ಬ್ಯಾಡರಹಳ್ಳಿ ಅನ್ನ ಸಂತರ್ಪಣೆ ಸಮಿತಿಯ ಪದಾಧಿಕಾರಿಗಳು ಸ್ಮರಿಸಿದರು.
ಜಾತ್ರೆ ಹಾಗೂ ಇತರೆ ದಿನಗಳಲ್ಲಿ ಅಮ್ಮನವರ ದರ್ಶನಕ್ಕೆ ಬರುವ ಭಕ್ತಾಧಿಗಳಿಗೆ ವಸತಿ ಹಾಗೂ ಮೂಲ ಸೌಕರ್ಯಗ ಸೌಲಭ್ಯ ಹೊದಗಿಸುವ ಸದುದ್ದೇಶದಿಂದ ಗ್ರಾಮದಲ್ಲಿ ಶ್ರೀ ತ್ರಿಪುರ ಸುಂದರಿ ಅಮ್ಮನವರ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ದಾನಿಗಳು ಹಾಗೂ ಭಕ್ತರ ನೆರವು ಪಡೆದು ಸುಸಜ್ಜಿತ ವಸತಿಗೃಹ ನಿರ್ಮಾಣ ಕಾರ್ಯಕ್ಕೆ ಸಿ.ಎಸ್.ಪುಟ್ಟರಾಜುರವರು ಸಹಕಾರ ಸ್ಮರಣೀಯ ಎಂದರು.
– ಎಂ.ನಾಗೇಂದ್ರಕುಮಾರ್
