ಟಿ.ನರಸೀಪುರ : ರಾಜ್ಯದ ಎಲ್ಲಾ ನಗರ, ಸ್ಥಳೀಯ ಸಂಸ್ಥೆ ಪೌರಕಾರ್ಮಿಕ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಿ ಸರ್ಕಾರಿ ನೌಕರರು ಪಡೆಯುವ ಎಲ್ಲಾ ಸೌಲಭ್ಯಗಳು ಸೇರಿದಂತೆ ನಾಲ್ಕು ಬೇಡಿಕೆಗಳನ್ನು ಸರ್ಕಾರ ಈಡೇರಿಸುವಂತೆ ಪುರಸಭೆ ಪೌರಕಾರ್ಮಿಕ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಚಾಲನೆ ನೀಡಿದರು.
ಪಟ್ಟಣದ ಪುರಸಭೆ ಮುಂಭಾಗ ಬೆಳಗ್ಗೆ 6-30 ರಿಂದಲೇ ಪೌರಕಾರ್ಮಿಕ ವರ್ಗ ಜಮಾಯಿಸಿ ಮುಷ್ಕರದಲ್ಲಿ ಪಾಲ್ಗೊಂಡರು.ನೇತೃತ್ವ ವಹಿಸಿದ್ದ ಪ್ರಸನ್ನ ಮಾತನಾಡಿ ನಮ್ಮ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ರಾಜ್ಯಾಧ್ಯಕ್ಷ ಕೆ.ಪ್ರಭಾಕರ್ ರವರ ಆದೇಶದ ಮೇರೆಗೆ ಟಿ.ನರಸೀಪುರದ ಪೌರ ನೌಕರರಾದ ನಾವು ಕರ್ತವ್ಯಕ್ಕೆ ಗೈರಾಗುವ ಮೂಲಕ ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸುವಂತೆ ಇಂದಿನಿಂದ ರಾಜ್ಯಾದ್ಯಂತ ಪೌರ ನೌಕರರು ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಪಾಲ್ಗೊಂಡಿದ್ದೇವೆಂದರು.

ಸರ್ಕಾರ ಎಲ್ಲಾ ಸರ್ಕಾರಿ ನೌಕರರನ್ನು ಪರಿಗಣಿಸುವ ಮಾದರಿಯಲ್ಲೇ ನಮ್ಮನ್ನು ಪರಿಗಣಿಸಬೇಕು.ಜ್ಯೋತಿ ಸಂಜೀವಿನಿ,ಕೆಜಿಐಡಿ ಸೌಲಭ್ಯ ನೀಡಿ,ಹೊರಗುತ್ತಿಗೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೀರು ಸರಬರಾಜು, ಚಾಲಕರು, ಲೋಡರ್ಸ್, ಕ್ಲೀನರ್ಸ್, ಗಾರ್ಡನರ್, ಸ್ಯಾನಿಟರಿ,ಸೂಪರ್ ವೈಸರ್,ಯುಜಿಡಿ ಸಹಾಯಕರು ಸೇರಿದಂತೆ ವಿವಿಧ ವೃಂದದ ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ಒಳಪಡಿಸಬೇಕು.
ದಿನಗೂಲಿ,ಕ್ಷೇಮಾಭಿವೃದ್ಧಿ ಸಮಾನ ಕೆಲಸಕ್ಕೆ ಸಮಾನ ವೇತನ ನೌಕರರನ್ನು ಖಾಯಂ ಮಾಡಿ,ಎಲ್ಲಾ ಪೌರ ಕಾರ್ಮಿಕ ನೌಕರರಿಗೆ ಎಸ್ ಎಫ್ ಸಿ ಮುಕ್ತ ನಿಧಿಯಿಂದ ವೇತನ ನೀಡಬೇಕಂಬುದು ನಮ್ಮ ಆಗ್ರಹಪೂರ್ವಕ ಮನವಿಯಾಗಿದೆ ಎಂದು ತಿಳಿಸಿ ನಮ್ಮ ಬೇಡಿಕೆಗೆ ಸರ್ಕಾರ ಸ್ಪಂಧಿಸುವವರೆಗೂ ನಾವೆಲ್ಲರೂ ಕರ್ತವ್ಯಕ್ಕೆ ಗೈರಾಗಲಿದ್ದೇವೆಂದರು.
ಈ ಸಂಬಂಧ ಪುರಸಭೆ ಮುಖ್ಯಾಧಿಕಾರಿಗಳಾದ ವಸಂತಕುಮಾರಿಯವರನ್ನು ಮಾತನಾಡಿಸಿದಾಗ ಪೌರಕಾರ್ಮಿಕರು ಸಾರ್ವಜನಿಕರಿಗೆ ತೊಂದರೆ ಆಗದಂತೆ ನಿಮ್ಮ ಕರ್ತವ್ಯ ನಿರ್ವಹಿಸಿ ನಂತರ ಒಂದು ಗಂಟೆಗಳ ಕಾಲ ನಿಮ್ಮ ಪ್ರತಿಭಟನೆ ಏನಿದೆ ಅದನ್ನು ಮಾಡಿ ನಂತರ ಕರ್ತವ್ಯಕ್ಕೆ ಹಾಜರಾಗಬೇಕೆಂದು ಸೂಚಿಸಿದ್ದೇನೆ.ಆದರೆ ಅವರು ಅವರ ಸಂಘದ ಮೇಲಿನವರು ಹೇಳುವ ರೀತಿಯಲ್ಲಿ ನಡೆದುಕೊಳ್ಳಬಹುದೆಂದರು.
ನಾಳೆ ಪುರಸಭೆ ಸಭಾಂಗಣದಲ್ಲಿ ಕೆಡಿಪಿ ಸಭೆ ಆಯೋಜನೆ ಮಾಡಲಾಗಿದ್ದು,ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಸಭೆಗೆ ಆಗಮಿಸುತ್ತಿದ್ದಾರೆ.ಆ ಸಂದರ್ಭದಲ್ಲಿ ಪೌರ ಕಾರ್ಮಿಕ ನೌಕರರು ಸಭೆಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆಂದು ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶಿವಣ್ಣ,ಬಿ.ನಂಜುಂಡ,ಕೆ.ಮಾದೇವ,ಅಶೋಕ್,ಪ್ರಶಾಂತ್,ಪುಟ್ಟರಾಜು,ನಾಗೇಶ್,ಎಂ.ಚಂದ್ರು,ಬಿ.ಸೋಮ ಸೇರಿದಂತೆ ಹಲವಾರು ಪೌರಕಾರ್ಮಿಕ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.
ಎಂ.ನಾಗೇಂದ್ರಕುಮಾರ್
ವರದಿಗಾರರು.
