ಟಿ. ನರಸೀಪುರ, ಆಗಸ್ಟ್ 2: “ರಾಜಋಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿನಲ್ಲಿ ಪ್ರಶಸ್ತಿ ಪಡೆಯುವುದು ನನಗೆ ಅತ್ಯಂತ ಗೌರವದ ವಿಷಯ” ಎಂದು ಕರಾಟೆ ಪಟು ಹಾಗೂ ತರಬೇತುದಾರ ಸೋಸಲೆ ಎಂ. ಸಿದ್ದರಾಜು ತಮ್ಮ ಹೃತ್ಪೂರ್ವಕ ಅಭಿಮತ ವ್ಯಕ್ತಪಡಿಸಿದರು.
ತಾಲೂಕಿನ ಸೋಸಲೆ ಹೋಬಳಿಯ ಹಸುವಟ್ಚಿ ಬಳಿ ಜ್ಞಾನೋದಯ ಇಂಗ್ಲಿಷ್ ಮಿಷನ್ ಸ್ಕೂಲ್ ನಲ್ಲಿ ನಡೆದ ಪದವಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರಾಗಿ ಸನ್ಮಾನ ಸ್ವೀಕರಿಸಿದ ಅವರು, ನಾಲ್ವಡಿ ಒಡೆಯರ್ ಅವರ ಆಡಳಿತಾವಧಿಯಲ್ಲಿ ಮೈಸೂರು ರಾಜ್ಯವು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿಯಲ್ಲಿ ಮಾದರಿಯಾಗಿತೆಂದು ಹೇಳಿದರು.
ಉಚಿತ ಹಾಗೂ ಕಡ್ಡಾಯ ಪ್ರಾಥಮಿಕ-ಮಾಧ್ಯಮಿಕ ಶಿಕ್ಷಣದ ಆರಂಭ, ದೇಶದ ಮೊದಲ ವಿಶ್ವವಿದ್ಯಾನಿಲಯದ ಸ್ಥಾಪನೆ, ಹಾಗೂ ಉಚಿತ ಆಸ್ಪತ್ರೆಗಳ ಜಾಲವನ್ನು ಬಿಚ್ಚುವ ಮೂಲಕ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ನಾಲ್ವಡಿಯವರು ನಾಂದಿಯಾಗಿ ನಿಂತು ದೇಶದ ಪ್ರಗತಿಗೆ ದಾರಿ ತೆರೆದವರು ಎಂದು ಪ್ರಶಂಸಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಪ್ರಥಮ ಘಟಿಕೋತ್ಸವದಲ್ಲಿ ನಾಲ್ವಡಿ ಒಡೆಯರ್ ನೀಡಿದ ನುಡಿಗಳನ್ನು ಉಲ್ಲೇಖಿಸಿ, “ಶಿಕ್ಷಣವು ಎಲ್ಲರಿಗೂ ದೊರಕಬೇಕು, ಬೋಧಕರು ತಮ್ಮ ಜ್ಞಾನವನ್ನು ಎಲ್ಲರಿಗೂ ಸಮಾನವಾಗಿ ಹಂಚಬೇಕು” ಎಂಬ ಅವರ ದಿಟ್ಟ ದೃಷ್ಟಿಕೋನವೇ ಇಂದು ಸಮಾನ ಶಿಕ್ಷಣದ ಕನಸು ಸಾಧ್ಯವನ್ನಾಗಿಸಿದೆ ಎಂದು ಅಭಿಪ್ರಾಯಪಟ್ಟರು.
ಜ್ಞಾನೋದಯ ಸಂಸ್ಥೆಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಯನ್ನು ಪಡೆದಿರುವ ನಾನು ಧನ್ಯನಾಗಿದ್ದೇನೆ. ಈ ಸಾಧನೆಗಳು ನನ್ನ ಜವಾಬ್ದಾರಿಗಳನ್ನು ಇನ್ನಷ್ಟು ಹೆಚ್ಚಿಸುತ್ತವೆ. ವಿದ್ಯಾರ್ಥಿಗಳು ಸನ್ಮಾರ್ಗದಲ್ಲಿ ನಡೆದು ಸಮಾಜದ ಬೆಳವಣಿಗೆಗೆ ಭಾಗಿಯಾಗಬೇಕು ಎಂದು ಅವರು ಹಿತವಚನ ಹೇಳಿದರು.
ಕಾರ್ಯಕ್ರಮದಲ್ಲಿ ಟಿ.ನರಸೀಪುರದ ದೈಹಿಕ ಶಿಕ್ಷಣ ಅಧಿಕಾರಿ ಮರಿಸ್ವಾಮಿ, ಶಾಲಾ ಪ್ರಾಂಶುಪಾಲ ಮೋಹನ್ ರಾಜು, ವಕೀಲ ರಾಜಣ್ಣ, ಮಹದೇವಸ್ವಾಮಿ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.
- ಎಂ.ನಾಗೇಂದ್ರ ಕುಮಾರ್
