ಟಿ.ನರಸೀಪುರ : ವಿದ್ಯಾವಂತ ವ್ಯಕ್ತಿಯು ಕೇವಲ ಪಠ್ಯ,ಚಟುವಟಿಕೆಗಳನ್ನು ಓದಿದರೆ ಸಾಲದು ಅವರ ವ್ಯಕ್ತಿತ್ವ ವಿಕಸನವಾಗಬೇಕಾದರೆ ಸಾಂಸ್ಕೃತಿಕ, ಕ್ರೀಡಾ ಮನೋಭಾವದ ವ್ಯಕ್ತಿಯಾಗಿ ರೂಪುಗೊಂಡರೆ ಮಾತ್ರ ಜೀವನ ಹಾಗೂ ಜಗತ್ತಿನ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆಂದು ಮೈಸೂರು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ಹೆಳವರಹುಂಡಿ ಸಿದ್ದಪ್ಪ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಜಾನಪದ ಸಂಗಮ ಹಾಗೂ ಸಾಂಸ್ಕೃತಿಕ, ಕ್ರೀಡೆ,ರಾಷ್ಟ್ರೀಯ ಸೇವಾ ಯೋಜನೆ,ರೇಂಜರ್ಸ್ ಮತ್ತು ರೋವರ್ಸ್,ಯೂತ್ ರೆಡ್ ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ದೀಪ ಬೆಳಗಿಸಿ ಬಸವಣ್ಣ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಫಾರ್ಚನೆ ಮಾಡುವ ಮೂಲಕ ನೆರವೇರಿಸಿ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ಸಮರ್ಥ,ಪ್ರತಿಭಾನ್ವಿತ,ಆದರ್ಶ ಪ್ರಜೆಯಾಗಿ ರೂಪಿಸಿ ಜಗತ್ತಿನ ಸವಾಲುಗಳಿಗೆ ಸಿದ್ದಪಡಿಸಿ ಹೊರಗೆ ಕಳುಹಿಸುವುದು ಉಪನ್ಯಾಸಕರ ಕರ್ತವ್ಯ.ಅದನ್ನು ಈ ಕಾಲೇಜಿನ ಅಧ್ಯಾಪಕ ವೃಂದ ಸಮರ್ಥವಾಗಿ ನಿಭಾಯಿಸುತ್ತಿದೆ ಎಂದು ಭಾವಿಸುವುದಾಗಿ ತಿಳಿಸಿ ಯಾವುದೇ ಕ್ಷೇತ್ರದಲ್ಲೂ ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು.ಯಾವ ವ್ಯಕ್ತಿಗೆ ಸಾಹಿತ್ಯ,ಕಲೆ,ಸಂಗೀತ ಹಾಗೂ ಜಾನಪದ ಸೊಗಡು ಇರುವುದಿಲ್ಲವೋ ಅವರು ಪರಿಪೂರ್ಣ ವ್ಯಕ್ತಿಯಾಗಲಾರ.ಈಗಿನ ಡಿಜಿಟಲ್ ಯುಗದಲ್ಲಿ ಇಡೀ ಜಗತ್ತಿಗೆ ಯಾರು ಜಗದ್ಗುರು ಎಂದರೆ ಗೂಗಲ್.ನಿಮ್ಮ ಕೈನಲ್ಲಿ ಇರುವ ಸ್ಮಾರ್ಟ್ ಪೋನ್ ನಿಂದ ಜಗತ್ತಿನ ಎಲ್ಲಾ ವಿಷಯಗಳನ್ನು ತಿಳಿಯಬಹುದೆಂದರು.
ನಮ್ಮ ದೇಶದ ಜನಸಂಖ್ಯೆ140 ಕೋಟಿ.ಮೊಬೈಲ್ ಬಳಸುವವರ ಸಂಖ್ಯೆ130 ಕೋಟಿ.ಆದರೆ ಶೌಚಾಲಯ ಮಾತ್ರ ಕೇವಲ 15 ಕೋಟಿ ಮಾತ್ರ.ನಮ್ಮ ಮನಸ್ಥಿತಿ ಹೇಗೆಂದರೆ ಆರೋಗ್ಯಕರ ಜೀವನಕ್ಕೆ ಬೇಕಾದ ಸವಲತ್ತುಗಳನ್ನು ಮಾಡಿಕೊಳ್ಳುವಲ್ಲಿ ಸೋಲುತ್ತೇವೆ ಸರ್ಕಾರ ಮಾಡ್ಲಿ ಎಂದು ಕೈ ಚೆಲ್ಲುತ್ತೇವೆ.ಆದರೆ ಮೊಬೈಲ್ ಗಾಗಿ ಎಷ್ಚು ಹಣ ಬೇಕಾದರು ವ್ಯಯಿಸುತ್ತೇವೆಂದರು.
ನಮ್ಮ ದೇಶದಲ್ಲಿ ಅವಕಾಶಗಳಿಗೆ ಕೊರತೆ ಇಲ್ಲಾ.ಆದರೆ ನಮ್ಮಲ್ಲಿ ನಾವು ಅದನ್ನು ಬಳಸುವಂತ್ತಹ ಕೆಲಸ ಮಾಡಬೇಕಿದೆ.ಎಲ್ಲಾ ಧರ್ಮಗಳಿಗಿಂತಲೂ ಡಿಜಿಟಲ್ ಧರ್ಮ ಮುಂಚೂಣಿಯಲ್ಲಿದೆ.ಏಕೆಂದರೆ ಇಂದಿನ ಪರಿಸ್ಥಿತಿಯಲ್ಲಿ ಕಂಪ್ಯೂಟರ್ ಜ್ಞಾನವಿಲ್ಲವೆಂದರೆ ಯಾವ ಕ್ಷೇತ್ರದಲ್ಲಿಯೂ ನಾವು ಮುಂದುವರಿಯಲು ಸಾಧ್ಯವಿಲ್ಲ.ಸರ್ಕಾರಗಳು ಜನಸೇವೆಯ ಎಲ್ಲಾ ಸವಲತ್ತುಗಳನ್ನು ಆನ್ ಲೈನ್ ಸೇವೆಯಲ್ಲಿ ಹೊದಗಿಸುತ್ತಿವೆ.ವಿದ್ಯೆ ಜೊತೆಗೆ ಕಂಪ್ಯೂಟರ್ ಜ್ಞಾನವಿಲ್ಲದಿದ್ದರೆ ಹಿಂದುಳಿದು ಬಿಡುತ್ತೇವೆಂದರು.
ಯುವ ಪೀಳಿಗೆ ಸಂಶೋಧನೆಗೆ ಆಧ್ಯತೆ ನೀಡಿ.ಕರ್ನಾಟಕದಲ್ಲಿ 150 ಇಂಜಿನಿಯರಿಂಗ್ ಕಾಲೇಜುಗಳಿವೆ.ಅದರಲ್ಲಿ 100ಕ್ಕೆ 65 ವಿದ್ಯಾರ್ಥಿಗಳು ಕೆಲಸ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ.ಏಕೆಂದರೆ ಅವರಿಗೆ ಪ್ರಾಕ್ಟಿಕಲ್ ಕ್ಲಾಸ್ ಗಳು ನಡೆಯದೇ ಏನೂ ಕಲಿತಿಲ್ಲವಾದ್ದರಿಂದ ಅವರನ್ನು ಕಂಪನಿ ಕೆಲಸಗಳಿಗೆ ನೇಮಕ ಮಾಡಿಕೊಳ್ಳುತ್ತಿಲ್ಲ.ಬೆಂಗಳೂರು ಸಿಟಿಯಲ್ಲಿ 67 ಸಾವಿರ ರಿಜಿಸ್ಟರ್ ಐಟಿ ಕಂಪನಿಗಳಿವೆ.ತಿಂಗಳಿಗೆ 20 ಲಕ್ಷ ಕೋಟಿ ಅವರ ಟರ್ನಒವರ್.ಆದರೆ ಇಲ್ಲಿ ಕನ್ನಡಿಗರಿಗೆ ಕೆಲಸ ಕೊಡಲ್ಲಾ ಎಂಬ ಆರೋಪವಿದೆ.ಏಕೆಂದರೆ ಇಲ್ಲಿನವರು ಕೆಲಸ ಮಾಡಲ್ಲ.ಅವರು ಏನೂ ಕಲಿತಿಲ್ಲಾ ಅದಕ್ಕಾಗಿ ಅವರಿಗೆ ಕೆಲಸ ಕೊಡುತ್ತಿಲ್ಲಾ ಎನ್ನುತ್ತಾರೆಂದರು.
ವಿದ್ಯಾರ್ಥಿಗಳು ವೈಜ್ಞಾನಿಕ ಹಾಗೂ ವೈಚಾರಿಕತೆಯತ್ತ ಮುಖ ಮಾಡಿ ಅದು ನಿಮ್ಮನ್ನು ಯಶಸ್ಸಿನ ತುತ್ತತುದಿಗೆ ಕೊಂಡೊಯ್ಯುತ್ತದೆ. ಸರ್ಕಾರಗಳು ಎಲ್ಲಾ ವಿದ್ಯಾವಂತರಿಗೂ ಕೆಲಸ ಕೊಡಲು ಸಾಧ್ಯವಿಲ್ಲ.ನಮ್ಮ ಪೂರ್ವಿಕರು ಉಳಿಸಿ,ಬೆಳೆಸಿರುವ ಕೃಷಿಗೂ ಕೂಡ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ.ಕೃಷಿ ವಿಷಯದಲ್ಲಿ ಹೆಚ್ಚಿನ ಪರಿಣಿತರಾಗಿ ಎಂದು ಸಲಹೆ ನೀಡಿ, ಕಾಲೇಜಿನಲ್ಲಿ ಹಬ್ಬದ ವಾತಾವರಣ ಸೃಷ್ಠಿಯಾಗಿದೆ ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಮೂಲಕ ಒಂದು ವಿಶಿಷ್ಟ ಕಾರ್ಯಕ್ರಮು ರೂಪಿಸಿದ್ದೀರಿ.ಸಮಾರಂಭ ಅತ್ಯಂತ ಸಾರ್ಥಕವಾಗಿದೆ ಎಂದರು.
ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕರಾದ ಎ.ಬಿ.ನಾಗೇಂದ್ರ ಪ್ರಸಾದ್ ಮಾತನಾಡಿ ನಗರ ಪ್ರದೇಶಗಳಲ್ಲಿನ ಕಾಲೇಜಿನ ಫಲಿತಾಂಶವನ್ವು ಬೀಟ್ ಮಾಡುವ ಶಕ್ತಿ ನಿಮ್ಮಲ್ಲಿ ಮಾತ್ರ ಇದೆ.ವಿದ್ಯೆಯನ್ನು ಕಲಿಯುವ ಸಂದರ್ಭದಲ್ಲಿ ನಮ್ಮ ಏಕಾಗ್ರತೆಯನ್ನು ಅದಕ್ಕೆ ಮಾತ್ರ ಮೀಸಲಿರಿಸಬೇಕು.ಐಎಎಸ್,ಐಪಿಎಸ್ ಪರೀಕ್ಷೆಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.ಕೀಳರಿಮೆ ಬಿಟ್ಟು ಸಾಧನೆಯ ಕಡೆ ಗಮನ ನೀಡಿ.ಪ್ರತಿಯೊಂದು ಹೋಬಳಿ ಹಾಗೂ ತಾಲ್ಲೂಕು ಕೇಂದ್ರದಲ್ಲಿ ಉತ್ತಮ ಗುಣ ಮಟ್ಟದ ಶಿಕ್ಷಣ ದೊರೆಯಬೇಕೆಂಬುದೇ ಸರ್ಕಾರದ ಉದ್ದೇಶವಾಗಿರುವುದರಿಂದ ಸರ್ಕಾರಿ ಶಾಲಾ,ಕಾಲೇಜುಗಳನ್ನು ಹೈಟೆಕ್ ಆಗಿ ನಿರ್ಮಾಣ ಮಾಡುತ್ತಿವೆ ಎಂದರು.

ಸಾಧನೆಗೆ ಯಾವ ಊರು,ಯಾವ ಕಾಲೇಜು,ಯಾವ ಸ್ಥಳ ಎನ್ನುವುದು ಗೌಣ.ಅಲ್ಲಿ ಉತ್ತಮ ಗುಣ ಮಟ್ಟದ ಶಿಕ್ಷಣ ದೊರೆಯುತ್ತಿದೆಯಾ ಇದನ್ನು ಮಾತ್ರ ಗಮನಿಸಬೇಕು.ನಿಮ್ಮ ಊರು ಕಾಶಿಗಿಂತಲೂ ಒಂದು ಗುಲಗಂಜಿಯಷ್ಚು ಪವಿತ್ರವಾದ ಸ್ಥಳವೆಂದು ಬಿಂಬಿತವಾಗಿದೆ. ನಗರ ಪ್ರದೇಶದ ಕಾಲೇಜುಗಳಲ್ಲಿ ಮಾತ್ರ ಉತ್ತಮ ಶಿಕ್ಷಣ ದೊರೆಯುತ್ತದೆ ಎಂಬುದು ನಿಮ್ಮ ತಲೆಯಲ್ಲಿ ಇದ್ದರೆ ಅದನ್ನು ಈಗಲೇ ತೆಗೆದು ಬಿಡಿ.ನಿಮ್ಮಲ್ಲಿಯೂ ಉತ್ತಮ ಪ್ರಾಧ್ಯಾಪಕರಿದ್ದು ಅವರನ್ನು ಉಪಯೋಗಿಸಿಕೊಂಡು ಏಕಾಗ್ರತೆಯಿಂದ ಶಿಕ್ಷಣ ಕಲಿತು ಸಾಧಕರಾಗಿ ಹೊರಹೊಮ್ಮಿ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕದ ಉತ್ತಮ ಸ್ವಯಂ ಸೇವಕ ಪ್ರಶಸ್ತಿ ಪಡೆದಿರುವ ಬಿಎ ಎರಡನೇ ವರ್ಷದ ವಿದ್ಯಾರ್ಥಿ ಮಹದೇವಸ್ವಾಮಿರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಗುಂಜಾನರಸಿಂಹ ದೇವಾಲಯದಿಂದ ಗಣ್ಯರು ಎತ್ತಿನ ಗಾಡಿಗಳಲ್ಲಿ ಬರುವಾಗ ಮುಂಭಾಗದಲ್ಲಿ ಜಾನಪದ ಕಲೆಗಳಾದ ಡೊಳ್ಳು ಕುಣಿತ,ವೀರಗಾಸೆ ನೃತ್ಯ ಹಾಗೂ ವಿದ್ಯಾರ್ಥಿನಿಯರು ಕಳಸಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿ ಕಾಲೇಜು ವೇದಿಕೆಗೆ ಆಗಮಿಸಿ ಹಬ್ಬದ ವಾತಾವರಣವನ್ನು ಸೃಷ್ಟಿಸಿತ್ತು.ವೇದಿಕೆಯಲ್ಲಿ ಜಾನಪದ ಕಲಾವಿದರಾದ ಕೊಳತ್ತೂರು ಮಹದೇವಸ್ವಾಮಿರವರು ಹಾಡುಗಳನ್ನು ಹಾಡುವ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ಕ್ರೀಡಾ ಸಮಿತಿ ಸಂಚಾಲಕರು ಹಾಗೂ ಪ್ರಾಂಶುಪಾಲರಾದ ಡಾ.ಹೆಚ್.ವಿ.ಉದಯಕುಮಾರ್, ರಾಘವೇಂದ್ರ ಪ್ರಸಾದ್, ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಪ್ರೊ.ಜಿ.ಎಸ್.ದೇವರಾಜೇಗೌಡ,ಡಾ.ಪುಟ್ಟಸ್ವಾಮಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಚಾಲಕರಾದ ಡಾ.ಮುತ್ತಮ್ಮ,ಪ್ರೊ.ಮಹೇಶ್,ಐಕ್ಯೂಎಸಿ ಸಂಚಾಲಕರಾದ ಡಾ.ಅಮಿತ್,ಡಾ.ರೇಷ್ಮಚೆಂಗಪ್ಪ,ರಾಷ್ಟ್ರೀಯ ಯೋಜನೆ ಕಾರ್ಯಕ್ರಮಾಧಿಕಾರಿಗಳಾದ ಡಾ.ಕೆಂಪರಾಜು,ಡಾ.ಕವಿತಾ ಸೇರಿದಂತೆ ಬೋಧಕರು,ಬೋಧಕೇತರರಪ,ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರುಗಳು,ಹಿರಿಯ ವಿದ್ಯಾರ್ಥಿಗಳು ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.
– ಎಂ.ನಾಗೇಂದ್ರ ಕುಮಾರ್
