ಟಿ.ನರಸೀಪುರ : ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವರುಣಾ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ತೋಟದಪ್ಪ ಬಸವರಾಜು ಎಚ್ಚರಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅಧಿಕಾರಕ್ಕಾಗಿ ಹೊರಗಿನಿಂದ ಬಂದ ಅವರನ್ನು ರಾಜ್ಯಾಧ್ಯಕ್ಷನಾಗಿ ಮಾಡಿದರೆ ಬಿಜೆಪಿಗಾಗಿ ತಮ್ಮ ತನು ಮನ ಧನ ಸಮಯವನ್ನು ಕೊಟ್ಟು ದುಡಿದಂತಹ ಅಸಂಖ್ಯಾತ ಕಾರ್ಯಕರ್ತರಿಗೆ ಅಪಮಾನ ಮಾಡಿದಂತಾಗುತ್ತದೆ. ಈಗಾಗಲೇ ಕೇಂದ್ರ ಸಚಿವರಾಗಿದ್ದಾರೆ ಇವರನ್ನು ಕೇಂದ್ರದ ಗೃಹ ಮಂತ್ರಿ ಅಥವಾ ಪ್ರಧಾನಿಯನ್ನಾಗಿ ಮಾಡಿ ಆದರೆ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೆ ಅಸಂಖ್ಯಾತ ಕಾರ್ಯಕರ್ತರು ತಿರುಗಿ ಬೀಳುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ವರುಣ ವಿಧಾನಸಭಾ ಕ್ಷೇತ್ರದಲ್ಲಿ ಸೋತ ನಂತರ ತುಂಬಿದ ಸಭೆಯಲ್ಲಿ ಕ್ಷೇತ್ರದ ಕಾರ್ಯಕರ್ತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅಪಮಾನ ಮಾಡಿರುತ್ತಾರೆ ಒಂದೊಂದು ಮತಕ್ಕೂ 2 ಸಾವಿರ ರೂಪಾಯಿ ನೀಡಿ ಕ್ಷೇತ್ರದ ಮತದಾರರನ್ನು ಭ್ರಷ್ಟಾಚಾರಿಗಳನ್ನಾಗಿ ಮಾಡಿ ಹೋಗಿರುತ್ತಾರೆ ತಮ್ಮದೇ ಸ್ವಯಂಕೃತ ಅಪರಾಧದಿಂದಾಗಿ ಸೋಲನ್ನು ಅನುಭವಿಸಿರುತ್ತಾರೆ ಯಡಿಯೂರಪ್ಪ ವಿಜಯೇಂದ್ರರವರ ಬಗ್ಗೆ ಕೇವಲವಾಗಿ ಮಾತನಾಡಿದ್ದೇ ಇವರ ಸೋಲಿಗೆ ಕಾರಣವಾಗಿರುತ್ತದೆ ಎಂದು ಕಿಡಿ ಕಾರಿದರು.
ಕೇಂದ್ರ ವರಿಷ್ಠರಿಗೆ ಅಗತ್ಯವಿದ್ದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹರವರ ನೇತೃತ್ವದಲ್ಲಿ ಮೈಸೂರು ಲೋಕಸಭಾ ವ್ಯಾಪ್ತಿಯ ಹುಣಸೂರು ಪಿರಿಯಾಪಟ್ಟಣ ಚಾಮುಂಡೇಶ್ವರಿ ಕೆ ಆರ್ ನಗರ ಈ ನಾಲ್ಕು ಕ್ಷೇತ್ರಗಳಲ್ಲಿ ಯಾವುದಾದರೂ ಎರಡು ಕ್ಷೇತ್ರಗಳಲ್ಲಿ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬಂದು ರಾಜ್ಯದ ಮುಖ್ಯಮಂತ್ರಿ ಯನ್ನಾಗಿ ಮಾಡಲಿ ನಮ್ಮ ಅಭ್ಯಂತರವಿಲ್ಲ ಎಂದು ಕುಟುಕಿದರು.

ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯ ನಂತರ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳು ನಿಷ್ಠಾವಂತ ಕಾರ್ಯಕರ್ತರಿಗೆ ಮುಜುಗರ ಹಾಗೂ ನೋವನ್ನುಂಟು ಮಾಡುತ್ತಿವೆ ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಾಗಲೇ ರಾಜ್ಯ ರಾಜಕಾರಣದ ವಿಷಯದಲ್ಲಿ ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರ ವಿರೋಧಿ ರಾಜಕಾರಣ ಸತ್ತು ಹೋಯಿತು ಈ ಮಾನದಂಡವನ್ನು ಇಟ್ಟುಕೊಂಡು ಹೋರಾಟ ಮಾಡುವ ನಾಯಕರುಗಳು ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತೆಂದು ಕುಟುಕಿದರು.
ಪಕ್ಷ ಉದಯವಾದಾಗಿನಿಂದ ಪಕ್ಷಕ್ಕಾಗಿ ದುಡಿಯುತ್ತಿರುವ ಯಾರನ್ನಾದರೂ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಯಡಿಯೂರಪ್ಪನವರ ಜಾತಿ ಬಗ್ಗೆ ಮಾತನಾಡಿ ಬಸನಗೌಡ ಪಾಟೀಲ್ ಯತ್ನಾಳ್ರವರು ಪಕ್ಷದಿಂದ ಉಚ್ಚಾಟನೆಗೊಂಡರು. ಹಿಂದೂ ಹಿಂದುತ್ವದ ಬಗ್ಗೆ ಹೋರಾಟ ಮಾಡುವ ಯತ್ನಾಳರ ಬಾಯಲ್ಲಿ ಯಡಿಯೂರಪ್ಪನವರ ಜಾತಿ ಬಗ್ಗೆ ಮಾತನಾಡಿರುವುದು ಅಕ್ಷಮ್ಯ ಹಾಗೂ ಖಂಡನೀಯ ಅವರು ವೀರಶೈವ ಲಿಂಗಾಯತರು ಹಾಗೂ ಹಿಂದೂ ಬಾಂಧವರ ಕ್ಷಮೆಯಾಚಿಸಿದಲ್ಲಿ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡು ರಾಜ್ಯದ್ಯಕ್ಷರನ್ನಾಗಿ ಮಾಡಬಹುದು ಯಡಿಯೂರಪ್ಪನವರು ಕೆಜೆಪಿ ಪಕ್ಷ ಕಟ್ಟಿ ಬಿಜೆಪಿಯನ್ನು ಹಾಳು ಮಾಡುವುದಲ್ಲದೆ ತಾವೂ ಅವನತಿ ಹೊಂದಿದ್ದರು ಅವರನ್ನು ಪಕ್ಷ ಮತ್ತೆ ಕರೆತಂದು ರಾಜ್ಯಾಧ್ಯಕ್ಷರನ್ನಾಗಿ ಹಾಗೂ ಮುಖ್ಯಮಂತ್ರಿಯನ್ನಾಗಿಯೂ ಮಾಡಲಾಯಿತೆಂದು ಆಕ್ಷೇಪ ವ್ಯಕ್ತಪಡಿಸಿದರು.
ಈಶ್ವರಪ್ಪನವರು ಈಗಲೂ ರಾಜ್ಯ ಸುತ್ತುವ ಶಕ್ತಿ ಸಾಮರ್ಥ್ಯವನ್ನು ಹೊಂದಿರುತ್ತಾರೆ ಅವರನ್ನೂ ಕರೆತಂದು ರಾಜ್ಯಾಧ್ಯಕ್ಷರನ್ನಾಗಿ ಮಾಡಿದರು ಸ್ವಾಗತ ವಾಗಿರುತ್ತದೆ ಆದರೆ ಕೆಲ ಕೇಂದ್ರ ವರಿಷ್ಠರು ಹೊರಗಿನಿಂದ ಬಂದವರನ್ನು ರಾಜ್ಯಾಧ್ಯಕ್ಷರನ್ನು ಮಾಡಲು ಹೊರಟಿರುವ ವರ್ತಮಾನಗಳಿದ್ದು ಇದು ವಿಶ್ವದಲ್ಲೇ ನಂಬರ್ ಒನ್ ಪಕ್ಷವಾಗಿರುವ ಬಿಜೆಪಿ ಕಾರ್ಯಕರ್ತರಿಗೆ ಮಾಡುವ ಅಪಮಾನವಾಗಿದೆ ಇದು ಖಂಡನೀಯ ಕೇಂದ್ರ ಸಚಿವರಾದ ವಿ.ಸೋಮಣ್ಣನವರು ರಾಜ್ಯ ಕಂಡ ಜನಪ್ರಿಯ ನಾಯಕರಿರಬಹುದು ಆದರೆ ಭಾರತೀಯ ಜನತಾ ಪಕ್ಷಕ್ಕೂ ಇವರಿಗೂ ಏನು ಸಂಬಂಧ ಇವರು ಸರ್ವ ಪಕ್ಷ ನಾಯಕರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವವರು ಎಂದು ವ್ಯಂಗ್ಯವಾಡಿದರು.
ಮುಂದುವರಿದು ಮಾತನಾಡಿ ಪಕ್ಷದಲ್ಲಿ ಯಾರೇ ಅಧ್ಯಕ್ಷರಾದರೂ ಮೂರು ವರ್ಷಗಳ ಅವಧಿಗೆ ಜವಾಬ್ದಾರಿ ಇರುತ್ತದೆ ವಿಜೇಂದ್ರರ ಅವಧಿ ಇನ್ನೂ ಮುಗಿದಿಲ್ಲ ಅವಧಿ ಮುಗಿಯೋವರೆಗೆ ಅವರನ್ನು ಬದಲಾಯಿಸುವುದು ಸಾದು ಅಲ್ಲ ಅವಧಿ ಮುಗಿದ ನಂತರ ಬದಲಾವಣೆ ಮಾಡುವುದಿದ್ದಲ್ಲಿ ರಾಜ್ಯದ ಮತದಾರರ ದೃಷ್ಟಿಯಿಂದ ಅಧಿಕಾರವನ್ನು ಪಡೆಯುವ ದೃಷ್ಟಿಯಿಂದ ಶ್ರೀರಾಮುಲು ರವರನ್ನು ಅಧ್ಯಕ್ಷರನ್ನಾಗಿ ಮಾಡಿ ಅಥವಾ ಕಾರ್ಯಕರ್ತರ ಪಕ್ಷವಾಗಿ ಅಧಿಕಾರಕ್ಕೆ ತರಲು ಎಲ್ಲರೂ ಒಗ್ಗಟ್ಟಿನಿಂದ ಯಾವುದೇ ಅಸಮಾಧಾನವಿಲ್ಲದೆ ಪಕ್ಷವನ್ನು ಮುನ್ನಡೆಸಿಕೊಂಡು ಹೋಗಲು ತೇಜಸ್ವಿನಿ ಅನಂತ್ ಕುಮಾರ್ ರವರನ್ನು ಅಧ್ಯಕ್ಷರನ್ನಾಗಿ ಮಾಡಿ ಖಂಡಿತ ಪಕ್ಷಕ್ಕೆ ಒಳ್ಳೆಯದಾಗುತ್ತದೆ ಹಾಗೂ ಪಕ್ಷ ಅಧಿಕಾರಕ್ಕೆ ಬರುತ್ತದೆ ಇಲ್ಲವಾದಲ್ಲಿ ಉತ್ತಮವಾಗಿ ಸಂಘಟನೆ ಮಾಡಿಕೊಂಡು ಹೋಗುತ್ತಿರುವ ವಿಜಯೇಂದ್ರ ಅವರನ್ನೇ ಮುಂದಿನ ಅವಧಿಗೂ ಅಧ್ಯಕ್ಷರನ್ನಾಗಿ ಮಾಡಿ ಎಂದು ಬಿಜೆಪಿ ಹೈಕಮಾಂಡ್ ನನ್ನು ಆಗ್ರಹಿಸಿದರು.
– ಎಂ.ನಾಗೇಂದ್ರ ಕುಮಾರ್
