ಟಿ.ನರಸೀಪುರ : ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಸಂಬಂಧ ತಾಲ್ಲೂಕು ಆಡಳಿತ ಕರೆದಿದ್ದ ಪೂರ್ವಭಾವಿ ಸಭೆಗೆ ತಹಶಿಲ್ದಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಗೈರಾಗಿದ್ದು, ಅಸಮಾಧಾನಗೊಂಡ ಸಮುದಾಯದ ಮುಖಂಡರು,.ಸರಳವಾಗಿ ಆಚರಿಸುವುದಾದರೆ ಅಧಿಕಾರಿಗಳೇ ಮಾಡಿಕೊಳ್ಳಲಿ ಎಂದು ಸೇವಾಶ್ರಯ ಫೌಂಡೇಷನ್ ಸಂಸ್ಥಾಪಕ ಮಣಿಕಂಠರಾಜ್ ಗೌಡ ಸಭೆಯಿಂದ ಹೊರ ನಡೆದರು.
ಪಟ್ಟಣದ ಗುರುಭವನದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ತಹಶಿಲ್ದಾರ್ ಸೇರಿದಂತೆ ಹಲವಾರು ಇಲಾಖೆ ಅಧಿಕಾರಿಗಳು ಗೈರು ಹಾಜರಾಗಿ ಕೆಂಪೇಗೌಡರಿಗೆ ಅವಮಾನವೆಸಗಿದ್ದಾರೆಂದು ಆರೋಪಿಸಿದ ಮುಖಂಡರು ಕೆಂಪೇಗೌಡರ ಜಯಂತಿ ಮಾಡುವಾಗಲೆಲ್ಲಾ ಸರಳವಾಗೇ ಆಚರಿಸಿ ನಮ್ಮ ಸಮುದಾಯವನ್ನು ಕಡೆಗಣಿಸುತ್ತಿದ್ದಾರೆಂದು ಗಂಭೀರವಾಗಿ ಆರೋಪಿಸಿದರು.
ತಾಲ್ಲೂಕಿನಲ್ಲಿ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರುಗಳಾದ ಮಾಜಿ ಶಾಸಕರಾದ ಕೃಷ್ಣಪ್ಪ, ಕೆ.ವಜ್ರೇಗೌಡ,ಶಂಕರೇಗೌಡ,ಮೈಮುಲ್ ಅಧ್ಯಕ್ಷರಾದ ಚೆಲುವರಾಜ್ ಸೇರಿದಂತೆ ಹಲವಾರು ಪ್ರಮುಖ ನಾಯಕರಿದ್ದು ಅವರ್ಯಾರಿಗೂ ತಾಲ್ಲೂಕು ಆಡಳಿತ ಸಭೆಯ ಬಗ್ಗೆ ಮಾಹಿತಿ ನೀಡದೆ ತರಾತುರಿಯಲ್ಲಿ ಸಭೆ ಮಾಡಿ ಜಯಂತಿ ಜಯಂತಿ ದಿನದಂದು ಭಾವಚಿತ್ರಕ್ಕೆ ಹೂವಿನಹಾರ ಹಾಕಿ,ಗಂಧದಕಡ್ಡಿ ಧೂಪ ಹಾಕಿ ಕಾರ್ಯಕ್ರಮ ಮುಗಿಸುವ ಇರಾದೆ ತಾಲ್ಲೂಕು ಆಡಳಿತದ್ದಾಗಿದೆ ಇದಕ್ಕೆ ನಮ್ಮ ಪ್ರಭಲ ವಿರೋಧವಿದೆ ಎಂದು ಯುವ ಮುಖಂಡರುಗಳಾದ ಲಕ್ಷಣ,ಮಣಿಕಂಠ,ಸುನಿಲ್ ರವರು ಆಕ್ಷೇಪ ವ್ಯಕ್ತಪಡಿಸಿದರು.
ಗ್ರೇಡ್ 2 ತಹಶಿಲ್ದಾರ್ ರಾಜಾಕಾಂತ್ ರವರಿಗೆ ಮಣಿಕಂಠರಾಜ್ ಗೌಡರವರು ಪದೇ,ಪದೇ ನಮ್ಮ ಸಮುದಾಯದ ನಾಯಕರ ಜಯಂತಿಯನ್ನು ಅತ್ಯಂತ ಸರಳವಾಗೇ ಆಚರಿಸುತ್ತಾ ಬರುತ್ತಿದ್ದೀರಿ ಏಕೆಂದು ಖಾರವಾಗೇ ಪ್ರಶ್ನಿಸಿದರು.ಆಗ ಸಭೆಯಲ್ಲಿ ಹಾಜರಿದ್ದ ದಲಿತ ಸಮಾಜದ ಮುಖಂಡರಾದ ಕರೋಹಟ್ಟಿ ಪ್ರಭುಸ್ವಾಮಿ ನಾಡಪ್ರಭು ಕೆಂಪೇಗೌಡರು ಇಡೀ ರಾಜ್ಯಕ್ಕೆ ಸೇರಿದವರು.ಅವರು ಒಂದು ಸಮುದಾಯದ ನಾಯಕರಲ್ಲ ಎಂದರು.ಎರೆಡೂ ಕಡೆ ಪರಸ್ಪರ ಮಾತುಗಳು ನಡೆದಾಗ ದಲಿತ ಸಮುದಾಯದ ಮುಖಂಡರುಗಳಾದ ತಾಲ್ಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ ಬಿ.ಮರಯ್ಯ ಹಾಗೂ ಕರೋಹಟ್ಟಿ ಪ್ರಭುಸ್ವಾಮಿ ಸಭೆಯಿಂದ ಹೊರ ನಡೆದರು.
ಅಂತಿಮವಾಗಿ ಸರಳವಾಗಿ ಜಯಂತಿಯನ್ನು ಆಚರಿಸಲು ಒಕ್ಕಲಿಗ ಸಮುದಾಯದ ತಾಲ್ಲೂಕು ಅಧ್ಯಕ್ಷರಾದ ಪಿ.ಸ್ವಾಮಿನಾಥ್ ಗೌಡ ಹಾಗೂ ಪುರಸಭೆ ನಾಮನಿರ್ದೇಶಿತ ಸದಸ್ಯ ಚೇತನ್ ಸಮ್ಮತಿ ಸೂಚಿಸುವ ಮೂಲಕ ಜಯಂತಿ ಆಚರಣೆಗೆ ಸಹಕರಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಡಾ.ಮನ್ಸೂರ್ ಅಲಿ,ಕಿರಗಸೂರು ಶಂಕರ್,ಪ್ರಸಾದ್ ನಾಯಕ್, ಪುರಸಭೆ ಮುಖ್ಯಾಧಿಕಾರಿ ವಸಂತಕುಮಾರಿ,ಪೊಲೀಸ್ ಇನ್ಸ್ ಪೆಕ್ಟರ್ ಧನಂಜಯ್,ಶಿವರಾಜ್,ರಾಜೇಶ್,ಶ್ವೇತ ಸೇರಿದಂತೆ ಬೆರಳೆಣಿಕೆಯಷ್ಟು ತಾಲ್ಲೂಕು ಅಧಿಕಾರಿಗಳು ಹಾಜರಿದ್ದರು.
- ಎಂ.ನಾಗೇಂದ್ರ ಕುಮಾರ್

[…] […]