ಟಿ.ನರಸೀಪುರ : ತಾಲ್ಲೂಕಿನ ಮೂಗೂರು ಗ್ರಾಮದ ಶ್ರೀ ದೇಶೇಶ್ವರ ಸ್ವಾಮಿ ಹಾಗೂ ಶ್ರೀ ಪಾರ್ವತಿ ಅಮ್ಮ ಗಿರಿಜಾ ಕಲ್ಯಾಣ ಮಹೋತ್ಸವದ ಅಂಗವಾಗಿ ನಡೆದ ಶ್ರೀ ದೇಶೇಶ್ವರ ಸ್ವಾಮಿ ಹಾಗೂ ಶ್ರೀ ಪಾರ್ವತಿ ಅಮ್ಮ ನವರ ಮದ್ವಿವ್ಯ ಬ್ರಹ್ಮ ರಥೋತ್ಸವ ಗುರುವಾರ ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.
ದೇವೇಶ ಗಿರಿ ಎಂದು ಪ್ರಸಿದ್ಧಿ ಪಡೆದ ಇತಿಹಾಸ ಹಿನ್ನೆಲೆಯುಳ್ಳ ದೇಗುಲದಲ್ಲಿ ರಥೋತ್ಸವದ ನಿಮಿತ್ತ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ನಡೆದವು ವಿವಿಧ ಬಗೆಯ ಹೂ ತಳಿರು ತೋರಣಗಳಿಂದ ಸಿಂಗರಿಗೊಂಡ ರಥಕ್ಕೆ ಶ್ರೀ ದೇಶೇಶ್ವರ ಸ್ವಾಮಿ ಹಾಗೂ ಶ್ರೀ ಪಾರ್ವತಿ ಅಮ್ಮ ನವರ ಉತ್ಸವ ಮೂರ್ತಿಯನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿದ ಬಳಿಕ ಅಮ್ಮ ನವರನ್ನು ರಥದಲ್ಲಿ ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ರಥ ಸಂಚರಿಸಿತು ದಾರಿಯುದ್ದಕ್ಕೂ ಭಕ್ತರು ಪೂಜೆ ಸಲ್ಲಿಸಿ ಹಣ್ಣು ಜವನ ಎಸೆದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ನಮಿಸಿದರು ಈ ವೇಳೆ ಅಲ್ಲಲ್ಲಿ ಭಕ್ತರು ಸಿಹಿ ಹಂಚಿದರು. ಈ ವೇಳೆ ಗ್ರಾಮದ ಮುಖಂಡರು. ಗ್ರಾಮಸ್ಥರು, ಅರ್ಚಕ ಸಮೂಹ ಹಾಜರಿದ್ದರು
ಗಿರಿಜಾ ಕಲ್ಯಾಣ ಮಹೋತ್ಸವ:

ಬ್ರಹ್ಮ ರಥೋತ್ಸವದ ಅಂಗವಾಗಿ ಅಮ್ಮ ನವರಿಗೆ ಮಂಗಳ ಸ್ನಾನ, ಕಂಕಣಧಾರಣೆಯೊಂದಿಗೆ ಬುಧವಾರ ರಾತ್ರಿ ದೇವಾಲಯದ ಆವರಣದಲ್ಲಿ ಶ್ರೀ ದೇಶೇಶ್ವರ ಸ್ವಾಮಿ ಹಾಗೂ ಶ್ರೀ ಪಾರ್ವತಿ ಅಮ್ಮ ನವರ ಗಿರಿಜಾ ಕಲ್ಯಾಣ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ಅದ್ಧೂರಿಯಾಗಿ ನೆರವೇರಿತು. ಗ್ರಾಮದ ಮುತ್ತೈದೆ ಮಹಿಳೆಯರ ಸಾಂಪ್ರದಾಯಿಕ ಶ್ರೀ ಪಾರ್ವತಿ ದೇವಿಗೆ ಪೂಜೆ ಸಲ್ಲಿಸಿ ಅಮ್ಮ ನವರ ಉತ್ಸವ ಮೂರ್ತಿಯನ್ನು ಕಲ್ಯಾಣ ಪೀಠಕ್ಕೆ ಕರೆತಂದರು ನಂತರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಾಂಗಲ್ಯ ಧಾರಣೆ ಮಾಡುವ ಮೂಲಕ ನೆರೆದಿದ್ದ ಭಕ್ತರು ಗಿರಿಜಾ ಕಲ್ಯಾಣೋತ್ಸವವನ್ನು ಕಣ್ತುಂಬಿಕೊಂಡರು. ಬಳಿಕ ಲೋಕಕಲ್ಯಾಣಕ್ಕಾಗಿ ಯಾಗ ಶಾಲೆಯಲ್ಲಿ ಗಣಪತಿ ಹೋಮ ಮಾಡಲಾಯಿತು.
–-ಎಂ. ನಾಗೇಂದ್ರ ಕುಮಾರ್
