ಟಿ.ನರಸೀಪುರ : ಗ್ರಾಮೀಣ ಪ್ರದೇಶದ ಮಕ್ಕಳಿಗೆ ದೊರಕುವ ಶಿಕ್ಷಣ ಹಳ್ಳಿ ಮಕ್ಕಳಿಗೂ ಸಿಗುವಂತಾಗಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಖಜಾಂಚಿ ಎಂ.ಬಿ.ಚೇತನ್ ತಿಳಿದರು.
ತಾಲೂಕಿನ ಬನ್ನೂರಿನ ಎಪಿಎಂಸಿ ಆವರಣದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗು ಬನ್ನೂರು ಗ್ರಾಮಾಂತರ ಘಟಕದ ವತಿಯಿಂದ ಆಯೋಜಿಸಲಾಗಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಪಟ್ಟಣ ಪ್ರದೇಶದ ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ಶುಲ್ಕ ಭರಿಸುವ ಸಾಮರ್ಥ ಹೊಂದಿರುತ್ತಾರೆ,ಹಾಗಾಗಿ ಅವರು ಐಎಎಸ್,ಐಪಿಎಸ್ ಹಾಗು ಕೆಎಎಸ್ ಸೇರಿದಂತೆ ಉನ್ನತ ಶಿಕ್ಷಣ ವನ್ನು ಪಡೆದುಕೊಳ್ಳುತ್ತಿದ್ದಾರೆ.ಆದರೆ ಗ್ರಾಮೀಣ ಪ್ರದೇಶದಲ್ಲಿ ಪ್ರತಿಭಾವಂತ ಮಕ್ಕಳಿದ್ದರೂ ಉನ್ನತ ಶಿಕ್ಷಣಕ್ಕೆ ಶುಲ್ಕ ಪಾವತಿಸಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಗ್ರಾಮಾಂತರ ಪ್ರದೇಶದ ಮಕ್ಕಳಲ್ಲಿನ ಪ್ರತಿಭೆ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಉನ್ನತ ಶಿಕ್ಷಣ ಹಳ್ಳಿ ಮಕ್ಕಳಿಗೂ ದೊರಕಬೇಕೆಂಬ ಆಶಯ ನನ್ನದಾಗಿದ್ದು,ತಾಲೂಕು ಮಟ್ಟದಲ್ಲಿ ಐಎಎಸ್, ಕೆಎಎಸ್ ಹಾಗು ಐಪಿಎಸ್ ನಂತಹ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಕೋಚಿಂಗ್ ಸೆಂಟರ್ ಗಳನ್ನು ತಾಲೂಕು ಮಟ್ಟದಲ್ಲಿ ಆರಂಭಿಸಬೇಕು.ಆಮೂಲಕ ಗ್ರಾಮೀಣ ಪ್ರದೇಶದ ರೈತರು ಹಾಗು ಬಡ ಜನರ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಿಕೊಡಲು ಸರ್ಕಾರ ಮುಂದಾಗಬೇಕು.ಇದಕ್ಕಾಗಿ ನಾವೆಲ್ಲರೂ ಸಿಕ್ಷಣ ಸಚಿವರಿಗೆ ಮನವಿ ಸಲ್ಲಿಸುವ ಕೆಲಸ ಮಾಡಬೇಕೆಂದರು.

ಮುಂದುವರೆದು ಮಾತನಾಡಿ ಕೆಲಸದಲ್ಲಿ ಶ್ರದ್ಧೆ,ನಿಷ್ಠೆ ಮತ್ತು ನೈತಿಕ ಮೌಲ್ಯ ಇರಬೇಕು. ಮರಳಿ ಯತ್ನವ ಮಾಡು ಎಂಬ ಮಾತಿನಂತೆ ನಿರಂತರ ಪ್ರಯತ್ನದಿಂದ ಮಾತ್ರ ಯಶಸ್ಸು ಸಿಗಬಲ್ಲದು. ಅದರ ಜೊತೆಗೆ ಜೀವನದ ಸವಾಲನ್ನು ಎದುರಿಸುವ ಶಕ್ತಿ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಸಾಧನೆಯ ಮೆಟ್ಟಿಲನ್ನು ಏರುವ ತುಡಿತ ನಮ್ಮಲ್ಲಿರಬೇಕು. ನಮ್ಮ ಸಾಧನೆ ಮುಂದಿನ ಜನಾಂಗಕ್ಕೆ ಪ್ರೇರಣೆಯಾಗಬೇಕೆಂದರು.
ಆರ್ಥಿಕ ತಜ್ಞ ಟಿ.ವಿ.ಗೋಪಿನಾಥ್ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಕ್ಷೇತ್ರ ಅತ್ಯಂತ ಮಹತ್ವತೆಯಿಂದ ಕೂಡಿದೆ. ಮಕ್ಕಳ ಶೈಕ್ಷಣಿಕ ಚಟುವಟಿಕೆಯಲ್ಲಿ ಪೋಷಕರ ಪಾತ್ರ ಮಹತ್ತರವಾಗಿದೆ. ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳು ಮಕ್ಕಳಲ್ಲಿ ಬೆಳೆಯಬೇಕಾದರೆ ಮನೆಯ ಪರಿಸರ ಹಾಗೂ ಶಾಲೆಯ ಪರಿಸರ ಎರಡೂ ಅತಿ ಮುಖ್ಯ.ಯಾವುದೇ ಶಾಲೆ ಅಥವಾ ಕಾಲೇಜಿನಲ್ಲಿ ಪಠ್ಯದಷ್ಟೇ ಇತರೆ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದಲ್ಲಿ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದರು.
ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಮಾತನಾಡಿ ಪ್ರಸಕ್ತ ಸನ್ನಿವೇಶ ದಲ್ಲಿ ರಾಜಕಾರಣಿಗಳು ಕೊಡುವ ಹಣದ ಆಮಿಷಕ್ಕೆ ಬಲಿಯಾಗಿ ನಮ್ಮ ರೈತರು,ರೈತರ ಮಕ್ಕಳು ಮಾಡುವ ಕೆಲಸವನ್ನು ಬಿಟ್ಟು ಅವರ ಸನ್ಮಾನ,ಹುಟ್ಟುಹಬ್ಬ ಕಾರ್ಯಕ್ರಮಗಳನ್ನು ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ.ಅದು ಆಗಬಾರದು ಉತ್ತಮ ಸಾಧನೆ ಮಾಡಿದ ಯಾವುದೇ ಜಾತಿ ಧರ್ಮದ ವ್ಯಕ್ತಿಗೆ ಸನ್ಮಾನಿಸುವ ಕಾರ್ಯಕ್ರಮಗಳಾಗಬೇಕು.

ನಮ್ಮ ಟಿ.ವಿ.ಗೋಪಿನಾಥ್ ರವರ ಮಗಳು ಗೀತಾ ಗೋಪಿನಾಥ್ ರವರು ವಿಶ್ವದ ಆರ್ಥಿಕ ತಜ್ಞರಾಗಿ ಸಾಧನೆ ಮಾಡಿದ್ದಾರೆ.ಅವರಂತೆಯೇ ನಮ್ಮ ರೈತರ ಮಕ್ಕಳು ಸಾಧನೆ ಮಾಡುವಂತಾಗಬೇಕು.ಸಾಧನೆ ಯಾರೊಬ್ಬರ ಸ್ವತ್ತು ಅಲ್ಲ.ಕಠಿಣ ಪರಿಶ್ರಮ ಯಾವುದೇ ಸಾಧನೆ ಮಾಡಲು ಪ್ರೇರೇಪಣೆ ನೀಡುತ್ತದೆ.ಆದರೆ ಮಕ್ಕಳಲ್ಲಿ ಸಾಧನೆ ಮಾಡುವ ಮನಸ್ಸಿನೊಂದಿಗೆ ಛಲ ಇರಬೇಕು.ಆಗ ಮಾತ್ರವೇ ಸಾಧನೆ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಬನ್ನೂರಿನ ಸಂತೇ ಮಾಳದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪಿಯುಸಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಅರಣ್ಯ ಇಲಾಖೆಯ ವತಿಯಿಂದ ಸಾರ್ವಜನಿಕರಿಗೆ ಸಸಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಕಲಾ ಕೂಟದ ಎಂ.ಚಂದ್ರಶೇಖರ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗೂಳೇಗೌಡ,ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರವೀಶ್,ಸಾಮಾಜಿಕ ಅರಣ್ಯ ವಲಯದ ಗಸ್ತು ಅರಣ್ಯಪಾಲಕ ಚನ್ನಬಸವಯ್ಯ, ಅತ್ತಹಳ್ಳಿ ಲಿಂಗಣ್ಣ, ಅರುಣ್ ಕುಮಾರ್, ಕೇತುಪುರ ಗಿರಿರಾಜ್, ಬನ್ನೂರು ಸೂರಿ, ಕಿರಗಸೂರು ಶಂಕರ್,ಹೆಗ್ಗೂರು ರಂಗರಾಜು,ಕುಂಚನಹಳ್ಳಿ ಕುಳ್ಳೇಗೌಡ, ಮೆಡಿಕಲ್ ಮಹೇಶ್, ವೈನ್ ನಟೇಶ್, ಹನುಮನಾಳು ಲೋಕೇಶ್, ಕೊಡಗಹಳ್ಳಿ ಎಲ್ಐಸಿ ರಾಜಣ್ಣ, ಟೈಲರ್ ಸ್ವಾಮಿ,, ಎ.ಪಿ ನವೀನ್, ಚಾಮನಹಳ್ಳಿ ನಿಂಗೇಗೌಡ,ಕರಿಯಪ್ಪ, ಎ.ಎನ್. ಮಹೇಶ್, ರಂಗಸಮುದ್ರ ರೇವಣ್ಣ, ಯಾಚೇನಹಳ್ಳಿ ರಾಮಸ್ವಾಮಿ, ಬರಡನಪುರ ನಾಗರಾಜ್, ಉಡಿಗಾಲ ರೇವಣ್ಣ, ಮೂಡಲಪುರ ಶಿವಮೂರ್ತಿ, ಕುರುಬೂರು ಪ್ರದೀಪ್, ಹೆಗ್ಗೂರು ರಂಗರಾಜು, ಕೋಟೇ ರಾಜೇಶ್, ಅತ್ತಹಳ್ಳಿ ಮೈಕ್ ಬಾಬು, ರಾಜೇಶ ಸೇರಿದಂತೆ ವಿದ್ಯಾರ್ಥಿಗಳು ಪೋಷಕರು ಹಾಗೂ ರೈತರು ಹಾಜರಿದ್ದರು.
ವರದಿ- ಎಂ.ನಾಗೇಂದ್ರ ಕುಮಾರ್
