ಟಿ.ನರಸೀಪುರ: ಸರ್ಕಾರವು ರೈತರಿಗೆ ನೈಜ ಯೋಜನೆಗಳ ಅನುಷ್ಠಾನದ ಮೂಲಕ ರೈತರಿಗೆ ಆರ್ಥಿಕ ಬಲ ತುಂಬಬೇಕೆಂದು ಕನ್ನಡಪರ ಹೋರಾಟಗಾರ ಎಸ್ ಕೆ ರಾಜೂಗೌಡ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ತಾಲ್ಲೂಕಿನ ಬನ್ನೂರು ಪಟ್ಟಣದಲ್ಲಿ ಮಾತನಾಡಿ ಭಾರತ ಒಕ್ಕೂಟ ಮತ್ತು ರಾಜ್ಯ ಸರ್ಕಾರವು ರೈತರಿಗೆ ಮತ್ತು ಕೃಷಿಗೆ ಅಗತ್ಯವಾದ ಅನೇಕ ಯೋಜನೆಗಳನ್ನು ರೂಪಿಸಿ ಘೋಷಿಸಿ ಅನುಷ್ಠಾನಕ್ಕೆ ತಂದಿದ್ದರೂ ಕೂಡ ಅವುಗಳನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ತಂದು ನಿಜ ರೈತರಿಗೆ ತಲುಪಿಸುವಲ್ಲಿ ಆಡಳಿತ ವ್ಯವಸ್ಥೆಯು ವಿಫಲವಾಗಿದೆ.

ಇದೆಲ್ಲದರ ಪರಿಣಾಮವಾಗಿ ರಾಜ್ಯ ಮತ್ತು ದೇಶದಾದ್ಯಂತ ರೈತರು ಮತ್ತು ರೈತಪರ ಸಂಘಟನೆಗಳು ವ್ಯವಸಾಯ ಮಾಡಲು ಸರಿಯಾದ ನೀರು, ವಿದ್ಯುತ್ ಸೌಲಭ್ಯಕ್ಕಾಗಿ ಮತ್ತು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಂಬಲ ಬೆಲೆಗಾಗಿ ಹೋರಾಟ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಮತ್ತೊಂದು ಕಡೆ ನಾನಾ ಯೋಜನೆಗಳ ಹೆಸರಿನಲ್ಲಿ ರೈತರ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಸರ್ಕಾರ ರೈತರನ್ನು ಒಕ್ಕಲೆಬ್ಬಿಸುತ್ತಿದೆ. ಇದೆಲ್ಲದರ ಪರಿಣಾಮವಾಗಿ ರಾಜ್ಯ ಮತ್ತು ದೇಶದಾದ್ಯಂತ ವರ್ಷವೊಂದಕ್ಕೆ ಸಾವಿರಾರು ರೈತರು ಆತ್ಮಹತ್ಯೆಗೆ ಬಲಿಯಾಗುತ್ತಿರುವುದನ್ನು ನಾವು ನೀವೆಲ್ಲರೂ ಕಾಣುತ್ತಿದ್ದೇವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಕೃಷಿ ಪ್ರಧಾನ ದೇಶವಾದ ನಮ್ಮಲ್ಲಿ ಕೃಷಿ ಮತ್ತು ಕೃಷಿಕರ ಪರವಾದ ಆಡಳಿತ ನೀತಿಯನ್ನು ರೂಪಿಸುವಲ್ಲಿ ನಮ್ಮ ಸರ್ಕಾರಗಳು ವಿಫಲವಾಗಿವೆ.
ಸರ್ಕಾರದ ರೈತಪರ ಯೋಜನೆಗಳು ಉಳ್ಳವರ ಪಾಲಾಗುತ್ತಿವೆ.
ಸಣ್ಣ,ಅತಿ ಸಣ್ಣ ರೈತರು ಸೇರಿದಂತೆ ರೈತರು ಸಂಕಷ್ಟಗೆ ಸಿಲುಕಿ ಆತ್ಮಹತ್ಯೆ ಹಾದಿ ತುಳಿಯುತ್ತಿದ್ದಾರೆ ಇದರಿಂದ ಆ ರೈತ ಕುಟುಂಬದ ಸದಸ್ಯರು ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ.ಆದ್ದರಿಂದ ನಮ್ಮ ಸರ್ಕಾರಗಳು ರೈತರ ನೆರವಿಗೆ ಈ ಕೆಳಕಂಡ ಸೌಲಭ್ಯಗಳನ್ನು ನೀಡಿ ರೈತರ ನೆರವಿಗೆ ಮುಂದಾಗಬೇಕೆಂದರು.

೧.ಸರ್ಕಾರವು ರೈತರ ಪಂಪ್ ಸೆಟ್/ಬೋರ್ವೆಲ್ ಗಳಿಗೆ ವಿದ್ಯುತ್ ಸಂಪರ್ಕವನ್ನು ಉಚಿತವಾಗಿ ನೀಡಬೇಕು.
೨.ರೈತರ ಪಂಪ್ ಸೆಟ್/ಬೋರ್ವೆಲ್ ಗಳಿಗೆ ಉಚಿತವಾಗಿ ಸೋಲಾರ್ ಅಳವಡಿಸಬೇಕು.
೩.ರೈತರು ಬೆಳೆದ ಯಾವುದೇ ಬೆಳೆಯನ್ನು ಎಪಿಎಂಸಿ ಮತ್ತು ಹಾಪ್ಕಾಮ್ಸ್ ಮೂಲಕ ವರ್ಷದ ೩೬೫ ದಿನವು ಮಾರಾಟ ಮಾಡಲು ವ್ಯವಸ್ಥೆ ಮಾಡಬೇಕು.
೪.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಆ ವ್ಯಾಪ್ತಿಯಲ್ಲಿ ರೈತರು ಬೆಳೆದ ಬೆಳೆಗಳನ್ನು ನ್ಯಾಯಯುತ ಬೆಲೆಯ ಮೂಲಕ ಕೊಂಡುಕೊಳ್ಳಬೇಕು.ಅದಕ್ಕೆ ಕೆಎಂಎಫ್ ಮಾದರಿ ಅಳವಡಿಸಿಕೊಳ್ಳಬೇಕು.
೫.ರೈತರ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲವನ್ನು ಮನ್ನಾ ಮಾಡಬೇಕು.
೬.ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ೧೦ ಲಕ್ಷ ಪರಿಹಾರ ನೀಡಬೇಕು.
೭.ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬದ ಒಬ್ಬರಿಗೆ ಸರ್ಕಾರ ಕೃಷಿ ಇಲಾಖೆಯಲ್ಲಿ ಉದ್ಯೋಗ ನೀಡಬೇಕು.
೮.ಪಿಎಂ ಕಿಸಾನ್ ಹಣವನ್ನು ನಾಲ್ಕು ತಿಂಗಳಿಗೆ ಒಮ್ಮೆ ನೀಡುವ ಬದಲು ಪ್ರತಿ ತಿಂಗಳು ನೀಡಬೇಕು.
೯.ರಾಜ್ಯ ಸರ್ಕಾರವು ಪಿಎಂ ಕಿಸಾನ್ ಮಾದರಿಯಲ್ಲಿ ಸಿಎಂ ಕಿಸಾನ್ ಹಣವನ್ನು ನೀಡಬೇಕು.
೧೦.ರೈತರಿಗೆ ನೀಡುವ ಬೆಳೆ ಸಾಲದ ಮೊತ್ತವನ್ನು ಹೆಚ್ಚಿಸಬೇಕು.
೧೧.ಸಾವಯವ/ನೈಸರ್ಗಿಕ ಕೃಷಿಕರಿಗೆ ಎಕರೆಗೆ ೧೦.೦೦೦ ಪ್ರೋತ್ಸಾಹಧನವನ್ನು ನೀಡಬೇಕು.
೧೨. ರೈತರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕವೇ ಬಿತ್ತನೆ ಬೀಜಗಳನ್ನು ಮತ್ತು ಗೊಬ್ಬರಗಳನ್ನು ರಿಯಾಯಿತಿ ದರದಲ್ಲಿ ನೀಡಬೇಕು.
೧೩. ರೈತರ ಮಕ್ಕಳಿಗೆ ಉದ್ಯೋಗಗಳಲ್ಲಿ ಶೇಕಡಾ ೫೦ ಮೀಸಲಾತಿ ನೀಡಬೇಕು.
೧೪. ರೈತರು ಮತ್ತು ಕುಟುಂಬಗಳಿಗೆ ಉಚಿತವಾಗಿ ವೈದ್ಯಕೀಯ ಸೌಲಭ್ಯ ನೀಡಬೇಕು.
೧೫.ರೈತರಿಗೆ ಉಚಿತವಾಗಿ ಬಸ್ ಮತ್ತು ರೈಲುಗಳಲ್ಲಿ ಪ್ರಯಾಣಕ್ಕೆ ಅವಕಾಶ ನೀಡಬೇಕು.
ಈ ಮೇಲಿನ ಎಲ್ಲಾ ಸೌಲಭ್ಯಗಳನ್ನು ಸರ್ಕಾರ ೧೦ ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ಅನ್ವಯವಾಗುವಂತೆ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು, ರೈತರ ಹೆಸರಿನಲ್ಲಿ ಯೋಜನೆಗಳು ಉಳ್ಳವರ ಪಾಲಾಗದಂತೆ ನೋಡಿಕೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಎಂ.ನಾಗೇಂದ್ರಕುಮಾರ್
