ಟಿ.ನರಸೀಪುರ : ತಲಕಾಡು ಬಳಿ ಇರುವ ಜಲಧಾಮ ರೆಸಾರ್ಟ್ನ್ನಿಂದ ಸಾರ್ವಜನಿಕರಿಗೆ, ವಯೋವೃದ್ಧರಿಗೆ,ವಿದ್ಯಾರ್ಥಿಗಳಿಗೆ,ಮಕ್ಕಳಿಗೆ,ಶಿಶುಗಳಿಗೆ,ಜಾನುವಾರುಗಳಿಗೆ ಬಹಳ ತೊಂದರೆಯಾಗುತ್ತಿದ್ದು ಆರೋಗ್ಯದ ಮೇಲೆ ಬಹಳಷ್ಟು ದುಷ್ಪರಿಣಾಮ ಬೀರುತ್ತಿದೆ. ಕೂಡಲೇ ಜಿಲ್ಲಾಡಳಿತ ಮದ್ಯ ಪ್ರವೇಶಿಸಿ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕ್ರಮ ಜರುಗಿಸಬೇಕೆಂದು ಕನ್ನಡಿಗರ ರಕ್ಷಣಾ ವೇದಿಕೆಯ ಮೈಸೂರು ಜಿಲ್ಲಾಧ್ಯಕ್ಷ ಬಿ.ಸಿ. ಶಾಂತರಾಜು ಒತ್ತಾಯಿಸಿದರು.
ಪಟ್ಟಣದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಕರೆದಿದ್ದ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿ ರೆಸಾರ್ಟ್ ಮಾಲೀಕ ಟಿ.ಎನ್. ನಾರಾಯಣ್ ಯಾವುದೇ ಸರ್ಕಾರಿ ಅನುಮತಿ ಪಡೆಯದೆ ಹಗಲು–ರಾತ್ರಿ ಪೆಟ್ರೋಲ್ ಬೋಟ್ಗಳನ್ನು ನದಿಯಲ್ಲಿ ನಡೆಸುತ್ತಿದ್ದಾರೆ ಅಲ್ಲದೆ ಬೋಟ್ಗಳಲ್ಲಿ ಡಿಜೆ ಸೌಂಡ್ ವ್ಯವಸ್ಥೆ ಅಳವಡಿಸಿ ಆರ್ಕೆಸ್ಟ್ರಾ ನಡೆಸುವುದರಿಂದ ಸಮೀಪದ ಗ್ರಾಮಸ್ಥರಿಗೆ ತೀವ್ರ ತೊಂದರೆ ಉಂಟಾಗಿದೆ.

ಅನಧಿಕೃತ ಪೆಟ್ರೋಲ್ ಬೋಟ್ಗಳ ನಿರಂತರ ಸಂಚಾರದಿಂದ ಕಾವೇರಿ ನದಿ ನೀರು ಕಲುಷಿತವಾಗುತ್ತಿದೆ. ಇದರಿಂದ ಜಲಚರ ಜೀವಿಗಳಿಗೆ ಅಪಾಯ ಉಂಟಾಗುತ್ತಿದ್ದು, ಬೋಟ್ಗಳಲ್ಲಿ ಬಳಸುವ ಡಿಜೆ ಸೌಂಡ್ನಿಂದ ಶಬ್ದ ಮಾಲಿನ್ಯ ಉಂಟಾಗಿ ಪರಿಸರ ಸಮತೋಲನ ಹಾನಿಯಾಗುತ್ತಿದೆ. ರೆಸಾರ್ಟ್ನ ತ್ಯಾಜ್ಯ ನೇರವಾಗಿ ನದಿಗೆ ಸೇರುತ್ತಿರುವುದು ಪರಿಸರಕ್ಕೆ ಗಂಭೀರ ಅಪಾಯವನ್ನು ಉಂಟುಮಾಡುತ್ತಿದೆ ಎಂದು ದೂರಿದರು.
ಇದನ್ನು ಓದಿ: ಟಿ.ನರಸೀಪುರ : ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣಕ್ಕೆ ಕಾಳೀಹುಂಡಿ ಗ್ರಾಮಸ್ಥರ ಆಗ್ರಹ..!
ತಾಲ್ಲೂಕು ಮಟ್ಟದಲ್ಲಿ ಎಲ್ಲಾ ಇಲಾಖೆಗಳಿಗೂ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಎಲ್ಲಾ ಅಧಿಕಾರಿಗಳು ‘ಜಿಲ್ಲಾಧಿಕಾರಿಗಳ ವ್ಯಾಪ್ತಿ’ ಎಂದು ಹೇಳಿ ದೂರುಗಳನ್ನು ಪರಸ್ಪರ ತಳ್ಳಿಹಾಕುತ್ತಿದ್ದು ನ್ಯಾಯ ಸಿಗಲಿಲ್ಲವೆಂದರೆ ತಾಲ್ಲೂಕಿನ ಎಲ್ಲಾ ಸಂಘ ಸಂಸ್ಥೆಗಳ ಸಹಕಾರ ಪಡೆದು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆಂದು ಎಚ್ಚರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಕಾರ್ಯಾಧ್ಯಕ್ಷ ಟಿ.ಬೆಟ್ಟಹಳ್ಳಿ ಬಿ.ಎಂ.ನಂಜುಂಡಸ್ವಾಮಿ ಮಾತನಾಡಿ, ಸಾವಿರಾರು ಜಾತಿಯ ಪಕ್ಷಿಗಳು ನದಿ ದಡದಲ್ಲಿ ಕುಳಿತು ಪ್ರವಾಸಿಗರನ್ನು ಮಂತ್ರ ಮುಗ್ಧರನ್ನಾಗಿಸುತ್ತಾ ರಾಜ್ಯ ಸೇರಿದಂತೆ ಅಂತರ ರಾಜ್ಯದಿಂದಲೂ ಹೆಚ್ಚು ಪ್ರವಾಸಿಗರು ಆಗಮಿಸುತ್ತಾ ಪ್ರಕೃತಿ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.ರೆಸಾರ್ಟ್ ನ ಪೆಟ್ರೋಲ್ ಬೋಟ್ಗಳ ಸಂಚಾರದಿಂದ ಜಲಚರ,ಹಾಗೂ ಪಕ್ಷಿಗಳಿಗೆ ಹೆಚ್ಚು ತೊಂದರೆಯಾಗುತ್ತಿದೆ.ತಾಲ್ಲೂಕು ಹಾಗೂ ಜಿಲ್ಲಾಡಳಿತ ರೆಸಾರ್ಟ್ ವಿಷಯದಲ್ಲಿ ಏಕೆ ಮೌನ ವಹಿಸಿದೆ ಎಂಬುದೇ ನಮಗೆ ಯಕ್ಷ ಪ್ರಶ್ನೆಯಾಗಿದೆ.ಈ ರೆಸಾರ್ಟ್ ಅನಧಿಕೃತವಾಗಿ ನಿರ್ಮಾಣವಾಗಿದ್ದು ಅದಕ್ಕೆ ಪೂರಕವಾದ ಎಲ್ಲಾ ದಾಖಲಾತಿ ಇದೆ ಕೂಡಲೇ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಬೇಕೆಂದರು.

ಅಖಿಲ ಕರ್ನಾಟಕ ಪರಿಶಿಷ್ಟ ಮಹಾಸಭಾ ತಾಲ್ಲೂಕು ಅಧ್ಯಕ್ಷ ಟಿ.ಬೆಟ್ಟಹಳ್ಳಿ ಗಂಗಾಧರ್ ಮಾತನಾಡಿ ರೆಸಾರ್ಟ್ ಮಾಲೀಕರು ನಿಯಮಗಳನ್ನು ಗಾಳಿಗೆ ತೂರಿ ರೆಸಾರ್ಟ್ ನಡೆಸುತ್ತಿದ್ದು.ಹಗಲು,ರಾತ್ರಿ ಎನ್ನದೆ ಬೋಟಿಂಗ್ ನಡೆಸುತ್ತಿದ್ದಾರೆ.ರೆಸಾರ್ಟ್ ನ್ನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು ತಾಲ್ಲೂಕು ಹಾಗೂ ಜಿಲ್ಲಾಡಳಿತ ತನಿಖೆ ನಜೆಸಿ ಸೂಕ್ತ ಕ್ರಮ ಜರುಗಿಸಿ ಜಲಚರ,ಪ್ರಾಣಿ,ಪಕ್ಷಿ ಹಾಗೂ ಜನರಿಗೆ ನ್ಯಾಯ ಹೊದಗಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಪರಿಶಿಷ್ಟ ಮಹಾಸಭಾ ತಾಲ್ಲೂಕು ಅಧ್ಯಕ್ಷ ಟಿ.ಬೆಟ್ಟಹಳ್ಳಿ ಗಂಗಾಧರ್, ದ.ಸಂ.ಸ ಹೋಬಳಿ ಸಂಚಾಲಕ ,ಬಿ.ಎನ್,ಶಿವರುದ್ರ, ಟಿ.ಬೆಟ್ಟಹಳ್ಳಿ ಗ್ರಾ.ಪಂ.ಮಾಜಿ ಸದಸ್ಯ,ಬಿ.ಎನ್,ಭಾಸ್ಕರ್ ಇದ್ದರು.
- ಎಂ.ನಾಗೇಂದ್ರ ಕುಮಾರ್

[…] […]