ಚನ್ನರಾಯಪಟ್ಟಣ: ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ತಹಶೀಲ್ದಾರ್ ವಿ.ಎಸ್. ನವೀನ್ ಕುಮಾರ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಆರೋಪದ ಮೇಲೆ ಗುಲಸಿಂದ ಮಹೇಶ್ ಹಾಗೂ ಆತನ ಸಹಚರರ ವಿರುದ್ಧ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಕುರಿತು ತಹಶೀಲ್ದಾರ್ ನವೀನ್ ಕುಮಾರ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದು, ನ್ಯಾಯಾಲಯದ ಆವರಣದಲ್ಲಿ ಸಾರ್ವಜನಿಕರ ಎದುರು ಅವಾಚ್ಯ ಪದಗಳಿಂದ ನಿಂದನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ದಲಿತ ಸೇನಾ ಪಡೆ ಜಿಲ್ಲಾಧ್ಯಕ್ಷ ದಂಡೋರ ಮಂಜುನಾಥ, ತಾಲೂಕು ದಂಡಾಧಿಕಾರಿಯನ್ನು ಕೋರ್ಟ್ ಆವರಣದಲ್ಲಿ ಸಾರ್ವಜನಿಕರ ಎದುರು ಏಕವಚನದಲ್ಲಿ ನಿಂದಿಸಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಈ ಘಟನೆ ಚನ್ನರಾಯಪಟ್ಟಣ ಯಾವ ದಿಕ್ಕಿಗೆ ಸಾಗುತ್ತಿದೆ ಎಂಬ ಪ್ರಶ್ನೆ ಹುಟ್ಟಿಸಿದೆ ಎಂದು ಹೇಳಿದರು.
ಕೆಡಿಪಿ ಸದಸ್ಯ ಕಬ್ಬಾಳು ಮಹೇಶ್ ಮಾತನಾಡಿ, ಕೆಲವರು ಗ್ರೇಡ್-1 ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿರುವುದರಿಂದ ತಾಲೂಕಿನಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಭಯಭೀತ ಪರಿಸ್ಥಿತಿಯಲ್ಲಿ ಸೇವೆ ಸಲ್ಲಿಸುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಉತ್ತೆನಹಳ್ಳಿ ಸಾಗರ್ ಮಾತನಾಡಿ, ಘಟನೆ ನಡೆದ ದಿನ ನಾನು ಕಾರ್ಯನಿಮಿತ್ತ ನ್ಯಾಯಾಲಯದ ಆವರಣದಲ್ಲಿ ಇದ್ದೆ. ನನ್ನ ಎದುರಿನಲ್ಲೇ ತಹಶೀಲ್ದಾರ್ ನವೀನ್ ಕುಮಾರ್ ಅವರನ್ನು ಸಾರ್ವಜನಿಕ ಸಮ್ಮುಖದಲ್ಲಿ ಅವಾಚ್ಯ ಪದಗಳಿಂದ ನಿಂದಿಸಿರುವುದು ಖಂಡನೀಯ ಎಂದು ಹೇಳಿದರು.
ಭೀಮ್ ಆರ್ಮಿ ತಾಲೂಕು ಅಧ್ಯಕ್ಷ ಗಾಯಕ ಮಂಜುನಾಥ ಮಾತನಾಡಿ, ನ್ಯಾಯಾಲಯದ ಆವರಣದಲ್ಲಿ ರಾಜ್ಯ ಮಟ್ಟದ ಕೆಎಎಸ್ ಅಧಿಕಾರಿಯನ್ನು ಕೆಟ್ಟ ಪದಗಳಿಂದ ನಿಂದಿಸಿರುವುದು ಸರಿಯಲ್ಲ. ಯಾವುದೇ ಸರ್ಕಾರಿ ಅಧಿಕಾರಿಗಳು ತಪ್ಪು ಮಾಡಿದರೆ ಮೇಲಧಿಕಾರಿಗಳಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಬೇಕು. ಆದರೆ ಸಾರ್ವಜನಿಕರ ಎದುರು ಅಧಿಕಾರಿಗಳಿಗೆ ಅಡ್ಡಗಟ್ಟಿ ನಿಂದನೆ ಮಾಡುವುದು ತಪ್ಪು ಎಂದು ಹೇಳಿದರು.
– ಮಂಜುನಾಥ್ ಐ ಕೆ
