ಚೆನ್ನೈ, ಮಾ.14: ಪ್ರಸಿದ್ಧ ತಮಿಳು ಕವಿ, ಗೀತರಚನೆಕಾರ ಮತ್ತು ಸಾಹಿತಿ ಆರ್. ವೈರಮುತ್ತು ಅವರಿಗೆ ಭಾರತದ ಅತ್ಯುನ್ನತ ಸಾಹಿತ್ಯ ಗೌರವವಾದ 60ನೇ ಜ್ಞಾನಪೀಠ ಪ್ರಶಸ್ತಿ (2025) ಲಭಿಸಿದೆ.
ಈ ಪ್ರತಿಷ್ಠಿತ ಗೌರವವನ್ನು ಪಡೆದ ಮೂರನೇ ತಮಿಳು ಸಾಹಿತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಅಖಿಲನ್ (1975) ಹಾಗೂ ಜಯಕಾಂತನ್ (2002) ಅವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿತ್ತು.
ತಮಿಳು ಸಾಹಿತ್ಯ ಕ್ಷೇತ್ರದಲ್ಲಿ ಕಾವ್ಯ, ಕಾದಂಬರಿ, ಪ್ರಬಂಧ ಹಾಗೂ ಗೀತರಚನೆಗಳ ಮೂಲಕ ವಿಶಿಷ್ಟ ಗುರುತಿಸಿಕೊಂಡಿರುವ ವೈರಮುತ್ತು, ದಶಕಗಳ ಕಾಲ ಸಾಹಿತ್ಯ ಮತ್ತು ಕಲಾ ಲೋಕದಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಸಾಹಿತ್ಯ ಕೃತಿಗಳು ಜನಮನದಲ್ಲಿ ಆಳವಾದ ಸ್ಪಂದನ ಮೂಡಿಸಿದ್ದು, ತಮಿಳು ಭಾಷೆಯ ಸೊಗಡು ಮತ್ತು ಸಾಮಾಜಿಕ ಬದುಕಿನ ಸೂಕ್ಷ್ಮತೆಯನ್ನು ಅಭಿವ್ಯಕ್ತಿಸುವಲ್ಲಿ ಪ್ರಮುಖ ಸ್ಥಾನ ಪಡೆದಿವೆ.
ಜ್ಞಾನಪೀಠ ಪ್ರಶಸ್ತಿ ಘೋಷಣೆಯ ಹಿನ್ನೆಲೆಯಲ್ಲಿ ತಮಿಳು ಸಾಹಿತ್ಯ ವಲಯದಲ್ಲಿ ಸಂತಸ ಮನೆಮಾಡಿದ್ದು, ಸಾಹಿತ್ಯಾಸಕ್ತರು ಹಾಗೂ ಅಭಿಮಾನಿಗಳು ವೈರಮುತ್ತು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
