ನಿನ್ನೆ ಸಾಯಂಕಾಲ ತಮಿಳುನಾಡಿನ ನನ್ನ ಸ್ನೇಹಿತರೊಬ್ಬರಿಗೆ ಕರೆ ಮಾಡಿ ನಾನು ಏಪ್ರಿಲ್ 14 ರಂದು ದಿಂಬಂ ಘಾಟಿನ ಸುತ್ತ ಒಂದು ರೌಂಡ್ ಸುಮ್ಮನೆ ಬರುತ್ತೇನೆಂದಾಗ , ‘ವ್ಯಾಂಡವೇ ವ್ಯಾಂಡ ಸಾರ್ ನಾಳೆಗೆ ನಮ್ಮ ತಮಿಳುನಾಡಿನಲ್ಲಿ ಹೊಸ ವರ್ಷಾಚರಣೆ ಇದೆ ನಾನು ನಿಮ್ಮೊಂದಿಗೆ ಎಲ್ಲಿಯೂ ಸುತ್ತಲೂ ಬರುವುದಿಲ್ಲ ಬರುವುದಾದರೆ ನಮ್ಮ ವೀಟಿಕೆ ಬನ್ನಿ” ಎಂದೇಳಿದಾಗ ನಾನು “ಜನವರಿ ಮೊದಲ ದಿನವೇ ಹೊಸ ವರ್ಷ ಬಂದು ಮೂರು ತಿಂಗಳಾಗಿದೆ ಯುಗಾದಿಯು ಮುಗಿದು ಹೋಗಿದೆ ನಾಳೆ ಯಾವ ಹೊಸ ವರ್ಷ ನಿನ್ನ ಸುಳ್ಳಿನ ಸುರುಳಿ ಬದಿಗಿರಿಸಿ ಮರ್ಯಾದೆಯಾಗಿ ಬಾ” ಎಂದಾಗ “ಆಆಆಆ ಇಲ್ಲ ಸಾ ನಾಳೆ ನಮ್ಮಲ್ಲಿ ಹೋಸ ವರ್ಷ ಸತ್ಯವಾಗಿಯೂ, ನನ್ನಲ್ಲಿ ನಂಬಿಕೆ ಇಲ್ಲದೆ ಇದ್ದರೆ ನೀವು ನಮ್ಮ ಜೋಯಿಸರ ಬಳಿಯೇ ಪೋನು ಕೊಡುತ್ತೇನೆ ಕೇಳಿಕೊಳ್ಳಿ” ಎಂದು ಜೋಯಿಸರಿಗೆ ಪೋನು ಕೊಟ್ಟಿದ್ದೆ ತಡ ರಾಗದ ಧ್ವನಿಯಲ್ಲಿ” ವಣಕ್ಕುಂ ಸಾಮಿ ಚಂದ್ರನ ಆಧಾರದಲ್ಲಿ ಪಾಲಿಸುವಂತಹ ಪಂಚಾಂಗ ಚಂದ್ರಮಾನ ಅದರ ಯುಗಾದಿ ಮುಗಿದಿದೆ ನಾಳೆ ಸೂರ್ಯ ಮೇಷ ರಾಶಿಗೆ ಪ್ರವೇಶಿಸುತ್ತಾನೆ ಆಗಾಗಿ ನಾಳೆ ಸೌರ ಯುಗಾದಿ ಸೂರ್ಯನ ಚಲನೆಯ ಆಧಾರದಲ್ಲಿ ಬರುವಂತಹ 12 ತಿಂಗಳಿಗೆ ನಾಳೆ ಪ್ರಥಮ ಮೇಷ ಸಂಕ್ರಮಣ ದೇಶ ವಿದೇಶಗಳಲ್ಲಿ ಇರುವ ತಮಿಳಿಗರು ಪುತಂಡು ಹೊಸ ವರ್ಷವನ್ನಾಗಿ ಆಚರಿಸುತ್ತಾರೆ” ಎಂದು ಹೇಳಿ ಫೋನ್ ಕಟ್ ಮಾಡಿದರು. ನನಗೆ ಈ ಪುತಂಡು ಆಚರಣೆ ಬಗ್ಗೆ ಕೇಳಿ ತಮಿಳಿಗರ ಪ್ರಾದೇಶಿಕತೆಯ ಅನನ್ಯತೆಯ ಪ್ರೇಮದ ಬಗ್ಗೆ ಹೆಮ್ಮೆಯಾಯಿತು ಈ ಬಗ್ಗೆ ಇನ್ನಷ್ಟು ತಿಳಿಯಲು ಬಲ್ಲವರನ್ನು ಸಂಪರ್ಕಿಸಿದೆ.
ಈ ಬಗ್ಗೆ ತಿಳಿದವರೆಲ್ಲರೂ ಹೌದು ತಮಿಳು ಕ್ಯಾಲೆಂಡರಿನಲ್ಲಿ ಏಪ್ರಿಲ್ 14 ಪುತ್ತಾಂಡು (ಹೊಸವರ್ಷ),ರೋಮನೈಸ್ಡ್ ಎಂದು ಕರೆಯಲ್ಪಟ್ಟಿದ್ದು ಅದೇ ದಿನವನ್ನು ತಮಿಳರು ಸಾಂಪ್ರದಾಯಿಕ ಹೊಸ ವರ್ಷವೆಂದು ಆಚರಿಸುತ್ತಾರೆ ಈ ಆಚರಣೆನ್ನು ಕೇರಳದಲ್ಲಿ ವಿಷು, ವೈಶಾಖಿ ಅಥವಾ ಬೈಸಾಖಿ ಮುಂತಾದ ಹೆಸರುಗಳಿಂದ ಕರೆಯುತ್ತಾರೆ ಹೇಳಿದರು ಈ ಬಗ್ಗೆ ಇನ್ನಷ್ಟು ತಿಳಿಯಲು ನನ್ನ ಸ್ನೇಹಿತರಿಗೆ ಕರೆ ಮಾಡಿದಾಗ ಈತನದೊಂದು ಕಾಟ ಎಂದುಕೊಂಡೆ ಕರೆಯನ್ನು ಸ್ವೀಕರಿಸಿ “ಸಾಮಿ ನಾಡಿದ್ದು ನೀವು ಬನ್ನಿ ತಲಮಲೈ ಪ್ರದೇಶದ ಸುತ್ತಲೂ ನಿಮ್ಮನ್ನೊಂದು ರೌಂಡ್ ಹೊಡೆಸುತ್ತೇನೆ ಈ ಪುತ್ತಾಂಡುವಿನ ಬಗ್ಗೆ ಮಾತ್ರ ನನ್ನನ್ನು ಕೇಳಬೇಡಿ ದಮ್ಮಯ್ಯ” ಎಂದೇಳಿ ಪೋನ್ ಕಟ್ ಮಾಡುವಷ್ಟರಲ್ಲಿಯೇ ನಾನು “ಏಯ್ ವಸಿ ಇರೋ ಮಾರಾಯ! ನಾಳೆ ಹೊಸ ವರ್ಷಕ್ಕೆ ಏನೇನು ಮಾಡುತ್ತೀರಿ” ಎಂದು ಕೇಳಿದಾಗ ” ಅಯ್ಯೋ ಸಾ ಅದಾ! ಮನೆ ಮಂದಿಯೆಲ್ಲಾ ಮನೆಯನ್ನೆಲ್ಲಾ ಕ್ಲೀನ್ ಮಾಡಿ ಹೂವು ಹಣ್ಣುಗಳೊಂದಿಗೆ ಮತ್ತು ಶುಭ ವಸ್ತುಗಳೊಂದಿಗೆ ತಟ್ಟೆಯೊಂದನ್ನು ತಯಾರಿಸಿ ದೇವರಿಗೆ ಪೂಜೆ ಸಲ್ಲಿಸಿಸುತ್ತಾರೆ ಹೊಸ ಬಟ್ಟೆಗಳನ್ನು ಧರಿಸಿ ದೇವಾಲಯಗಳಿಗೆ ಹೋಗುತ್ತಾರೆ, ಹಿರಿಯರ ಹತ್ತಿರ ಹೋಗಿ ‘ವಾಲ್ತುಕಳ್, ಪುತ್ತಾಂಡು ವಾಲ್ತುಕಳ್ ಅಥವಾ ಇನಿಯ ಪುತ್ತಾಂಡು ವಾಲ್ತುಕಳ್’ ಎಂದೇಳುತ್ತಾರೆ ಇದು ಕನ್ನಡದಲ್ಲಿ ಹೊಸ ವರ್ಷದ ಶುಭಾಶಯಗಳು ಎಂದರ್ಥವಾಗುತ್ತದೆ ಸಾಕ ಸಾ§ ನಾನು ಪೋನ್ ಮಡುಗ್ಲಾ ನನಗೆ ಗೊತ್ತಿರುವುದೇ ಇಷ್ಟು ಬೇಕಾದರೆ ಊರಿಗೆ ಹೋದಮೇಲೆ ನಮ್ಮ ಹಿರಿಯರಿಗೆ ಕೊಡ್ತೇನೆ ನನಗಿಂತಲೂ ಚೆನ್ನಾಗಿ ಹೇಳುತ್ತಾರೆಂದು ಪೋನ್ ಕಟ್ ಮಾಡಿದ ನನಗೆ ಇದು ವೆರಿ ಇಂಟ್ರೆಸ್ಟಿಂಗ್ ಸಂಗತಿ ಎನಿಸಿತು.
ಈ ಪುತ್ತಾಂಡುವಿನ ಬಗ್ಗೆ ತಮಿಳಿನ ಕೂಡಲೂರ್ ಕಿಡಾರ್ ಪುರಾಣದಲ್ಲಿ ‘ಮೇಷ ರಾಶಿ/ಚಿತ್ತಿರೈ’ ಅನ್ನು ವರ್ಷದ ಆರಂಭವೆಂದು ಉಲ್ಲೇಖಿಸಲಾಗಿದೆ ಹಾಗೂ ತಮಿಳುನಾಡು ಮತ್ತು ಪುದುಚೇರಿ , ಶ್ರೀಲಂಕಾ ಇನ್ನಿತರ ದೇಶಗಳಲ್ಲಿರುವ ತಮಿಳು ವಲಸೆಗಾರರು ಪುತಂಡನ್ನಾಚರಿಸುವ ಬಗ್ಗೆ ತಮಿಳು ಸಾಹಿತ್ಯದಲ್ಲಿ ಉಲ್ಲೇಖವಿರುವುದು ಗಮನಾರ್ಹವಾದ ಸಂಗತಿ ಎನ್ನಬಹುದು ತಮಿಳುನಾಡಿನಲ್ಲಿ ಭಾಗಶಃ ಮಂದಿ ಗ್ರೆಗೋರಿಯನ್ ಕ್ಯಾಲೆಂಡರಿನಲ್ಲಿ ಬರುವ ಹೊಸ ವರ್ಷಾಚರಣೆಯನ್ನು ಆಚರಿಸುವುದಿಲ್ಲ ಈ ಬಗ್ಗೆ 2008 ರಲ್ಲಿದ್ದ ತಮಿಳುನಾಡಿನ ಸರ್ಕಾರ ತಮಿಳು ಹೊಸ ವರ್ಷವನ್ನು ತಮಿಳ್ ಥಾಯ್ ತಿಂಗಳ ಮೊದಲ ದಿನದಿಂದು (ಜನವರಿ 14) ಪೊಂಗಲ್ನ ಸುಗ್ಗಿಯ ಹಬ್ಬದೊಂದಿಗೆ ಆಚರಿಸಬೇಕೆಂದು ಘೋಷಣೆ ಮಾಡಿದಾಗ ಅನೇಕರು ಹಬ್ಬದ ದಿನಾಂಕವನ್ನು ಮೂರು ನಿಗದಿಪಡಿಸಿದ ಸರ್ಕಾರದ ಶಾಸವನ್ನು ನಿರ್ಲಕ್ಷಿಸಿದರು ತಮಿಳುನಾಡಿನ ವಿದ್ವಾಂಸರು, ಪುರೋಹಿತರು, ವಿರೋಧ ಪಕ್ಷಗಳು ವಿರೋಧಿಸಿದರು ನ್ಯಾಯಾಲಯದಲ್ಲಿ ಪ್ರಶ್ನಿಸಿದರು ಈ ಎಲ್ಲಾ ಹೋರಾಟದ ಫಲವಾಗಿ ಏಪ್ರಿಲ್ನಲ್ಲೇ ಹೊಸ ವರ್ಷಾಚರಣೆ ಮುಂದುವರೆಸಿದರು ತಮಿಳುನಾಡಿನ ಈ ಜನಪ್ರಿಯ ಭಾವನೆಗಳನ್ನು ಸಮಾಧಾನಪಡಿಸುವ ನಿಟ್ಟಿನಲ್ಲಿ ಅದೇ ದಿನವನ್ನು ‘ಚಿತ್ತಿರೈ ತಿರುನಾಳ್'(ಚಿತ್ತಿರೈ ಹಬ್ಬ) ಎಂದು ಮೂರು ನಾಮಕರಣ ಮಾಡಿ ತಮಿಳುನಾಡಿನ ಎಲ್ಲಾ ದೂರದರ್ಶನಗಳಲ್ಲಿ “ಚಿತ್ತಿರೈ ತಿರುನಾಳ್” ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ವಿವಾದವನ್ನು ತಿಳಿಪಡಿಸಿದರು ಈ ರೀತಿಯ ರಾಜಕೀಯ ಉಲ್ಬಣಗಳನ್ನು ಕಂಡ ಈ ಪುತ್ತಾಂಡು ಹಬ್ಬ ನಾಳೆ ತಮಿಳುನಾಡಿನ ಹೊಸ ವರ್ಷಾಚರಣೆಯಾಗುತ್ತಿದೆ ತಮಿಳಿಗರ ಪ್ರಾದೇಶಿಕತೆ ಅಸ್ಮಿತೆಯ ತಿಕ್ಕಾಟವೇ ಬಹುತ್ವದ ಭಾರತದ ವಿಶೇಷವೆನ್ನಬಹುದು.!

ಕೆ.ಶ್ರೀಧರ್ (ಕೆ.ಸಿರಿ)
ಸಾಹಿತಿಗಳು
ಚಾಮರಾಜನಗರ
