ಅಂದಾಜು ಮೂವತೈದು ಆಸುಪಾಸಿನ ಹೆಂಗಸು ನನ್ನ ಸಲಹಾ ಕೊಠಡಿಗೆ ಬಂದು “ಸರ್, ನಾನು ಬಹಳ ವರ್ಷಗಳಿಂದ ದೇವರನ್ನು ನೋಡಬೇಕು ಅಂತ ಕಾಯಿತಾ ಇರುವೆ, ನೀವು ತೋರಿಸುವಿರ?” ಒಂದು ಕ್ಷಣ ತಬ್ಬಿಬ್ಬು ಆದೆ, ಮತ್ತೆ ಆಕೆ “ನಾನು ತುಂಬ ಹಣ ಖರ್ಚು ಮಾಡಿದ್ದೇನೆ ಆದರೆ ಎಲ್ಲಾ ಮೋಸ ಮಾಡುವವರೇ ಆಗಿದ್ದಾರೆ” ಎಂದರು. ಇವರ ಇತಿಹಾಸವನ್ನು ತಿಳಿದಾಗ, ಈಕೆ ವಿಧವೆ, ಮಕ್ಕಳಿಲ್ಲ. ಹತ್ತಿರದಲ್ಲೇ ಇರುವ ಊರಿನಿಂದ ಬಂದಿದ್ದಾರೆ. ಈಕೆ ಮಹಾ ಈಶ್ವರ ಭಕ್ತೆ. ಆರ್ಥಿಕವಾಗಿ ಉನ್ನತ ಮಟ್ಟದಲ್ಲಿ ಇದ್ದಾರೆ. ಸಾಕಷ್ಟು ಆಸ್ತಿಗಳನ್ನು ಇವರ ಯಜಮಾನರು ಬಿಟ್ಟು ಹೋಗಿದ್ದಾರೆ.
ಸುತ್ತ ಮುತ್ತಾ ಇರುವ ಮತ್ತು ದೂರದ ದೇವಸ್ಥಾನಗಳನೆಲ್ಲಾ ಸುತ್ತಿ ಬಂದಿದ್ದಾರೆ. ಆ ಸಮಯದಲ್ಲಿ ಪ್ರತಿಷ್ಠ ದೇವಸ್ಥಾನದ ಯುವ ಅರ್ಚಕರೊಬ್ಬರು ಇವರಿಗೆ ಪರಿಚಯವಾದರು. ಆಕೆ ಆ ಅರ್ಚಕನಿಗೆ ದಂಬಾಲು ಬಿದ್ದು “ಈಶ್ವರ” ನನ್ನು ತೋರಿಸುವುದಕ್ಕೆ ಗೋಗರೆದರು. ಆತ ಇವರನ್ನು ಕುರಿತು “ನಾನು ನಿಮ್ಮ ಮನೆಯಲ್ಲಿ ಹೋಮ ಹವನ ಮಾಡಬೇಕು. ಕೆಲ ದಿನಗಳು ಈಶ್ವರನನ್ನು ಕುರಿತು ತಪಸ್ಸು ಮಾಡಬೇಕು. ನಾನು ನಿಮ್ಮ ಮನೆಯಲ್ಲಿ ಇರುವ ತನಕ ಯಾರಿಗೂ ಪ್ರವೇಶವಿಲ್ಲ. ಸಾಕಷ್ಟು ಹಣ ವಿನಿಯೋಗ ಮಾಡಬೇಕಾಗುತ್ತೆ. ಪೂಜಾ ಸಾಮಾಗ್ರಿಗಳನ್ನು ಮೊದಲೆ ತಂದು ಇಟ್ಟು ಕೊಳ್ಳಬೇಕು” ಎಂದು ಹೇಳಿ ಹೆಚ್ಚು ಹಣವನ್ನು ಪಡೆದು, ಇವರ ವಿಳಾಸ ಕೇಳಿ ಆಕೆಯನ್ನು ಬಿಳ್ಕೊಟ್ಟ. ಈ ಹೆಂಗಸು, “ಶ್ರೀ ರಾಮ” ಬರುವುದನ್ನೇ ಕಾಯುತ್ತಿದ್ದ “ಶಬರಿ” ಯ ತರಹ ಕಾಯುತ್ತಿದ್ದರು. ಆತ ಹೇಳಿದ ತಾರೀಖಿಗೆ ಪ್ರತ್ಯಕ್ಷನಾದ. ಈಕೆಗೆ ಸ್ವರ್ಗ ಮೂರೇ ಗೇಣು. ಅರ್ಚಕ ಬರುವುದನ್ನು ಆಕೆ ತನ್ನ ಸಂಬಂಧಿಕರಿಗೆ ಯಾರಿಗೂ ತಿಳಿಸಿರಿಲಿಲ್ಲ.

ಇವನು ಬಂದೊಡನೆ ಮನೆಯ ಒಳ ಅಂಗಳದಲ್ಲಿ ಹಲವಾರು ಯಂತ್ರ ಅಥವ ಮಂಡಲಗಳನ್ನು ಬರೆದು ಯಾಗ ಮಾಡುವುದಕ್ಕೆ ಶುರು ಮಾಡಿಕೊಂಡ. ಎಲ್ಲಾ ಕಿಟಿಕಿಗಳು ಬಂದ್ ಮಾಡಿಸಿದ. ಮನೆಯ ಒಳಗಿಂದ ಹೊಗೆ, ಧೂಪ ಮತ್ತು ಸಾಂಬ್ರಾಣಿಗಳ ವಾಸನೆ ಬರುತ್ತಿತ್ತು . ಒಂದು ವಾರ ಹೀಗೆ ನೆಡೆದು ಅಕ್ಕ ಪಕ್ಕ ಮನೆ ಮತ್ತು ನೆಂಟರಿಗೆ ಅನುಮಾನ ಬಂದು ಪೋಲಿಸ್ ಅಂಗಳಕ್ಕೂ ವಿಷಯ ಹೋಗಿ ಸಿನಿಮ ರೀತಿಯಲ್ಲಿ ಬಲವಂತದಿಂದ ಆ ಡೊಂಗಿ ಅರ್ಚಕನನ್ನು ಹೊರಕ್ಕೆ ಹಾಕಿಸಲಾಯಿತಂತೆ.
ಇದನ್ನು ಓದಿ:ತಂತ್ರ -“ಸ್ವಯಂ ವಿದ್ಯುತ್ – ಕಾರ್ಬನ್ ಬಿಲ್ಲೆ – ಮೈಟೋಕಾಂಡ್ರಿಯ – ಎಟಿಪಿ”
ಇದೆಲ್ಲಾ ಆತ್ಮ ಸಮಾಲೋಚನೆಯಲ್ಲಿ ಇವರು ನನಗೆ ತಿಳಿಸಿದ್ದರು. ಪೂಜೆಗೆ ಕೂತಾಗಲೆಲ್ಲಾ ಇವರ ಮೈ ಮೇಲೆ ದೇವರು ಬಂದಂತೆ ಭಾವಪರವಶತೆ ಮತ್ತು ಪರಾಕಾಷ್ಠೆಯಲ್ಲಿ ಇರುತ್ತಿದ್ದರಂತೆ. ಪೂಜಾರಿ ತನ್ನ ಮೇಲೆ “ಈಶ್ವರ” ಬಂದನೆಂದು ಆಕೆಯನ್ನು ನಂಬಿಸಿ ತನ್ನನ್ನು ತಬ್ಬಿ ಕೊಳ್ಳುವಂತೆ ಹೇಳುತ್ತಿದ್ದನಂತೆ. ಸೂಕ್ಷ್ಮ ವಿಷಯಗಳಿಗೆ ಆಕೆ ಸಮ್ಮತಿ ನೀಡಲಿಲ್ಲ.
ಇಂತಹ ಕೃತ್ಯಗಳು ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರಪಂಚದ ಹಲವಾರು ರಾಷ್ಟ್ರಗಳಲ್ಲಿ ಧರ್ಮದ ಹೆಸರಿನಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳಿಂದ ಅಮಾಯಕರು ‘ಕಲ್ಟ್ ಅಥವ ಪಂಥ’ ಗಳಿಗೆ ಬಲಿಯಾಗಿಸಿ ಅವರುಗಳು ನೋವನ್ನು ಅನುಭೋಗಿಸಿರುವ ಪ್ರಸ್ತಾಪಗಳು ಇವೆ. ಉದಾಹರಣೆಗೆ, ಹತ್ತೊಂಬತ್ತನೆಯ ಶತಮಾನದಲ್ಲಿ ಅಮೇರಿಕಾದ ವ್ಯಾಪಾರಸ್ತ “ಪಿಯರೇ ಬರ್ನಾರ್ಡ್” ವ್ಯಾಪಾರಕ್ಕೆಂದು ಭಾರತಕ್ಕೆ ಬಂದು ಭಾರತದಿಂದ “ತಂತ್ರ” ವಿಜ್ಞಾನವನ್ನು ಅಮೇರಿಕಾ ದೇಶಕ್ಕೆ ಕೊಂಡೊಯ್ದು ಅಲ್ಲಿಯ ಪ್ರಜೆಗಳಿಗೆ ತಂತ್ರ ಮತ್ತು ಕಾಮ ಸಮೀಕರಣದ ಕಲ್ಟ್ ಅಥವ ಪಂಥವನ್ನು ಹುಟ್ಟುಹಾಕಿದ ಎಂಬುದು ಇತಿಹಾಸ. ಇದೇ ತರಹ ಆಚಾರ್ಯ ರಜನೀಶ್ ಅವರು ಅಮೆರಿಕದ ಒರೆಗಾನ್ ರಾಜ್ಯದಲ್ಲಿ “ಓಷೋ” ಪಂಥವನ್ನು ಹುಟ್ಟುಹಾಕಿದ್ದರ ವಿಷಯ ತಿಳಿದಿರುವ ವಿಚಾರ.

“ನಿಕೊಲಾಸ್ ರೆಷರ್ (1928 – 2024)” ಅಮೇರಿಕದ ತತ್ವಶಾಸ್ತ್ರಜ್ಞ ಮತ್ತು ಬಹುಶ್ರುತ ವ್ಯಕ್ತಿತ್ವ ಹೊಂದಿದ್ದ ಇವರು ಪ್ರಮಾದವನ್ನು ಕುರಿತು “ಮಾನವನಿಗೆ ಕೇವಲ ಯಾವುದೋ ವಿದ್ಯಮಾನ ಸಾಕಾಗುವುದಿಲ್ಲ, ಆ ಘಟನೆ ಅವನ ಯೋಚನೆಗೆ ಅಥವ ನಂಬಿಕೆಗೆ ಸರಿಸಾಟಿಯಾಗಿ ಇರಬೇಕು, ಹಾಗೆಯೆ ದೋಷಗಳನ್ನು ಅವನ ಸ್ವಂತ ಜ್ಞಾನ ಮಿಮಾಂಸೆಯಲ್ಲಿ ಪರಿಗಣನೆಗೆ ತಂದು ಸರಿಯಾಗಿ ಯೋಚಿಸಬೇಕು”.
ಈ ರೀತಿ ತತ್ವ ಜ್ಞಾನಿ ತಿಳಿಸಿದಂತೆ ಆಕೆ ಅವಳ ದೋಷವನ್ನು ತನ್ನ ಪ್ರಜ್ಞೆಯ ಒಳಗೆ ನೋಡಿದ್ದರೆ ಅಲ್ಲೇ ಆಕೆಗೆ ಈಶ್ವರ ಪ್ರತ್ಯಕ್ಷನಾಗುತ್ತಿದ್ದ. ಆ ಹೆಂಗಸಿನ ಪ್ರಮಾದ ಶಿವನನ್ನು ತನ್ನ ಕಣ್ಣುಗಳಲ್ಲಿ ತುಂಬಿಸಿಕೊಳ್ಳುವುದು. ಶಿವನನ್ನು ನೋಡುವದು ಅಷ್ಟು ಸುಲಭವೇ?
ಇದನ್ನು ಓದಿ: “ಶಿವ – ಪಾರ್ವತಿ – ಸ್ಕಿಜೋಫ್ರೇನಿಯ ಮತ್ತು ಕೆಟಟೋನಿಯಾ”
“ಶಿವ” ಮತ್ತು “ಪಾರ್ವತಿ” ಯರ ಅನುಬಂಧ ಪವಿತ್ರ ಪ್ರೇಮದ ಸಂಕೇತ. ಕುಲ ಉದ್ಧಾರಕರಾದ ಮಹಾ ಶಿವ ಮತ್ತು ಶಕ್ತಿ ಪಾರ್ವತಿಯರನ್ನು ಯಾರು ಕಾಮನೆ ದೃಷ್ಟಿಯಿಂದ ನೋಡುವುದಿಲ್ಲ. ಹೇಳಬೇಕೆಂದರೆ “ತಂತ್ರ” ವಿಜ್ಞಾನದಲ್ಲಿ “ಕಾಮ” ಎನ್ನುವ ಪದಕ್ಕೆ ಸ್ಥಳವಿಲ್ಲ. ಹೀಗಿರುವಾಗ ಪ್ರೀತಿ ಅಥವ ಪ್ರೇಮದ ವಾಖ್ಯಾನ ಏನು? ಪರಮ ಶ್ರೀ ಸ್ವಾಮಿ ವಿವೇಕಾನಂದರು ಪ್ರೇಮವನ್ನು ಕುರಿತು “ಪ್ರೇಮ ಎಂಬುದು ನಿಸ್ವಾರ್ಥ ಮತ್ತು ಔದಾರ್ಯ ಗುಣಗಳನ್ನು ಹೊಂದಿರುವ ಅಂಶ ” ಎಂದು ಹೇಳಿದ್ದರು. ನನಗೆ ಕಾಡುವ ವಿಷಯ, ಹಿಂದಿನ ಪ್ರೀತಿ, ಪ್ರೇಮ, ವಿಶ್ವಾಸ, ಭರವಸೆ ಮತ್ತು ನಂಬಿಕೆಗಳು ಇಂದಿನ ಯಾಂತ್ರಿಕ ಬದುಕಿನ ದಿವಸಗಳಲ್ಲಿ ಕಾಣುವುದೇ? ಈಗ ಎಲ್ಲರೂ ಓಡುವರೇ ಆಗಿದ್ದಾರೆ. ಭೌತಿಕ ಬದುಕಿನ ಹಿಂದೆ ಬಿದ್ದಿದ್ದಾರೆ. ಸ್ಥಳ ಇಲ್ಲ ಮತ್ತು ಸಮಯ ಸಾಕಾಗುವುದಿಲ್ಲ. ಯೋಚನೆಗಳು ಬರದು. ಆತ್ಮ ಸಾಕ್ಷಿಯು ಬದುಕಿ ಉಳಿದಿಲ್ಲ. ತಾಳ್ಮೆ ಮತ್ತು ಸೈರಣೆಗಳನ್ನು ಹುಡಕಬೇಕು. ಅರ್ಥಗಳು ಸ್ಮಶಾನ ಸೇರಿವೆ. ಸುಳ್ಳೆಂಬುದು ಸರ್ವ ವ್ಯಾಪ್ತಿ ಆಗಿದೆ. ಹೀಗಿರುವಾಗ ಯಾವ ಪ್ರೇಮ, ಯಾವ ಪ್ರೀತಿ, ಯಾವ ಆನಂದ? ಇದರಿಂದ ಗಂಡಸು ನಿಮಿರುವಿಕೆಯ ಬಾಧೆ ಮತ್ತು ಹೆಣ್ಣಿಗೆ ತಣ್ಣನೆಯ ಅನುಭವ ಆಗುತ್ತಿವೆ.
ಇದನ್ನು ಓದಿ: “ಮಹಿಳೆ – ಚಾರ್ಲ್ಸ ಡಾರ್ವಿನ್ – ಓಶೋ – ಮುಕ್ತಾನಂದ”
ಹದಿನಾಲ್ಕನೆಯ ಶತಮಾನದಲ್ಲಿ ಹೆಣ್ಣು ಮತ್ತು ಗಂಡು, ಎರಡು ಲಿಂಗಗಳನ್ನು ಸೇರಿಸಿ ಲ್ಯಾಟಿನ್ ಭಾಷೆಯಲ್ಲಿ “ಸೆಕ್ಸುಸ್” ಪದ ಬಳಕೆಗೆ ಬಂತು. ಇದೇ ಲ್ಯಾಟಿನ್ ಭಾಷೆಯಲ್ಲಿ “ಸಿಕೋ” ಅಂದರೆ ವಿಭಜಿಸು ಎಂದರ್ಥ. ಕೊನೆಗೆ “ಸೆಕ್ಸ್” ಅರ್ಥಾತ್ ಮೇಲ್ ಮತ್ತು ಫೀಮೇಲ್ ಸೆಕ್ಸ್ (ಲಿಂಗ) ಎನ್ನುವ ಪದ ಬಳಕೆಗಳು ಬಂದು, ಅಂದಿನಿಂದ ಮಿಲನವನ್ನು “ಸೆಕ್ಸ್ ಅಥವ ಕಾಮ” ಎಂದು ಕರೆಯುತ್ತಾ ಬಂದಿದ್ದಾರೆ.

“ತಂತ್ರ” ದ ತಿರುಳು, ಶಿವನ ಪ್ರಜ್ಞೆಯಿಂದ ಸೂಸಿದ ತೇಜಸ್ಸು ಮತ್ತು ಹೊರಬಂದ ರೇತಸ್ಸನ್ನು ಶಕ್ತಿಯೆಂಬ ಮಹಾ ತಾಯಿಯ ಧಾರಣೆ ಇಂದ ಹೊರ ಸಂಕುಲನ ಹೊರ ಹೊಮ್ಮಿವೆ ಎಂದು ತಂತ್ರ ಗ್ರಂಥಗಳಲ್ಲಿ ತಿಳಿಸಲಾಗಿದೆ.
ಮನೋವಿಜ್ಞಾನದಲ್ಲಿ ಇದೇ ಸಾರಂಶವನ್ನು ನಾನು ತಿಳಿಸುವ ಪ್ರಯತ್ನ ಮಾಡುವೆ. ಭಗವಾನ್ ಗೌತಮ “ಬುದ್ಧ” ತನ್ನ ಬೌದ್ಧ ತಂತ್ರ ಶಾಸ್ತ್ರಗ್ರಂಥದಲ್ಲಿ “ವಿಶ್ವ ಮಹಾನ್ ಚೇತನದ ಹರಿವು ಆಗಿದೆ. ಈ ಹರಿವನ್ನು ಇಂದ್ರಿಯ ಸಲಕರಣೆಗಳಿಂದ ವಿವೇಕಿಸಿ ಗ್ರಹಿಸಿ ಧಾರಣೆ ಮಾಡಬೇಕು. ಇಂತಹ ಧಾರಣೆ ಮಾಡಿದ ಶಕ್ತಿಯನ್ನು ಮನೋ ಉಪಕರಣಗಳಿಂದ ಸಂಯೋಜಿಸಿ ತಾರ್ಕಿಕ ಅರ್ಥಗಳನ್ನು ಪಡೆದು ಸರಿಯಾದ ರೀತಿಯಲ್ಲಿ ಉಪಯೋಗಿಸಬೇಕು”. ಸರಳವಾಗಿ ಈ ಸಮೀಕರಣ ಹೇಳಬೇಕೆಂದರೆ “ಗ್ರಹಿಕೆ + ಧಾರಣೆ = ಅರ್ಥ”.
ಮುಂದುವರಿಯುವುದು….
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

