ಫ್ರಾನ್ಸ್ನ ಶಸ್ತ್ರಚಿಕಿತ್ಸಕ ಮತ್ತು ಜೀವ ಶಾಸ್ತ್ರಜ್ಞ “ಡಾಕ್ಟರ್ ಅಲೆಕ್ಸ್ ಕಾರೇಲ್ (1873 – 1944) ಶಸ್ತ್ರ ಜೀವ ಶಾಸ್ತ್ರದಲ್ಲಿ ಹಲವಾರು ನಾವೀನ್ಯತೆ (ಹೊಸ ವಿಚಾರಗಳು) ಹೊಂದಿದ್ದ ಇವರು ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಹೆಸರು ಮಾಡಿದ್ದ ವೈದ್ಯರು. ವೈದ್ಯ ಗ್ರಂಥಗಳಿಗೆ “ರಕ್ತ ನಾಳಗಳಿಗೆ ಶಸ್ತ್ರ ಚಿಕಿತ್ಸೆಯ ಹೊಲಿಗೆ” ವಿಚಾರದ ಪ್ರಬಂಧ ಮಂಡಿಸಿದಕ್ಕೆ 1912 ನೆ ಇಸವಿಯಲ್ಲಿ ನೊಬೆಲ್ ಬಹುಮಾನದ ಭಾಜಕರು ಆಗಿದ್ದರು. ಇವರು ಸಂಶೋಧಕರಲ್ಲದೆ ಕೆಲವು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಅವುಗಳಲ್ಲಿ “ಮ್ಯಾನ್ ದ ಅನ್ ನೋನ್ (ತಿಳಿಯದ ಅಸಾಧ್ಯ ಮಾನವ) ಸಹ ಒಂದು. ನಾನು ಬರೆದಿರುವ “ತಂತ್ರ ಮತ್ತು ಪ್ರಪಂಚದ ಭವಿಷ್ಯ” ಶಿರೋನಾಮದ ಸತ್ಯತೆಯ ಬಗ್ಗೆ ಆಯ್ದ ಭಾಗವನ್ನು ವಿವರಿಸುವೆ..

“ಮಾನವ ತನ್ನ ಬದುಕಿನಲ್ಲಿ ಒಳ್ಳೆಯವರು ಮತ್ತು ದರುಳರ ನಡುವೆ ವೆತ್ಯಾಸ ತಿಳಿಯದೆ ಮೂರ್ಖ ಆಗುತ್ತಿದ್ದಾನೆ. ಅವನು ಎಷ್ಟೇ ಬುದ್ದಿವಂತ ಮತ್ತು ಶ್ರದ್ದೆಯಿಂದ ಇರಬಹುದು, ಆದರೆ ವಿವೇಕ ತನದಿಂದ ಬದುಕನ್ನು ಸಾಗಿಸಬೇಕು. ಹೆಂಗಸೊಬ್ಬಳು ತನ್ನ ಮಕ್ಕಳನ್ನು ಮುಂದೆ ತರುವುದಕ್ಕೆ ತನ್ನ ಇಡೀ ಜೀವಮಾನವನ್ನು ಮುಡಿಪಾಗಿಟ್ಟರೂ ಆಕೆ ‘ಮಂದ ಬುದ್ದಿ’ ಉಳ್ಳವಳು ಎಂಬುದಾಗಿ ಚುಡಾಯಿಸುವುದನ್ನು ಬಿಡುವುದಿಲ್ಲ. ಇಂದು ಸುಂದರವಾದ ಚಿತ್ರಕಲೆಯ ಚಿತ್ರ ಕಲಾಕಾರರು ಇವತ್ತೂ ಸಹ ಬಡವರಾಗಿ ಬದುಕುತ್ತಿದ್ದಾರೆ. ನಮ್ಮ ಏಳಿಗೆಯ ಕಾರಾಣ ಕರ್ತರಾದ ವಿಜ್ಞಾನಿಗಳನ್ನು ಯಾರು ನೆನೆಯುವುದೇ ಇಲ್ಲ. ಸುಲಿಗೆ, ದರೋಡೆ, ಲೂಟಿಗಾರರಿಗೆ ಇಂದಿನ ರಾಜಕಾರಿಣಿಗಳು ಇಲ್ಲದ ರಕ್ಷಣೆ ಕೊಡಿಸುತ್ತಾರೆ. ನಮಗೆ ರಕ್ಷಣೆ ಕೊಡುವ ಅರಕ್ಷಕರು ಕಳ್ಳರಿಗೆ ಸಹಾಯ ಹಸ್ತ ನೀಡಿದರೆ ಮುಗ್ಧರ ಕತೆ ಏನು? ನಮಗೆ ನ್ಯಾಯ ಒದಗಿಸುವ ನ್ಯಾಯಾಧೀಶರ ಲಂಚ ನಡೆಗೇಡಿತನಕ್ಕೆ ಸಾಮಾನ್ಯ ಪ್ರಜೆ ಎಲ್ಲಿಗೆ ಹೋಗಬೇಕು?

ಇಂದು ಬಡವ ಮತ್ತು ಹಣವಂತರ ಕಂದಕ ದಿನೇ ದಿನೇ ಅಗಲವಾಗುತ್ತಿದೆ. ಹಣವಂತ ತನ್ನ ಹೆಂಡತಿಯನ್ನು ಸಲೀಸಾಗಿ ವಿಚ್ಛೇದನ ನೀಡಬಹುದು ಆದರೆ ಬಡವ ಮಾಡಿದರೆ ಅದು ಧರ್ಮದ ವಿರುದ್ಧವಾಗಿ ಇರುತ್ತೆ. ಪ್ರಜೆಗಳು ಕೂಡಿಟ್ಟಿರುವ ಹಣ ವಂಚಕರ ಪಾಲು ಆಗುತ್ತಿವೆ. ನಮ್ಮ ಕಾನೂನು ಮತ್ತು ಸುವ್ಯವಸ್ತೆ ಅಪರಾಧಿಗಳಿಗೆ ಮತ್ತು ದುಷ್ಕರ್ಮಿಗಳಿಗೆ ಅಡ ಇಟ್ಟಿರುವ ಹಾಗೆ ಇದೆ. ಮಾನವೀಯತೆಯ ದೃಷ್ಟಿಯಿಂದ ದೇಶಗಳು, ವಲಸಿಗರಿಗೆ ಸ್ಥಳವನ್ನು ನೀಡಿದ್ದಾದರೂ ಧರ್ಮದ ಹೆಸರಲ್ಲಿ ಅವರು ಭಯೋತ್ಪಾದಕರಾಗಿದ್ದಾರೆ…”
ಹೀಗೆ ಡಾಕ್ಟರ್ ಅಲೆಕ್ಸ್ ಕಾರೇಲ್ “ಸತ್ಯ” ದ ಬಗ್ಗೆ ನುಡಿದಿದ್ದಾರೆ. ತಂತ್ರ ಸಮೀಕರಣದ ಒಂದು ಅಂಗವಾದ “ಮಂತ್ರ” ಮತ್ತು ಆತ್ಮಸಾಕ್ಷಿ ಕ್ಷೀಣಿಸುತ್ತಿದಯೇನೊ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ನನ್ನದೇ ಆದ ಒಂದು ಧ್ಯಾನ ಸೂತ್ರದ ಬಗ್ಗೆ ವಿವರಣೆ ನೀಡುವ ಪ್ರಯತ್ನ ಮಾಡುವೆ. ಈ ಯಾಂತ್ರಿಕ ಜೀವನದ ದಿನಗಳಲ್ಲಿ ಪ್ರೇಮ ಪ್ರೀತಿಗಳೆ ಕಾಣದೇ ಇರುವ ಸಮಯದಲ್ಲಿ ನಮ್ಮನ್ನು ನಾವೇ ನೋಡಿಕೊಳ್ಳುವ ಸಾಧನ (ವಸ್ತು) ಎಂದರೆ “ಕನ್ನಡಿ”. ಕನ್ನಡಿಯ ಮುಂದೆ ನಿಂತಾಗ ನಮ್ಮ ಬಿಂಬ ಪ್ರತಿಫಲನ ಆದರೂ, ಅಸತ್ಯವಾದದ್ದು. ಹೀಗಿದ್ದಾಗ ಸತ್ಯ ಯಾವುದು? ಆತನ ಬೆತ್ತಲೆಯ ತನ. ಶರೀರದ ನಗ್ನತೆ ಅಲ್ಲ, ಮನಸ್ಸಿನ ನಗ್ನತೆ. ಆದುದರಿಂದ ಕನ್ನಡಿಯ ಮುಂದೆ ನಿಂತಿರುವನು ಬೆತ್ತಲೆ (ಪಾರದರ್ಶಕ) ಆಗಿ ನಿಂತರೆ ತನ್ನ ಮನಸ್ಸಿನ ಧನಾತ್ಮಕ ಮತ್ತು ಗುಣಾತ್ಮಕ ಕೋಣೆಗಳನ್ನು ಹುಡುಕಿ ನೋಡಬೇಕು. ಧನಾತ್ಮಕ ಕೋಣೆಗಳಿಗೆ ಸ್ವಿಚ್ ಆನ್ ಮಾಡಿ ಬೆಳಕಿನಿಂದ ಬೆಳಿಗಿಸಬೇಕು. ಈ ಪ್ರಯತ್ನ ಮಾಡುವುದರಿಂದ ಧನಾತ್ಮಕ ಸಾರಗಳನ್ನು ಉಜ್ವಲ ಭವಿಷ್ಯದ ಕಡೆ ತೆಗೆದುಕೊಂಡು ಹೋಗಬಹುದು. ಈ ನಿರೂಪಣೆ ನನ್ನದೇ ಆದ ಧ್ಯಾನಾವಸ್ತೆ.

ನಾನು ನನ್ನ ಅನಂತ ಯೋಚನೆಗಳಲ್ಲಿ ಮುಳುಗಿದ್ದಾಗ ಬರೆದ ಕವನ ಇದು
ಕನ್ನಡಿ
ಎಲವೋ ಕನ್ನಡಿಯೇ… ನಿನ್ನ ಎದರು ಕಂಡೆ ನನ್ನ ನಗ್ನತೆಯಾ…
ಕಂಡೆ ಕರಗದ ವಿಕೃತಗಳ ನಿನ್ನ ಅಂತರಾಳದ ಅನಂತಗಳಲ್ಲಿ…
ನೋಡಿದಷ್ಟು ನಿರಂತರ ವಿಕಲ್ಪ ಮೂಲೆ ಮೂಲೆ ಗೂಡುಗಳು…
ಒಳೆಗೆಲ್ಲಾ ಬೆಳಕು ಕತ್ತಲು, ತಲ್ಲಣಗಳು ಕಂಡವು ಸಾಲು ಸಾಲು..
ಬೆಳಕಿನ ಮುಂದೆ ಸ್ವರ್ಗ, ಕೆದಿಕಿದಷ್ಟು ಗೂಂದಲಗಳ ಸಗಟುಗಳು..
ಕತ್ತಲೆಯ ಮುಂದೆ ನರಕ, ನೋಡಿದಷ್ಟು ರಕ್ತಸಿಕ್ತ ಒಗಟುಗಳು..
ಭಾವನೆಯ ಹರಿತಕ್ಕೆ ಪರ ಭಾವನೆ ಚೂರು ಚೂರು..
ಯೋಚನೆ ಕೆನ್ನಾಳಿಗೆಯ ಬೆಂಕಿಗೆ, ಅವಲಂಬನೆಗಳು ಹವನ ಹೋಮ..
ನೆಡೆಯಲಿ, ತೋರದೇ ಅಡಗಿರುವ ತಂತ್ರಗಳಿಂದ, ಬೆಸೆಯುವ ಕಾರ್ಯಗಳು..
ಮನಸ್ಸಿನ, ಅರಿಯದೇ ಇರುವ ಇಚ್ಚೆಗಳ ಧಗೆಗೆ, ಆರಿಸುವ ಪ್ರಯತ್ನ
ಎಲವೋ ಕನ್ನಡಿಯೇ…. ನಿನ್ನ ಎದರು ಕಂಡೆ ನನ್ನ ನಗ್ನತೆಯ…
ಕಂಡೆ ಕರಗದ ವಿಕೃತಗಳ ನಿನ್ನ ಅಂತರಾಳದ ಅನಂತಗಳಲ್ಲಿ…
ನಮ್ಮ ದೇಶದ ಗಣಿತಜ್ಞ “ಆರ್ಯಭಟ್ಟ” ಶೂನ್ಯ ಕಂಡುಹಿಡಿದರೂ ಅಗಣಕ ಭಗವಾನ್ ಗೌತಮ ಬುದ್ಧ ಬೋಧಿಸಿದ ಶೂನ್ಯದ ಒಳಗಿನ ವಿಷಯ ವಸ್ತು ಅಪಾರ. ಯಾವುದೇ ಗಟ್ಟಿ ಲೋಹವನ್ನು ಹೊಕ್ಕಾಗ ತನ್ನ ಶೂನ್ಯದ (ಪರಮಾಣು) ಒಳಗಿನ ಕಣಗಳ ಯಂತ್ರಗಾರಿಕೆಯಿಂದ ನಾವು ಕಬ್ಬಿಣ, ತಾಮ್ರ, ಬೆಳ್ಳಿ, ಬಂಗಾರ ಹೀಗೆ ಲೋಹಗಳನ್ನು ವಿಂಗಡಿಸುತ್ತೇವೆ. ಹಾಗೆಯೇ ಪ್ರಪಂಚವನ್ನು ಸದೃಢಗೊಳಿಸಬೇಕಾದರೆ ಮಾನವ ವಿಕಾಸತೆಯನ್ನು ಹೊಂದ ಬೇಕು. ಅವನ ದೃಷ್ಟಿ ಯಾಂತ್ರಿಕ ಬದುಕು ಅಲ್ಲದ ತಂತ್ರಜ್ಞಾನದ ಕಡೆ ವಾಲಬೇಕು. ತನ್ನ ಮನಸ್ಸನ್ನು ಮಂತ್ರ ಮುಗ್ಧನಾಗಿಸಬೇಕು. ಹೀಗೆ ವಿನ್ಯಾಸ ಆದ ಮಾನವ ಮರುವಿನ್ಯಾಸಕ್ಕೆ ಒಳಗಾಗಿ ಬೇಜವಾಬ್ದಾರಿ ತನದಿಂದ ಜವಾಬ್ದಾರಿಯುತನಾಗುತ್ತಾನೆ.
ತಂತ್ರ ಸಮೀಕರಣದ ಮೂಲ ಉದ್ದೇಶವೇ ಅಭಿವೃದ್ಧಿ… ಆದರೇ ಯಂತ್ರ “ಶರೀರ” ಮತ್ತು ಮಂತ್ರ “ಮನಸ್ಸು” ಎರಡನ್ನು ಸಮರೂಪ ಮತ್ತು ಸಮತೋಲನಗಳಿಂದ ಕಾಪಾಡಿಕೊಳ್ಳಬೇಕು.
ಅಮೇರಿಕ ದೇಶದ ಮುಖ್ಯ ನೌಕಾಪಡೆಯ ಅಧಿಕಾರಿ “ರೀಚರ್ಡ ಇ ಬೈರ್ಡ” (1888 – 1957) ಒಬ್ಬ ಮಹಾನ್ ಭೌಗೋಳಿಕ ಅನ್ವೇಷಣೆಗಾರ ಒಮ್ಮೆ ಉತ್ತರ ಧ್ರುವಕ್ಕೆ ಪ್ರಯಾಣ ಮಾಡಿದ್ದರು. ತಮ್ಮ ಗುಡಾರದ ಹೊರಗೆ ಬಂದು ಕಾಫಿ ಮಾಡಿಕೊಳ್ಳಲು ಹಿಮವನ್ನು ಶೇಕರಿಸುತ್ತಿದ್ದಾಗ ಅಲ್ಲಿಯ ಉಷ್ಣಾಂಶ -50 ತಾಪಮಾನ ಇತ್ತು. ಈ ಹಿಮ ಕರಗಲೇ ಇಲ್ಲ. ಅಲ್ಲಿಯ ಆ ಉಷ್ಣಾಂಶ ಅವರ ಮನಸ್ಸನ್ನು ಹೆಪ್ಪುಗಟ್ಟಿಸಿತ್ತು. ಹೆಪ್ಪುಗಟ್ಟುವಿಕೆಯಿಂದ ಮೌನ ಅವರನ್ನು ಆವರಿಸಿತ್ತು. ಅವರ ಅಂತರಾಳ ಮತ್ತು ಧ್ಯೇಯ ಬದುಕುವುದೇ ಆಗಿತ್ತು. ಅಂತಹ ಕೊರೆಯುವ ಚಳಿ ಮತ್ತು ಹೆಪ್ಪುಗಟ್ಟುವ ವಾತಾವರಣದಿಂದ ಬದುಕಿ ಉಳಿದು ಬರುತ್ತೇನೆ ಎಂಬ ವಿಶ್ವಾಸ ಅವರಿಗೆ ಇರಲಿಲ್ಲ. ಆದರೆ ಅವರ ಆತ್ಮ ವಿಶ್ವಾಸದ ನಂಬಿಕೆ ಅವರನ್ನು ಜಾಗೃತಗೊಳಿಸಿತ್ತು. ಆ ಸಮಯದ ಅವರ ಮೌನ ಅವರಿಗೆ ಅಸಾಧಾರಣವಾಗಿ ಕಂಡಿತ್ತು. ತಮ್ಮ ಹಿಮಗಟ್ಟುವ ವಾತಾವರಣದಲ್ಲಿ ಅವರಿಗೆ ಅನಿಸಿದ್ದ ಅದ್ಭುತ ವಿಚಾರವೆಂದರೆ, ಬದುಕಬೇಕು ಅಂತ ಬಂದಾಗ ನಮ್ಮ ಅಂತಸ್ತು, ನಮ್ಮ ಸಂಪತ್ತು, ನಮ್ಮ ಸಾಮರ್ಥ್ಯ, ನಮ್ಮ ಪ್ರತಿಷ್ಠೆ ಹಾಗು ನಮ್ಮ ಶೌರ್ಯ ಯಾವುದೂ ಕೆಲಸಕ್ಕೆ ಬರುವುದಿಲ್ಲ. ಅಂದಿನಿಂದ ಅವರು ಪರಿವರ್ತನೆಗೊಂಡು ಸರಳ ಜೀವನ ನಡೆಸಿ ಮತ್ತು ನಿಸ್ವಾರ್ಥ ಸೇವೆಗೆ ಮುಡಿಪಾಗಿಟ್ಟು ಜೀವತ ಕಾಲ ಬದುಕಿದ್ದರು ಎಂಬುದನ್ನು ಅವರ ಆತ್ಮಚರಿತ್ರೆಯ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಯಾರು ಮೌನದ ಅನ್ವೇಷಣೆಗೆ ಮುಂದಾಗುತ್ತಾರೋ ಅಂದು ಅವರಲ್ಲಿ ಪ್ರೀತಿ ಉದಯವಾಗುತ್ತದೆ. ಆಗ ಅವರುಗಳು ಪರಮಾನಂದ ಭಾವದ ಅನುಭೂತಿ ಪಡೆದು ಮನಸ್ಸಿನ ಪೂರ್ಣತೆ ಹೊಂದುತ್ತಾರೆ. ಇಂತವರ ಮನಸ್ಸು ಎಲ್ಲವನ್ನು ಸ್ವೀಕರಿಸುವಂತೆ ಪರಿವರ್ತನೆ ಹೊಂದಿ ತಿಳಿಯುವಂತರಾಗುತ್ತಾರೆ. ಸರಳವಾಗಿ ಹೇಳಬೇಕೆಂದರೆ ಅಂಬೆಗಾಲಿನ ಮಗು ತನ್ನ ಕೈಯಲ್ಲಿ ಚಮಚ ಹಿಡಿದ ಹಾಗೆ.
“ಮೌನವೇ ಅನುಭವ ದರ್ಶನಕ್ಕೆ ಪೂರಕ” ….. ಮೌನ ಮುನಿ
ಮುಂದವರಿಯುವುದು..
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

