ಮೂವತ್ತೈದು ವರ್ಷದ ಮೂರು ಮಕ್ಕಳ ಹಳ್ಳಿಯಿಂದ ಬಂದ ಹಂಗಸರೊಬ್ಬರನ್ನು ಆಕೆಯ ಯಜಮಾನರು ನನ್ನ ಕೊಠಡಿಗೆ ಕರೆದುಕೊಂಡು ಬಂದಿದ್ದರು. ಆಕೆಯನ್ನು ಹಲವಾರು ಮಾಟ, ಮಂತ್ರ, ದರ್ಗ, ದೇವಸ್ಥಾನಗಳಿಗೆ ಮತ್ತು ವೈದ್ಯರ ಹತ್ತಿರ ಕರೆದುಕೊಂಡು ಹೋಗಿದ್ದರೂ ಗುಣ ಪಡಿಸಲು ಸಾಧ್ಯವಾಗಲಿಲ್ಲ ಎನ್ನುವ ಕಾರಣಕ್ಕೆ ಕರೆದುಕೊಂಡು ಬಂದಿದ್ದರು. ಸಮಸ್ಯೆ ತಿಳಿಯುವ ಪ್ರಯತ್ನ ಪಟ್ಟಾಗ ಆಕೆ ತುಂಬಾ ನಾಚಿಕೆಯಿಂದ “ಗೊತ್ತಿಲ್ಲ ಡಾಕ್ಟ್ರೇ, ಹೇಗೆ ಹೇಳ್ಬೇಕು” ಅಂದಿದ್ದರು.
ಸಾಮಾನ್ಯವಾಗಿ ಜನ ಸಾಮಾನ್ಯರಿಗೆ ಜ್ಞಾನ ತಪ್ಪಿ ಬಿದ್ದು, ಮೂತಿ ಸೊಟ್ಟ ಆಗಿ ಬಾಯಲ್ಲಿ ನೊರೆ ಮತ್ತು ರಕ್ತ ಬಂದು ಕೈ ಕಾಲು ನಡುಕ ಬಂದರೆ ಅಪಸ್ಮಾರ ಅಥವ ಫಿಟ್ಸ್ ಕಾಯಿಲೆ ಎಂದು ತಿಳಿದಿರುವ ವಿಷಯ. ಪ್ರಪಂಚಾದ್ಯಂತ ಸಾವಿರ ಜನಕ್ಕೆ ನಾಲ್ಕರಿಂದ ಆರು ಜನರಿಗೆ ಈ ನರ ರೋಗ ಕಾಣಿಸಬಹುದು. ಈ ಕಾಯಿಲೆಗೆ ಅನೇಕ ಕಾರಣಗಳಿದ್ದು ವಂಶ ವಾಹಿನಿಯಿಂದ ಬರುವುದೇ ಹೆಚ್ಚು. ಭೂ ಕಂಪನದಂತೆ ಮೆದುಳಿನಲ್ಲಿ ವಿದ್ಯುತ್ತ್ ಕಂಪನ ಅಥವ ಹೆಚ್ಚು ವಿದ್ಯುತ್ತ್ ಹರಿವಿನಿಂದ ಅಲ್ಪ ಅಥವ ತಾತ್ಕಾಲಿಕ ಸಮಯಕ್ಕೆ ಬಂದು ನಿಲ್ಲುವ ನರ ರೋಗ ಇದು. ಆ ಸಂದರ್ಭದಲ್ಲಿ ಸುಮಾರು ಸಮಸ್ಯೆಗಳು ಉದ್ಭವಿಸಬಹುದು.

ತಲೆಗೆ ಪೆಟ್ಟು ಬೀಳಬಹುದು, ನಾಲಿಗೆ ಕಟ್ ಆಗಬಹುದು, ನೀರಿನಲ್ಲಿ ಮುಳುಗಬಹುದು, ಅಪಘಾತ ಆಗಬಹುದು, ಉಸಿರು ಕಟ್ಟಬಹುದು ಇತ್ಯಾದಿ. ಈ ರೋಗವನ್ನು “ಸಾಮಾನ್ಯ ಅಪಸ್ಮಾರ” ಎಂದು ಕರೆಯುತ್ತಾರೆ. ಈ ಅಪಸ್ಮಾರಗಳಲ್ಲಿ ಬೇಕಾದಷ್ಟು ತರಹದ ಅಪಸ್ಮಾರ ಕಾಯಿಲೆಗಳನ್ನು ಕಾಣಬಹುದಾಗಿದೆ. ಅಂತಹ ಅಪಸ್ಮಾರಗಳಲ್ಲಿ ಅಪರೂಪದಲ್ಲಿ ಅಪರೂಪ ಎನ್ನಬಹುದಾದ “ಪಾರ್ಷಿಯಲ್ ಕಾಂಪ್ಲೆಕ್ಸ್ ಸೀಜರ್ಸ್”. ಸಾಮನ್ಯ ಅಪಸ್ಮಾರದಲ್ಲಿ ಮೆದುಳೆಲ್ಲಾ ವಿದ್ಯುತ್ತ್ ಹರಿಯುವುದು. ಆದರೆ ಪಿ ಸಿ ಎಸ್ ಕಾಯೆಲೆಯಲ್ಲಿ ಒಂದು ಅಥವ ಅಕ್ಕ ಪಕ್ಕ ಕೇಂದ್ರ ಬಿಂದುಗಳಲ್ಲಿ ಮಾತ್ರ ವಿದ್ಯುತ್ತ್ ಹೆಚ್ಚು ವ್ಯಾಪಿಸಿ ಆ ಕೇಂದ್ರ ಬಿಂದುವಿನ ಅಥವ ಬಿಂದುಗಳ ಶರೀರ ನಿರ್ವಹಣೆಯ ಕಾರ್ಯಗಳು ಕ್ಷಣ ಕಾಲ ಸ್ಥಗಿತ ಅಥವ ಅ ಬಿಂದುಗಳ ಏರುಪೇರಿನ ಲಕ್ಷ್ಮಣಗಳನ್ನು ಕಾಣಬಹುದು.
ಉದಾಹರಣೆಗೆ ಮಾತು ಕೇಳಿಸಿಕೊಳ್ಳುವ ಮತ್ತು ಮಾತನಾಡುವ ಕೇಂದ್ರ ಬಿಂದುವಿನ ಹೆಸರು “ಬ್ರೋಕಾಸ್ ಏರಿಯಾ”. ಕೆಲವರಿಗೆ ಈ ಜಾಗದಲ್ಲಿ ರಕ್ತ ಹೆಪ್ಪುಗಟ್ಟಿದರೆ ಮಾತನಾಡುವ, ಕೇಳಿಸಿಕೊಳ್ಳುವ, ಹೆಸರಿಸುವ ಕಾರ್ಯಗಳು ನಿಂತುಹೋಗುತ್ತವೆ. ಈ ಜಾಗದಲ್ಲಿ ಅಪಸ್ಮಾರ ಉಂಟಾದಾಗ ಒಂದರಿಂದ ಎರಡು ಸಕೆಂಡು ಅರೆ ಜ್ಞಾನ ಅಥವ ಪೂರ್ತಿ ಜ್ಞಾನ ಹೋಗದೆ (ನೆಲಕ್ಕೆ ಬೀಳುವುದಿಲ್ಲ) ಅರ್ಥ ಇಲ್ಲದಂತೆ ಮಾತನಾಡುವುದು, ಕಣ್ಣು ದಿಟ್ಟಿಸಿ ನೋಡುವುದು, ಲೊಚಗುಟ್ಟುವುದು, ನುಂಗುವ ಶಬ್ದ ಮಾಡುವುದು, ಗುರಿ ಇಲ್ಲದ ನಡುವಳಿಕೆಗಳು ಇತ್ಯಾದಿ ಹತ್ತಾರು ಗುಣ ಲಕ್ಷಣಗಳನ್ನು ಕಾಣಬಹುದು.

ಈ ರೀತಿಯ ಅಪಸ್ಮಾರವು ಟೆಂಪೊರಲ್ ಲೋಬ್ ಜಾಗದಿಂದ ಆಗುವುದಕ್ಕೆ “ಟೆಂಪರಲ್ ಲೋಬ್ ಎಪಿಲೆಪ್ಸಿ” ಎಂದು ಕರೆಯುತ್ತಾರೆ. ಇದೇ ತರಹ ಕಾಮ ಪ್ರಚೋದನೆ, ಕಾಮ ಭಾವನೆ ಮತ್ತು ಕಾಮ ತೃಷೆಗೆ ಮೆದುಳಿನ ಟೆಂಪರಲ್ ಲೋಬ್ ಪ್ರದೇಶದಲ್ಲಿ “ಆರ್ಗಾಸಮ್” ಬಿಂದು ಇರುತ್ತದೆ. ಇಲ್ಲಿಂದ ವಿದ್ಯುತ್ತ್ ಹರಿವು ಜಾಸ್ತಿ ಆದಾಗ “ಆರ್ಗಾಸ್ಮಿಕ್ ಎಪಿಲೆಪ್ಸಿ” ಬರುತ್ತೆ ಎಂದು ಹೇಳುತ್ತಾರೆ. ಈ ಅಪಸ್ಮಾರವು ಸುಮಾರು ಹತ್ತು ಲಕ್ಷ ಜನರಲ್ಲಿ ಒಬ್ಬರಿಗೆ ಇರಬಹುದೇನೊ ತಿಳಿಯದು. ನನ್ನಲ್ಲಿ ಬಂದಿದ್ದ ಆ ನತದೃಷ್ಟ ಹೆಂಗಸು ಈ ಸಮಸ್ಯೆಯಿಂದ ಬಳಲುತ್ತಿದ್ದಳು.
“ವಾತ್ಸಾಯಾನನ್ನು ಸ್ವಾಗತಿಸೋಣ”
ಯಾಂತ್ರಿಕ ಬದುಕಿನಲ್ಲಿ ಸಂಬಂಧಗಳು ಪಾತಾಳ ಸೇರುತ್ತಿವೆ. ಸಂಬಂಧಗಳ ಅರ್ಥಗಳು ಅನರ್ಥಗಳಾಗುತ್ತಿವೆ. ಮನುಷ್ಯನ ಕಾಮನೆಗಳು ಹಣ, ಅಂತಸ್ತು ಮತ್ತು ಐಶ್ವರ್ಯ ಕಡೆ ಜಾರುತ್ತಿದೆ. ಮಾನವ ಇಂದು ರೋಬೋಟ್ ಆಗಿ ಪರಿವರ್ತನೆ ಆಗಿದ್ದಾನೆ. ಹಾಗೆಯೇ ಅವನ ಕಾಮ ಮನೋ ಆಕಾಂಕ್ಷೆಗಳು “ಸೆಕ್ಸ್ಬೋಟ್” ಅಥವ “ಸೆಕ್ಸ್ ಟಾಯ್ಸ” ಕಡೆ ಕೇಂದ್ರೀಕರಿಸುತ್ತಿದ್ದಾನೆ. ತಂತ್ರಜ್ಞಾನದಿಂದ ಆವಿಷ್ಕಾರ ಆದ “ವರ್ಟ್ಯುಲ್ ಕಾಮಕೇಳಿ” ಬೀದಿ ಬೀದಿ, ಗಲ್ಲಿ ಗಲ್ಲಿಗಳಿಗೆ ತನ್ನ ಟೆಂಟಕಲ್ಸ ಚಾಚುತ್ತಿವೆ.
ಸಾರ್ವತ್ರಿಕವಾಗಿ ಕಾಮ ಮಾನವನಿಗೆ “ಹಿನ್ನುಡಿ”, ಅದೇ ತರಹ ಕಾಮ ಮುಂದಿನ ಪೀಳಿಗೆಗೆ “ಮುನ್ನುಡಿ”. ಜನರ ತೃಷೆಗಳು ಶರೀರಕ್ಕೆ ಮಾತ್ರ ಮೀಸಲಾಗಿದೆ. ಮನಸ್ಸಿನ ತೃಷೆ ಇಲ್ಲದೆ ಮಾನವ ಜಡತ್ವವನ್ನು ಆಮಂತ್ರಿಸುತ್ತಿದ್ದಾನೆ. ಅತೀಂದ್ರಿಯ ನರ ಅಂತ್ಯಗಳು ಮಜ್ಜನವಿಲ್ಲದೆ ಬೇಗುದಿ ಅನುಭವಿಸುತ್ತಿದ್ದಾವೆ. ಮನುಷ್ಯನ ನರ ವ್ಯೂಹಗಳಲ್ಲಿ ವಿದ್ಯುತ್ತ್ ಹರಿವು ಸಮಯಕ್ಕೆ ತಕ್ಕಂತೆ ವೇಗ ಇಲ್ಲ. ಈ ಸಮಸ್ಯೆಗೆ ಸಾವಿರಾರು ಕಾರಣ. ಆ ಕಾಲಘಟ್ಟಕ್ಕೆ ಸರಿಯಾಗಿ ಸಮಸ್ಯೆಗಳು ಸಹಜ. ಆದರೆ ಮಾನವ ಇಂದು ಇಪ್ಪತ್ತೊಂದನೆಯ ಶತಮಾನದಲ್ಲಿ ಬದುಕುತ್ತಿದ್ದಾನೆ. ವಿವೇಕವುಳ್ಳವನಾಗಿದ್ದಾನೆ ಮತ್ತು “ಹೋಮೊ ಸಪಿಯನ್ (ವೈಸ್ ಮ್ಯಾನ್)” ಇಂದ “ಹೋಮೊ ಡಿಯಸ್ (ಗಾಡ್ ಮ್ಯಾನ್)” ಆಗುತ್ತಿದ್ದಾನೆ. ಆದರೂ ತನ್ನ ಲೈಫ್ ಸ್ಟೈಲ್ ಇಂದ ಹಾರ್ಮೋನ್ ಎರುಪೇರು ಆಗಿ ಅನೇಕ ಮನೋ ಸಮಸ್ಯೆಗಳಿಗೆ ಮತ್ತು ಫಲವತ್ತತೆಯ ಕಾಯಿಲೆಗಳಿಂದ ಅನುಭೋಗಿಸುತ್ತಿದ್ದಾನೆ.

ಈ ಸಂದರ್ಭದಲ್ಲಿ ಎರಡನೆ ಶತಮಾನದಲ್ಲಿ ಇದ್ದ ಕವಿ ವಾತ್ಸಾಯಾನನ್ನು ಸ್ವಾಗತ ಮಾಡಬಹುದು ಅಲ್ಲವೇ. ಅವರು ಬರೆದ ಕಾವ್ಯ ಸುಧೆ ಅನುರಾಗ, ಭಾವೋಧ್ವೇಗ, ಕಾಮೋದ್ರೇಕ, ಸಂಭ್ರಮ, ಉತ್ತೇಜನ ಹೀಗೆ ಹಲವಾರು ಸೂತ್ರಗಳು ಒಳಗೊಂಡಿವೆ. ನನ್ನ ವಿಷಯ ಇದಲ್ಲ. ನೀರಸ ಅಥವ ಕಾವಿಲ್ಲದ ಮನೋ ಚೇತನಗಳಿಗೆ ನನ್ನ ಶೀರ್ಷಿಕೆ “ವೆಲ್ಕಮ್ ವಾತ್ಸಾಯಾನ”. ಯಾರು ಸಹ ನನ್ನ ಹೇಳಿಕೆಯನ್ನು ಅಪಾರ್ಥ ಮಾಡಿಕೊಳ್ಳಬಾರದು ಮತ್ತು ಬೇರೆ ಅರ್ಥದಲ್ಲಿ ನೋಡಬಾರದು.
ತಂತ್ರ ಗ್ರಂಥಾನುಸಾರ “ಶಿವ” ಮೂಲ ಪುರುಷ. ಶಕ್ತಿ ದೇವಿ “ಪಾರ್ವತಿ” ಮಹಾ ಜನನಿ. ಯಂತ್ರ ವಿನ್ಯಾಸದ ಕೇಂದ್ರ ಬಿಂದುವಿನಿಂದ ಜೀವ ಪ್ರಾರಂಭ. ಜೀವ ನೆನ್ನೆ ಅಥವ ಮೊನ್ನೆಯದಲ್ಲ. ಸುಮಾರು ನಾಲ್ಕು ಬಿಲಿಯನ್ ವರ್ಷಗಳ ಹಿಂದೆ ಆದ ಮಹಾ ಸ್ಪೂಟದಿಂದ ಆದ ನಮ್ಮ ಭೂಮಿಯ ಮೇಲೆ ಜೀವಿಗಳು ನಿರಂತರವಾಗಿ ವಿಕಸತೆ ಆಗಿ ಕೊನೆಗೆ ಮಾನವನಾಗಿ ರೂಪಗೊಂಡಿದ್ದಾವೆ. ಈ ಮಾನವ ಜಡತ್ವವನ್ನು ಬಯಸಿದರೆ ಮುಂದೆ “ಶಿವ” ನನ್ನು ನೆನೆಯುವರು ಯಾರು?
ಪ್ರಪಂಚದಲ್ಲಿ ಒಂದಲ್ಲಾ ಒಂದು ಕಡೆ ಭೂಕಂಪ, ಬಿರುಗಾಳಿ, ಪ್ರವಾಹ ಇತ್ಯಾದಿ ಕೇಳುತ್ತಿದ್ದೇವೆ ಮತ್ತು ದೃಶ್ಯ ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಮಾನವರಲ್ಲಿ ಜಡತ್ವ ಮುಂದಾಗಿ ಫಲವತ್ತತೆಯೇ ಇಲ್ಲವಾದರೆ ಇದು ಪ್ರಳಯ ಸಂಕೇತ ಅಲ್ಲವೇ?

“ತಂತ್ರ” ಮೂಲ ಉದ್ದೇಶ ಮನಸ್ಸಿನ “ಮಂತ್ರ“, ಇದರಿಂದ “ಯಂತ್ರ” ಚಾಲನೆ. ಸಂಸಾರದಲ್ಲಿ ಮಂತ್ರದ ಉದ್ದೇಶ ಬಾಂಧವ್ಯ. ಇಂತಹ ಬಂಧನದಲ್ಲಿ ಕೊಂಚ ತಾಳ್ಮೆ, ಸ್ವಲ್ಪ ಸಮಯ, ಅಲ್ಪ ಜಾಗ, ಪಾವಿತ್ರತೆ, ಅನುರಾಗ, ಉತ್ಸಾಹ, ಭಾವೋಧ್ವೇಗ, ಕಾಮೋದ್ವೇಗ ಮರಳಿ ತಂದರೆ ಮಾನವ ಕುಲ ಉತ್ತಮವಾಗಿ ಬೆಳೆಯುತ್ತದೆ ಎಂಬುದು ನನ್ನ ವೈಯಕ್ತಿಕ ಮನೋಭಾವ.
ನಾನು ಮೇಲೆ ತಿಳಿಸಿದ್ದ ಮಹಿಳೆಯರ ಸಮಸ್ಯೆ ಪಟ್ಟಣ ನಗರ ವಾಸಿ ಮಹಿಳೆಯರಲ್ಲಿ ಕಂಡುಬರುವ ಶೀತಲತೆಗೆ ಹೋಲಿಸಿದಾಗ ಮೇಲೆ ತಿಳಿಸಿದ ಆ ಹೆಂಗಸಿನ “ಆರ್ಗಾಸ್ಮಿಕ್ ಎಪಿಲೆಪ್ಪಸಿ” ಒಂದು ತರಹ “ಬ್ಲೆಸಿಂಗ್ ಇನ್ ಡಿಸ್ಗೈಸ್” ಅಲ್ಲವೆ? ಇದು ನನ್ನ ಸಾಂದಂರ್ಭಿಕ ವಾದ ಅಷ್ಟೆ. ಕೆಲವಾರು ವರ್ಷಗಳ ಅಪಸ್ಮಾರ ಔಷಾದೋಪಚಾರದಿಂದ ಆಕೆ ಗುಣಮುಖ ಆದಳು…
ಮುಂದಿವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ


[…] “ಅಪಸ್ಮಾರ – ಆರ್ಗಾಸ್ಮಿಕ್ ಎಪಿಲೆಪ್ಸಿ &… […]