ತಂತ್ರದ ಪಥ ಅಥವಾ ಮಾರ್ಗ ಹಲವಾರು ಇದ್ದರು ಚಾಲ್ತಿಯಲ್ಲಿರುವುದು ಕೆಲವು ಮಾತ್ರ. ಮೊದಲನೆಯದು ವಾಮ ಅಥವಾ ಎಡ ಮಾರ್ಗ. ಈ ಮಾರ್ಗ ನನ್ನ ಉದ್ದೇಶವಲ್ಲ. ಇನ್ನೊಂದು ಬಲ ಮಾರ್ಗ. ಈ ಪಥವನ್ನು ಮತ್ತೊಮ್ಮೆ ವಿಭಜಿಸಿದಾಗ “ಯೋಗ ಮಾರ್ಗ”, ಇನ್ನೊಂದು “ಅನ್ವೇಷಣೆ” ಯ ಮಾರ್ಗ. ವೇದಾಂತದಲ್ಲಿ ಮಾನವನನ್ನು ಮೂರು ಆಯಾಮಗಳಲ್ಲಿ ವಿಷ್ಲೇಶಿಸಿದ್ದಾರೆ.
ಒಂದು “ಸ್ಥೂಲ” ಶರೀರಕ್ಕೆ ಸಂಬಂಧ ಪಟ್ಟಿದ್ದು. ಎರಡನೆಯದು “ಸೂಕ್ಷ್ಮ”, ಮೂರನೆಯದು “ಕಾರಣ”. ಇವೆರಡು ಮನಸ್ಸಿಗೆ ಸೇರಿದ್ದು. ವಿಜ್ಞಾನಿ ಯಾವುದೇ ಸಂಶೋಧನೆಗೆ ಇಳಿದಾಗ ಆ ಸಂಶೋಧನಾ ಸೂಕ್ಷ್ಮತೆಗೆ ಪ್ರಶಂಸೆ ನೀಡಿದರೂ ಅನ್ವೇಷಣೆಯು ಅಲ್ಲಿಗೆ ನಿಲ್ಲುವುದಿಲ್ಲ. ಆ ವಿಜ್ಞಾನಿ ತನ್ನ ಅನ್ವೇಷಣೆಯ ಪಥದಲ್ಲಿ ಸಾಗಿ ಕಾರಣವನ್ನು ಹುಡುಕಿದಾಗ ಆತನು ಸಂತನಾಗುತ್ತಾನೆ. ಕಾರಣವನ್ನು ಹುಡುಕಿದರೂ ಇನ್ನೂ ಅಥವಾ ಮತ್ತಷ್ಟು ಕಾರಣವನ್ನು ಹುಡುಕುವ ಯತ್ನದಲ್ಲೆ ಇರುತ್ತಾನೆ. ಈ ಪಥ ದೇವರನ್ನು (ಕಾರಣ) ಹುಡುಕುವ ಮಾರ್ಗ.
ಭೂಮಿ, ಜೀವಿ, ನಿರ್ಜೀವಿ, ಮೂಲ ಧಾತು ಹೇಗೆ ಬಂದವು ಮತ್ತು ಈಗ ಅವುಗಳು ಇರುವುದರ ಬಗ್ಗೆ ಆಲೋಚನೆಗಳನ್ನು ಮಾಡಿದರೆ ಬುದ್ದಿ ಭ್ರಮಣೆ ಆಗುವುದು ನಿಶ್ಚಿತ. ಉದಾಹರಣೆಗೆ ಯುರೋಪಿನಲ್ಲಿ ಬಹು ದೊಡ್ಡ ಭೌತಿಕ ಪ್ರಯೋಗಾಲಯ ಇದೆ. ಇದರ ಕೆಲಸ ಉಪ ಪರಮಾಣುಗಳಿಂದ ಪರಮಾಣು ಹೇಗೆ ಸೃಷ್ಟಿ ಆಯಿತು ಎಂಬುದರ ಬಗ್ಗೆ. ಈ ಪ್ರಯೋಗಾಲಯದ ಹೆಸರು “ಲಾರ್ಜ್ ಹಾರ್ಡನ್ ಕೊಲ್ಲೈಡರ್”.
ಈ ಪ್ರಯೋಗಾಲಯದಲ್ಲಿ ಮೈಲಿಗಟ್ಟಲೆ ಇರುವ ಕೊಳುವೆಗಳಲ್ಲಿ “ಪ್ರೋಟಾನ್ ಕಣ” ವನ್ನು ಬೆಳಕಿನ ವೇಗಕ್ಕಿಂತ ವೇಗವಾಗಿ, ವಿರುದ್ಧ ದಿಕ್ಕಿನಲ್ಲಿ ಡಿಕ್ಕಿ ಹೊಡಿಸಿ ಈ ಹಿಂದೆ ನೆಡೆದ “ಬಿಗ್ ಬ್ಯಾಂಗ್” ಕಾಲದಲ್ಲಿ ಉಪಪರಮಾಣು ತರದ “ಹಿಗ್ಸ ಬಾಸಮ್ (ಗಾಡ್ ಪಾರ್ಟಿಕಲ್)” ಸಿಗುತ್ತಾ ಎನ್ನುವುದರ ಬಗ್ಗೆ ಸಂಶೋಧನೆ ನೆಡೆಯುತ್ತಾ ಇದೆ. ಈ “ಸರ್ವೇ” ಸಂಶೋಧನಾ ಕೇಂದ್ರದಲ್ಲಿ ಇಂತಹ ಕಣ ಇನ್ನೂ ಕಂಡಿಲ್ಲ. ಮುಂದೆ ಈ ಕಣವನ್ನು ಕಂಡುಹಿಡಿಯಬಹುದೇನೋ, ಕಾದು ನೋಡಬೇಕು. ಈ ಕಣ ಗೋಚರವಾದಾಗ ನಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬಹುದು ಎಂಬದು ನನ್ನ ಅನಿಸಿಕೆ.

ನಾವು ಎಷ್ಟೇ ಪ್ರಯತ್ನ ಮಾಡಿದರು ಹುಡುಕುವ ದೇವ “ಈಶ್ವರ” ಜಾರಿಕೊಳ್ಳುತ್ತಾನೆ. ಒಮ್ಮೆ ಒಬ್ಬ ಭಕ್ತ ಶಿವನನ್ನು ಹುಡುಕಿ ಹೊರಟ. ಶಿವ ಭಕ್ತನನ್ನು ಕುರಿತು “ನಾನು ಇಲ್ಲಿ ಇರುವೆ, ಕಾಣು” ಎಂದನಂತೆ. ಭಕ್ತನಿಗೆ ಇನ್ನೇನು ಈಶ್ವರನ ದರ್ಶನ ಸಿಗುತ್ತೆನ್ನುವ ಅತ್ಯಂತ ಆನಂದದಿಂದ ಈಶ್ವರ ಹೇಳಿದ್ದ ಸ್ಥಳಕ್ಕೆ ಬೇಟಿ ನೀಡಿದ ಆದರೆ ಈಶ್ವರ ಅಲ್ಲಿ ಇಲ್ಲ. ಮತ್ತೆ ಭಕ್ತ ಈಶ್ವರನನ್ನು ಬೇಡಿಕೊಂಡಾಗ ಮತ್ತೊಂದು ಸ್ಥಳ. ಹೀಗೆ ಅವನ ಪ್ರಯಾಣ ಮುಗಿಯದ ಪ್ರಯಾಣವಾಯಿತು.
ತಂತ್ರಾನುಸಾರ ವಿಜ್ಞಾನಿಯ ಪಯಣವೂ ಇದೇ ತರಹ. ವಿಜ್ಞಾನಿ ಪ್ರಯಾಣಿಸಿದಷ್ಟೂ ಶ್ರೀ ಆದಿ ಶಂಕರಾಚಾರ್ಯರು ಹೇಳಿದಂತೆ “ನೇತಿ ನೇತಿ” ಅಂದರೆ “ಇದು ಅಲ್ಲ ಇದು ಅಲ್ಲ” ಎಂಬುದೇ ಆಗಿರುತ್ತದೆ. ವಿಜ್ಞಾನ ಎಷ್ಟೇ ಮುಂದುವರಿದಿದ್ದಾದರು ಕೆಲವು ಪಾರಮಾರ್ತಿಕ , ದೈವಿಕ, ಅಧ್ಯಾತ್ಮಿಕ ಮತ್ತು ಧಾರ್ಮಿಕ ವಿಸ್ಮಯಯಗಳನ್ನು ಮತ್ತು ನಿಗೂಢ ತತ್ವಗಳನ್ನು (theoritical physics) ವಿಜ್ಞಾನಿಗಳು ನಿರೂಪಿಸಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತದಲ್ಲಿ ಸತ್ಯ ಎಂಬುದು ಶೂನ್ಯ. ಭವಿಷ್ಯದಲ್ಲಿ ಶೂನ್ಯದ ಒಳಗೆ ಸತ್ಯವನ್ನು ಹುಡುಕಿದರೆ ಅಂದೇ “ಆನಂದ”. ಆ ಸುಸ್ಸಮಯ ಬರುತ್ತೆಂಬುದು ನನ್ನ ಆಶಯ.

ಒಬ್ಬ ತಂದೆ ತನ್ನ ಮೂರು ಮಕ್ಕಳಲ್ಲಿ ಎರಡನೆಯವನಾದ ಹದಿಮೂರು ವರ್ಷದ ಬಾಲಕನನ್ನು , ನನ್ನಲ್ಲಿಗೆ ಕರೆತಂದಿದ್ದರು. ಅಪಸ್ಮಾರದಿಂದ ಬಳಲುತ್ತಿದ್ದ ಈತ ಹಲವಾರು ವೈದ್ಯರಿಗೆ ತೋರಿಸಿದ್ದರೂ ಅವನ ಅಪಸ್ಮಾರ ಕಮ್ಮಿ ಆಗಿರಲಿಲ್ಲ. ನನ್ನ ವೃತ್ತಿಯ ಪ್ರಾರಂಭದ ದಿನಗಳಲ್ಲಿ ಅಂತಹ ಇಮೇಜಿಂಗ್ ತಂತ್ರಜ್ಞಾನ ಇರಲಿಲ್ಲ. ಆದರೆ ಇದೇ ತಂತ್ರಜ್ಞಾನ ನಗರಗಳಲ್ಲಿ ಇದ್ದವು. ಆರ್ಥಿಕವಾಗಿ ಬಹುತೇಕ ರೋಗಿಗಳಿಗೆ ನಗರಕ್ಕೆ ಹೋಗಲು ಆಗುತ್ತಿರಲಿಲ್ಲ. ಪಟ್ಟಣಗಳಲ್ಲಿ ನರ ಮತ್ತು ಮಾನಸಿಕ ಕಾಯಿಲೆಗಳನ್ನು ತಿಳಿಯಲು ವೈದ್ಯರಿಗೆ ಆ ಕಾಯಿಲೆಗಳ ಚಿನ್ಹೆ ಮತ್ತು ಲಕ್ಷಣಗಳಿಂದ ಕಂಡುಹಿಡಯಬೇಕಿತ್ತು. ನಾನು ಕಣ್ಣಿನ “ಫಂಡಸ್” ಪರೀಕ್ಷೆಯಿಂದ ಮತ್ತು ಮುಖ ಲಕ್ಷಣಗಳಿಂದ ಆ ಹುಡುಗನ ಅಪಸ್ಮಾರದ ಕಾರಣವನ್ನು ತಿಳಿಯಬೇಕಾಯಿತು. ಆ ಹುಡುಗ “ಟ್ಯೂಬರಸ್ ಸ್ಲೀರೋಸಿಸ್” ರೋಗದಿಂದ ಬಳಲುತ್ತಿರುವನಾಗಿದ್ದ. ಈ ಕಾಯಿಲೆಗಳಲ್ಲಿ ನರ ಮತ್ತು ಚರ್ಮಗಳಲ್ಲಿ ಗಂಟು ಕಟ್ಟುತ್ತವೆ. ಇಂತಹ ಗಂಟುಗಳು ನರ, ಚರ್ಮ, ಕಣ್ಣಿನ ಒಳಗೆ, ಮೆದುಳಿನಲ್ಲಿ ಮತ್ತು ಇತರೆ ಅಂಗಾಗಳಲ್ಲಿ ಕಾಣುವುದು. ಆತನ ಕಾಯಿಲೆಗೆ ಹೊಸ ಹೊಸ ಅಪಸ್ಮಾರದ ಔಷಧ ನೀಡಿದ್ದರು ನಿಯಂತ್ರಣಕ್ಕೆ ಬರುತ್ತಿರಲಿಲ್ಲ. ಅಪಸ್ಮಾರ ಕಡಿಮೆ ಆದರೂ ಮತ್ತೆ ಮತ್ತೆ ಅಪಸ್ಮಾರ ಕಾಣಿಸಿಕೊಳ್ಳುತ್ತಿತ್ತು. ಆದರೆ ಔಷದಕ್ಕೆ ಈತನ ತಂದೆಗೆ ಖರ್ಚಿನ ಮೊಬಲಗು ತುಂಬಾ ಆಗುತ್ತಿತ್ತು. ತಂದೆಗೆ ಮಗನ ಕಾಯಿಲೆಗೆ ಹಣ ಹೊಂದಿಸಲು ತುಂಬ ಕಷ್ಟ ಪಡಬೇಕಿತ್ತು. ತಂದೆ, ಪುರಸಭೆಯ ಸಾಮಾನ್ಯ ಕಾಲಾಳು ಆಗಿದ್ದರು. ಜೀವನ ನೆಡೆಸುವುದು ಇವರಿಗೆ ಕಷ್ಟವಾಗುತ್ತಿತ್ತು. ಇದರ ಜೊತೆಗೆ ತಾಯಿಗೆ ಮಾನಸಿಕ ತೊಂದರೆ ಮತ್ತು ತಂದೆಗೂ ಅಪಸ್ಮಾರ. ಈ ಕಾಯಿಲೆ ವಂಶವಾಹಿನಗಳಿಂದ ಬರುತ್ತೆ ಎಂದು ವೈದ್ಯ ಗ್ರಂಥಗಳಲ್ಲಿ ಉಲ್ಲೇಖಿಸಿದೆ. ಈ ಅಪಸ್ಮಾರ ಹೊಂದಿರುವ ರೋಗಿಗಳು ಕೆಲ ವರ್ಷಗಳು ಮಾತ್ರ ಬದುಕಬಲ್ಲರು.

ನಾನು ಇಲ್ಲಿಯ ಸಮಸ್ಯೆಯನ್ನು ತಿಳಿಸುವ ಉದ್ದೇಶದ ಕಾರಣ ನಾನು ತಿಳಿಸಿದ ಈ ಗಂಟುಗಳು ಕೊಂಬಿನ ದ್ರವ್ಯದಿಂದ ಕೂಡಿದ್ದು ಇಡೀ ಶರೀರದ ಅಂಗಾಗಳಲ್ಲಿ ಕಾಣಿಸಿಕೊಳ್ಳುವುದು ಮತ್ತು ಉಲ್ಭಣಗೊಳ್ಳುವುದು. ಪ್ರಸ್ತುತದಲ್ಲಿ ಈ ಕಾಯಿಲೆಯನ್ನು ಗುಣ ಪಡಿಸಲು ಆಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ವಿಜ್ಞಾನಿಗಳ ಸಂಶೋಧನೆ ಉಪಯುಕ್ತ. ಸಂಶೋಧನೆಗಳಿಂದ ಯಾವುದಾದರು ರೀತಿಯಿಂದ ವಾಸಿ ಆದರೇ ರೋಗಿಗೂ ಆನಂದ ಮತ್ತು ವೈದ್ಯನಿಗೂ ಆನಂದ.

“ಘೇಂಡಾಮೃಗ ಕೊಲ್ಲುವುದನ್ನು ನಿಲ್ಲಿಸಿ”
ಈ ವಾಖ್ಯಾಂಶವನ್ನು ಗಮನಿಸಿ. ಪ್ರಾಣಿಗಳಿಗೆ ಪರಭಕ್ಷಕ ಯಾರಂದರೆ ಮಾನವ. ಮಾನವನ ಆಸೆಗಳಿಗೆ ಮಿತಿ ಇಲ್ಲ. ಒಂದು ವ್ಯತಿರಿಕ್ತ ವಿಚಾರ, ವಿವೇಕವುಳ್ಳ ಮನುಷ್ಯ ಮೃಗನಾಗುವುದಕ್ಕೆ ಅಥವ ತನ್ನ ಪುರಷತ್ವವನ್ನು ಹೆಚ್ಚಿಸಿಕೊಳ್ಳಲು ಘೇಂಡಾಮೃಗವನ್ನು ಬೇಟೆ ಆಡಿ ಪರಭಕ್ಷಕರಿಂದ ರಕ್ಷಿಸಿಕೊಳ್ಳಲು ಇರುವ ಕೊಂಬನ್ನು ಸೇವಿಸುತ್ತಿದ್ದಾನೆ. ಇಂದು ಪ್ರಾಣಿಗಳಿಗೆ ನಮ್ಮ ತರಹ ಕೈ ಮತ್ತು ಬುದ್ದಿ ಇದ್ದಿದ್ದರೆ ಅವುಗಳು ಸಹ ಕತ್ತಿ, ಈಟಿ, ಮಚ್ಚು ಇತ್ಯಾದಿಗಳನ್ನು ಹಿಡಿದು ಮಾನವರನ್ನು ಭೂಮಿಯಿಂದಲೇ ಇಲ್ಲ ಎನ್ನಿಸಿಬಿಡುತ್ತಿದ್ದವು. ಇಲ್ಲಿ ನನ್ನ ವಿರೋಧಾಭಾಸ, ಈ ಸಮಯದಲ್ಲಿ ಕೊಂಬಿನಂತಹ ಅಂಶ (ಟ್ಯೂಬರಸ್ ಸ್ಲಿರೋಸಿಸ್) ಶರೀರದಲ್ಲೇ ನಾ ಹೇಳಿದ ರೋಗಿಗೆ ಇತ್ತಾದರೂ ಆತನ ಪುರಷತ್ವ ವೃದ್ದಿ ಆಗಿತ್ತೇ? ಪಾಪ, ಆತ ಕೆಲಾವರು ವರ್ಷಗಳು ಜೀವನ ನೆಡೆಸಿದ್ದರೇ ಅದೇ ಹೆಚ್ಚು…
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

“ಅಪಸ್ಮಾರ – ಆರ್ಗಾಸ್ಮಿಕ್ ಎಪಿಲೆಪ್ಸಿ – ಜಡತ್ವ – ವೆಲಕಮ್ ವಾತ್ಸಾಯಾನ”

[…] […]