ಸುಮಾರು ಕ್ರಿಸ್ತ ಪೂರ್ವ 300 – 400 ಇಸವಿಯ ಮಧ್ಯಾಂತರದಲ್ಲಿ ಅತೀಂದ್ರಿಯ ತರ್ಕ ಶಾಸ್ತ್ರಜ್ಞನಾದ “ಸಾಕ್ರೆಟೀಸ್” ಗ್ರೀಸ್ ದೇಶದ ಅತೆನ್ಸ್ ಆಸ್ಥಾನದ ಬಹು ದೊಡ್ಡ ಪ್ರತಿಭಾವಂತ, ವಾಗ್ಮಿ, ಪಾಶ್ಚಾತ್ಯ ಗ್ರಂಥಗಳ ಧೀಮಂತ ಮತ್ತು ಆಸ್ಥಾನ ಕವಿ.
ತನ್ನ ಚರ್ಚೆಯ ಉದ್ದ ಅಗಲಕ್ಕೂ “ಒಳ್ಳೆಯ” ತನವನ್ನು ಪ್ರತಿಪಾದಿಸಿದ್ದರು. ಅಲ್ಲಿಯ ರಾಜಕೀಯ ವ್ಯವಸ್ಥೆ, ಇವರ ಮೇಲೆ ಗಂಭೀರ ಆರೋಪ ಹೊರೆಸಿ ತಾನೇ ಖುದ್ದಾಗಿ ವಿಷ ತೆಗೆದುಕೊಳ್ಳುವ ಹಾಗೆ ಮಾಡಿ, ಅಮಾನವೀಯ ರೀತಿಯಲ್ಲಿ ಕೊಂದರು ಎಂಬುದು ಇತಿಹಾಸ.
ಅತ್ಯುನ್ನತ ತರ್ಕ ಶಾಸ್ತ್ರಜ್ಞನಾದ ಸಾಕ್ರೆಟೀಸ್ ಅವರೇ “ಹೆಮ್ಲಾಕ್” ಎಂಬ ಕಠೋರ ವಿಷ ನುಂಗುವಂತಾ ಘೋರ ಅಪರಾಧ ಮಾಡಿದ್ದಾದರೂ ಏನು? ಸಾಕ್ರೆಟೀಸ್ ಜೊತೆಗಿದ್ದ ಯುವಕರ ಮನಸ್ಸಿಗೆ “ಒಳ್ಳೆತನ” ತುಂಬಿದ ಕಾರಣಕ್ಕೆ ಅಂತಹ ಕಠೋರ ಶಿಕ್ಷೆ. ಎಂತಹ ವಿಪರ್ಯಾಸ.
ಅಮೇರಿಕ ಪ್ರಜೆ ಭಾರತೀಯ ಮೂಲದ ಬರಹಗಾರ “ಸಿದ್ದಾರ್ಥ ಮುಖರ್ಜಿಯ” ರಿಗೆ ಅಲ್ಲಿಯ ಪ್ರಸಿದ್ದ ಪತ್ರಕರ್ತ ಇವರಿಗೆ ಪ್ರಶ್ನೆ ಹಾಕಿದ್ದರಂತೆ. “ಡಾಕ್ಟರ್, ತಾವು “ದ ಎಂಪರರ್ ಆಫ್ ಆಲ್ ಮೆಲಡೀಸ್” ಪುಸ್ತಕ ಬರೆದಿದ್ದೀರ. ಈ ಪುಸ್ತಕದ ಫಿಲಾಸಷಿ ತಿಳಿಸುತ್ತೀರ?” ಎಂದು ಕೇಳಿದಾಗ ಅವರು ” ದ ಬೇಸಿಕ್ ಫಿಲಾಸಫಿ ಆಫ್ ಮೈ ಬುಕ್ ಈಸ್ ಟು ಡು ಗುಡ್, ಟು ಸೇ ಗುಡ್ ಅಂಡ್ ಟು ಪ್ರಮೋಟ್ ಗುಡ್” ಎಂದಿದ್ದರಂತೆ. ಅಸಾಧಾರಣ ವ್ಯಕ್ತಿತ್ವ ಉಳ್ಳ ಸಾಕ್ರೆಟೀಸ್ಗೆ ಅಂದಿನ ಅತೆನ್ಸಿನ ಸರ್ವಾಧಿಕಾರಿ ಶಿಕ್ಷೆ ಕೊಟ್ಟಿದ್ದು ಸರಿಯೇ? ಈ ಪ್ರಶ್ನೆ ಬುದ್ದಿವಂತ ಮಾನವನಲ್ಲಿ ಪ್ರಶ್ನೆ ಆಗಿಯೇ ಉಳಿದುಬಿಟ್ಟಿದೆ.

“ತಂತ್ರ” ಯಾರಿಗೂ ಕೆಟ್ಟದ್ದನ್ನು ಬಯಸಲ್ಲ ಅಥವ ಬಯಸುವುದಿಲ್ಲ. ತಂತ್ರದ ಮೂಲ ಚಿಂತನೆ, ವಿಶ್ವ ಪ್ರೇಮ ಮತ್ತು ವಿಶ್ವ ಚೇತನ. ಇವೆರೆಡು ಇಂದು ಇಲ್ಲವಾಗಿದೆ. ನಮ್ಮ ಧ್ಯೇಯ ರಾಜ ಪಥ ಹಿಡಿದು ಮೋಕ್ಷಕ್ಕೆ ಎನ್ನುವುದಾದರೆ “ಒಳ್ಳೆಯ” ನೆಡೆ, ನುಡಿ, ಬಾಳ್ವೆ ಮತ್ತು ಬದುಕು ಇರಬೇಕು ಅಥವ ಕಲಿಯಬೇಕು. ಸಹಮತ, ಸಹಭಾಗಿತ್ವ, ಸಹಬದುಕು ಇತ್ಯಾದಿಗಳನ್ನು ನಾವು ಕಂಡುಕೊಂಡರೆ ಒಳ್ಳೆಯದೇ ಆಗಿರುತ್ತದೆ.
ಗೌತಮ ಬುದ್ಧ ಕಕ್ಕುಲತೆ (ವ್ಯಾಮೋಹ) ಗೆ ಅಂಟುಕೊಂಡು ಇರಲಿಲ್ಲ. ಕೊಡುವುದಕ್ಕೆ ಯಾವ ವಸ್ತು ಸಹ ಇವರ ಹತ್ತಿರ ಇರಲಿಲ್ಲ. ಆದರೂ ಅವರು ಕೋಟ್ಯಂತರ ಅನುಯಾಯಿಗಳನ್ನು ಮತ್ತು ಭಕ್ತರನ್ನು ಹೊಂದಿದ್ದರು. ಇವರಲ್ಲಿ ಇದ್ದಿದ್ದು ಕ್ಷಮೆ, ಕರುಣೆ ಮತ್ತು ಕೃಪೆ. ಇವರ ಚೇತನ ಅತಿ ಪ್ರಕಾಶಮಾನದಿಂದ ಹೊಳೆಯುತ್ತಿತ್ತು. ಇವರು ನೆಡೆದ ದಾರಿ ಬೆಳಕಿನಿಂದ ಕಂಗೊಳಿಸುತ್ತಿತ್ತು. ಇಂತಹ ಗುಣ ಮತ್ತು ಲಕ್ಷಣಗಳನ್ನು ಹೊಂದಿದ್ದ ಗೌತಮ ಬುದ್ಧರಿಗೆ ಭಯ ಮನೆ ಮಾಡಿರಲಿಲ್ಲ.

ಮಹಾಭಾರತ ಪೌರಾಣಿಕ ಅಂತ್ಯದ ಕುರುಕ್ಷೇತ್ರ ಸ್ಥಳದಲ್ಲಿ ಧರ್ಮ ಮತ್ತ ಅಧರ್ಮ ನಡುವೆ ಯುದ್ಧ ಶುರು ಆಗುವ ಕ್ಷಣದ ಮುನ್ನ ಅರ್ಜುನನಿಗೆ ಎಲ್ಲಿಲ್ಲದ ಭಯ ಆವರಿಸಿದನ್ನು ಕಂಡ ಸಾರಥಿ ಶ್ರೀ ಕೃಷ್ಣ ಪರಮಾತ್ಮ “ಎಲವೋ ಮಹಾ ಬಾಹುಗಳ ಪಾರ್ಥ, ನಿನ್ನ ಸಂಕಟವಾದರು ಏನು ತಿಳಿಸುವೆಯಾ?” ಅರ್ಜುನ “ನನಗೆ ನನ್ನ ಮೇಲೆ ಜಿಜ್ಞಾಸೆ ಇದೆ. ದುಃಖ ಇದೆ.
ಭಯ ಇದೆ ಪರಮಾತ್ಮ” ಎಂದು ಹೇಳಿ ತನ್ನ ಬಾಣ ಬತ್ತಳಕೆಯನ್ನು ಕೆಳಗೆ ಇಟ್ಟುಬಿಟ್ಟ. ಇವನ ದುಮ್ಮಾನದ ಕಾರಣ, ತಾನು ತನ್ನ ಬಾಂಧವರನೆಲ್ಲಾ ಕೊಂದು ಪಾಪದ ಹೊರೆ ಹೋರಬೇಕಲ್ಲಾ ಎನ್ನುವ ಮನೋಭಾವ. ಆಗ ಶ್ರೀ ಕೃಷ್ಣ ಪರಮಾತ್ಮ ಅರ್ಜುನನಿಗೆ ಧರ್ಮ ಮತ್ತು ಅಧರ್ಮಗಳ ಮಧ್ಯೆ ಇರುವ ವೆತ್ಯಾಸಗಳನ್ನು ತಿಳಿಸಿ, ಅರ್ಥವನ್ನು ಮಾಡಿಸಿ ಯುದ್ಧ ಪ್ರಾರಂಭವಾಗಲು ತನ್ನ ಪಾಂಚಜನ್ಯದಿಂದ ಶಂಖನಾದಿಸಿ ಕುರುಕ್ಷೇತ್ರ ಯುದ್ಧಕ್ಕೆ ನಾಂದಿ ಹಾಡಿದ ಎಂಬುದು ಪುರಾಣ ಗ್ರಂಥವಾದ ಮಹಾಭಾರತದಲ್ಲಿ ಉಲ್ಲೇಖ ಪಟ್ಟಿದೆ.

ಭಕ್ತನೊಬ್ಬ ಒಮ್ಮೆ “ಶಿವ” ನಿಗೆ ಹೂ ಅರ್ಪಿಸುವ ವಿಚಾರದಲ್ಲಿ ಗೂಂದಲಕ್ಕೆ ಈಡಾಗಿ ಕಾರಣವಿಲ್ಲದ ಭಯಕ್ಕೆ ತುತ್ತಾದ. “ಶಿವ” ಏನು ಕೇಳಿಯಾನು? ಆ ಪರಮಾತ್ಮ ಕೇಳುವುದು ಭಕ್ತಿ ಮಾತ್ರ. ಇದನ್ನು ತಿಳಿಯದ ಭಕ್ತ ನೈದಿಲೆ ಅಥವ ಮಲ್ಲಿಗೆ ಹೂಗಳ ಮಧ್ಯೆ ನಿರಾಸೆ ತಂದುಕೊಂಡ. ತಂತ್ರ ಯೋಗಾನುಸಾರ, ಮನಸ್ಸನ್ನು ಆ ಕಾಲಘಟ್ಟಕ್ಕೆ ಅನುಸಾರವಾಗಿ ಒಂದು ಯೋಚನೆ ಅಥವ ವಿಷಯಕ್ಕೆ ಮನೆ ಮಾಡಿ ಕೊಳ್ಳಬೇಕು. ಎರಡು ಅಥವ ಮೂರು ವಿಚಾರಗಳನ್ನು ಮನಸ್ಸಿನಲ್ಲಿ ತುಂಬಿಸಿದರೆ ಗೊಂದಲ, ದುಮ್ಮಾನ ಮತ್ತು ಖಿನ್ನತೆ ಆವರಿಸುವುದು ಸಹಜ.

“ತಂತ್ರದ ಉದ್ದೇಶ ಸ್ವತಂತ್ರವನ್ನು ಬೆಳೆಸಿಕೊಳ್ಳುವುದು. ಭಯವನ್ನು ಹೇರಿಕೊಳ್ಳುವುದಲ್ಲ. ಸ್ವತಂತ್ರತೆ ಯಾರದ್ದೋ ಹಕ್ಕುಗಳನ್ನು ಕಸಿಯುವುದು ಅಲ್ಲ ಮತ್ತು ಪರರಿಗೆ ಭಯ ಬೀಜ ಬಿತ್ತುವುದೂ ಅಲ್ಲ”
ತಂತ್ರ ಯೋಗ ಪ್ರತಿಪಾದಿಸುವುದು ಸಮಾಜದ ಏಳಿಗೆ, ಮಾನವರ ನೈತಿಕತೆ ಮತ್ತು ಹೊಣೆಗಾರಿಕೆ. ಇದು ಎಂದು ದ್ವಿಗುಣ ಆಗುತ್ತೊ ಅಂದು ಸಮಾಜದಲ್ಲಿ ಸುಖಾನುಭವ ಕಾಣುವುದು. ಆದರೆ ಇಂದು ರಾಜಕೀಯ ವ್ಯವಸ್ಥೆಯಲ್ಲಿ ಎಲ್ಲವೂ ಅಯೋಮಯ. ಯಾರಿಗೂ ಯಾರು ಕೇಳುವುದಿಲ್ಲ ಮತ್ತು ಹೇಳುವುದಿಲ್ಲ. ಸಮಾಜದ ಸ್ವಾಸ್ಥ್ಯ ಹದಗೆಟ್ಟ ಪರಿಸ್ಥಿತಿ ಎದುರಾಗಿದೆ. ಧರ್ಮ, ಪಂತ, ಪಂಗಡ, ಜಾತಿ, ಹಣ, ತೋಳ್ಬಲ, ತುಷ್ಟೀಕರಣ, ಕುಮ್ಮಕ್ಕು, ಸುಳ್ಳು, ಧಗ ಎಲ್ಲವೂ ಇಂದು ಶಾಂತಿ ಎಂಬುದನ್ನು ಮಾಯವಾಗಿಸಿದೆ, ಭಯ ಸೃಷ್ಟಿಸಿದೆ, ಭೀತಿ ಹೆಚ್ಚಿದೆ, ಮನಸ್ತಾಪ ಹೆಚ್ಚಾಗುತ್ತಿದೆ, ಎಲ್ಲೆಲ್ಲೂ ದಂಗೆ ಮತ್ತು ಅಗ್ನಿಸ್ಪರ್ಶ ನೆಡೆಯುತ್ತಿವೆ. ಆದರೆ ಸತ್ಯವನ್ನು ನುಡಿಯುವನು ಯಮಲೋಕ ಪಾಲಾಗುತ್ತಿದ್ದಾನೆ.

ಮೆದುಳೆಂಬ ಯಂತ್ರ, ಸೋಸುವಿಕೆಯ ಪದರಗಳನ್ನು ಹೊಂದಿರುತ್ತದೆ. ತ್ಯಾಜ್ಯ ಹೇಗೆ ಚರಂಡಿಯನ್ನು ಸೇರಬಾರದು ಎಂದು ಅಡಿಗೆಮನೆಯ ತೂಬಿಗೆ ಜರಡಿಯನ್ನು ಹಾಕಿರುತ್ತೇವೊ ಹಾಗೆ ಮನಸ್ಸಿಗೂ ಸಹ ಜರಡಿ ಇದೆ. ಓದಿದ, ತಿಳಿದ ಮತ್ತು ಕೇಳಿದ ಜ್ಞಾನದಿಂದ ನಮಗೆ ಕಾಣದೇ ಇರುವ ಕೆಟ್ಟ ಸಂಕೇತಗಳನ್ನು ವಿವೇಕ ಎಂಬ ಜರಡಿಯಿಂದ ತಡೆದು ನಿಲ್ಲಿಸಿ ಗೊಂದಲ, ಗಾಭರಿ, ಚಡಪಡಿಕೆ, ಇತ್ಯಾದಿಗಳನ್ನು ನಿವಾರಣೆ ಮಾಡುತ್ತದೆ. ಆ ಸೃಷ್ಟಿಕರ್ತ ನಮಗೆ ಬಳುವಳಿಯಾಗಿ “ವಿವೇಕ” ಎಂಬ ಉಪಕರಣವನ್ನು ನೀಡಿದ್ದಾನೆ. ಈ ಉಪಕರಣವನ್ನು ನರವಿಜ್ಞಾನ ಕ್ಷೇತ್ರದಲ್ಲಿ “ಸರ್ವೋ” ಮೆಕಾನಿಸಮ್ ಎಂದು ಕರೆಯುತ್ತಾರೆ. ದೇವರು ದಯಪಾಲಿಸಿದ ಈ ಸಲಕರಣೆಯನ್ನು ನಾವು ಅತಿ ಹೆಚ್ಚು ನಿಗ ವಹಿಸಿ ಕಾಪಾಡಿಕೊಳ್ಳಬೇಕು.
“ತಂತ್ರ ಮೂಲತವಾಗಿ ಮೆದುಳಿನ “ವಿವೇಕ” ಎನ್ನುವ ಯಂತ್ರದಿಂದ ಭಯ ಮತ್ತು ಗೊಂದಲಗಳನ್ನು ವೀಕ್ಷಿಸಲ್ಪಡುತ್ತದೆ. ಕೆಲವೇ ಕೆಲವು ಮೆದುಳುಗಳು ಅವುಗಳನ್ನು ವಿಮರ್ಶಿಸುತ್ತವೆ”.
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ


[…] […]
[…] […]